ADVERTISEMENT

ವ್ಯಕ್ತಿತ್ವ ವಿಕಸನಕ್ಕೆ ಕಲೆ ಸಹಕಾರಿ: ಈಶ್ವರ ಖಂಡ್ರೆ ಅಭಿಮತ

ನೂಪುರ ವಿಂಶತಿ ನೃತ್ಯೋತ್ಸವ

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 10:01 IST
Last Updated 7 ಜನವರಿ 2020, 10:01 IST
ಬೀದರ್‌ನ ಜಿಲ್ಲಾ ರಂಗಮಂದಿರದಲ್ಲಿ ನೂಪುರ ನೃತ್ಯ ಅಕಾಡೆಮಿಯ 20ನೇ ವಾರ್ಷಿಕೋತ್ಸವದ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ನೂಪುರ ವಿಂಶತಿ ನೃತ್ಯೋತ್ಸವದಲ್ಲಿ ಭಾರತ ಮಾತೆಗೆ ನೃತ್ಯ ನಮನ ಸಲ್ಲಿಸಲಾಯಿತು
ಬೀದರ್‌ನ ಜಿಲ್ಲಾ ರಂಗಮಂದಿರದಲ್ಲಿ ನೂಪುರ ನೃತ್ಯ ಅಕಾಡೆಮಿಯ 20ನೇ ವಾರ್ಷಿಕೋತ್ಸವದ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ನೂಪುರ ವಿಂಶತಿ ನೃತ್ಯೋತ್ಸವದಲ್ಲಿ ಭಾರತ ಮಾತೆಗೆ ನೃತ್ಯ ನಮನ ಸಲ್ಲಿಸಲಾಯಿತು   

ಬೀದರ್: ‘ನೃತ್ಯ, ಸಾಹಿತ್ಯ, ಸಂಗೀತ ಕಲೆಗಳು ಕಲಾವಿದರ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತವೆ’ ಎಂದು ಶಾಸಕ ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ರಂಗಮಂದಿರದಲ್ಲಿ ನೂಪುರ ನೃತ್ಯ ಅಕಾಡೆಮಿಯ 20ನೇ ವಾರ್ಷಿಕೋತ್ಸವದ ಪ್ರಯುಕ್ತ ಭಾನುವಾರ ಆಯೋಜಿಸಿದ್ದ ನೂಪುರ ವಿಂಶತಿ ನೃತ್ಯೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ನೃತ್ಯದಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಬಹುದು. ನೃತ್ಯದ ವಿವಿಧ ಭಂಗಿಗಳು ಯೋಗಾಸನಕ್ಕಿಂತ ಭಿನ್ನವಾಗಿರುವುದಿಲ್ಲ. ಅದು ಸಂಗೀತವನ್ನು ಒಳಗೊಂಡಿರುವುದರಿಂದ ಕಿವಿಗೆ ಹಿತವಾದ ಅನುಭವ ನೀಡುವುದು ಹಾಗೂ ಆರೋಗ್ಯ ಸಮತೋಲನದಲ್ಲಿರುತ್ತದೆ’ ಎಂದು ಹೇಳಿದರು.

ADVERTISEMENT

‘ನೂಪುರ ನೃತ್ಯ ಅಕಾಡೆಮಿಯ ಉಷಾ ಪ್ರಭಾಕರ ಕಳೆದ 20 ವರ್ಷಗಳಿಂದ ಜಿಲ್ಲೆಯ ಕಲಾವಿದರನ್ನು ಗುರುತಿಸಿ ರಾಜ್ಯ, ಅಂತರರಾಜ್ಯಗಳಲ್ಲಿ ವೇದಿಕೆಗಳನ್ನು ಒದಗಿಸಿಕೊಟ್ಟಿರುವುದು ಅಭಿನಂದನಾರ್ಹವಾಗಿದೆ’ ಎಂದು ತಿಳಿಸಿದರು.

ಕುಂದಾಪುರದ ಪಾರ್ವತಿ ಐತಾಳ ಮಾತನಾಡಿ,‘ಪೋಷಕರು ತಮ್ಮ ಮಕ್ಕಳಿಗೆ ಸಂಗೀತ, ನೃತ್ಯ, ನಾಟಕಗಳಂತಹ ಲಲಿತ ಕಲೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಬೇಕು’ ಎಂದರು.

ಮಾಣಿಕಪ್ರಭು ಸಂಸ್ಥಾನದ ಶ್ರೀ ಆನಂದರಾಜ ಮಾಣಿಕಪ್ರಭು ಮಾತನಾಡಿ,‘ಕಲೆಯಿಂದ ಮನುಷ್ಯನು ಉನ್ನತ ಮಟ್ಟಕ್ಕೆ ಏರಲು ಸಾಧ್ಯವಾಗುತ್ತದೆ. ಅಲ್ಲದೇ ಉತ್ತಮ ಆರೋಗ್ಯ ಪಡೆದುಕೊಳ್ಳಬಹುದು’ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಮಾಸಿಮಾಡೆ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಮುಖಂಡ ಈಶ್ವರಸಿಂಗ್ ಠಾಕೂರ, ಡಿ.ಸಿ.ಸಿ. ಬ್ಯಾಂಕ್‌ ಪ್ರಧಾನ ವ್ಯವಸ್ಥಾಪಕ ವಿಠ್ಠಲರೆಡ್ಡಿ ಎಡಮಲ್ಲೆ, ನೂಪುರ ನಿನಾದ ಗೌರವ ಸಂಪಾದಕ ವೀಣಾ ಶಣೈ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ ಇದ್ದರು.

ಮಹಿಳೆಯರು ಗುಜರಾತಿ, ದಾಂಡೀಯ ಹಾಗೂ ಜಾನಪದ ನೃತ್ಯ ರೂಪಕ, ಕೃಷ್ಣಲೀಲೆ, ರಾಮಾಯಣ ಕಥಾ ಪ್ರದರ್ಶಿಸಿದರು.

ಭಾರತ ಮಾತೆಗೆ ನೃತ್ಯ ನಮನ, ಮಣಿಪುರಿ ಹಾಗೂ ಗುಜರಾತಿ ನೃತ್ಯದ ಫ್ಯೂಶನ್, ಒಡಿಸ್ಸಿ ನೃತ್ಯ, ಸೂರ್ಯ ನಮನ ನೃತ್ಯ, ಜಾನಪದ ನೃತ್ಯ, ಭರತ ನಾಟ್ಯದಲ್ಲಿ ವೈವಿಧ್ಯತೆಯ ನೃತ್ಯಗಳು ಬಸವಣ್ಣವನ ವಚನಗಳ ಮೇಲೆ ನೃತ್ಯ ಮರಾಠಿ ನೃತ್ಯ ಹಾಗೂ ಗುಜರಾತಿ ಗರ್ಭ ನೃತ್ಯ, ಸಿದ್ದಗಂಗಾ ಶ್ರೀಗಳಿಗೆ ನೃತ್ಯ ನಮನ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.