ADVERTISEMENT

ಬೀದರ್ | ಬಲೂನ್‌ ಹಾರಿಸಿ ದಸರಾ ಸಿಎಂ ಕಪ್‌ ಕ್ರೀಡಾಕೂಟಕ್ಕೆ ಸಚಿವ ಖಂಡ್ರೆ ಚಾಲನೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 5:07 IST
Last Updated 9 ಸೆಪ್ಟೆಂಬರ್ 2025, 5:07 IST
   

ಬೀದರ್‌: ಪ್ರಸಕ್ತ ಸಾಲಿನ ಬೀದರ್‌ ಜಿಲ್ಲಾಮಟ್ಟದ ದಸರಾ ಸಿಎಂ ಕಪ್‌ ಕ್ರೀಡಾಕೂಟಕ್ಕೆ ನಗರದ ನೆಹರೂ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಚಾಲನೆ ನೀಡಲಾಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಕ್ರೀಡಾಕೂಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಬಲೂನ್‌ ಹಾರಿಸಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಕ್ರೀಡೆ ಶಿಸ್ತು, ಶ್ರಮ ಮತ್ತು ಆತ್ಮವಿಶ್ವಾಸದ ಪಾಠ ಕಲಿಸುವ ಅತ್ಯುತ್ತಮ ವೇದಿಕೆ. ಯುವಜನರು ತಮ್ಮಲ್ಲಿರುವ ಕೌಶಲ, ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಹೊರತರುವುದಕ್ಕೆ ಇಂತಹ ಕ್ರೀಡಾಕೂಟಗಳು ದೊಡ್ಡ ಅವಕಾಶ. ದಸರಾ ಸಿಎಂ ಕಪ್ ಕ್ರೀಡಾಕೂಟವು ಗ್ರಾಮೀಣ ಹಾಗೂ ನಗರ ಪ್ರದೇಶಗಳ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟಕ್ಕೆ ತಲುಪಿಸಲು ಸೇತುವೆಯಾಗಲಿದೆ ಎಂದು ಹೇಳಿದರು. 

ಕ್ರೀಡಾ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲಾಗುವುದು. ಬೀದರ್‌ ನಗರದಲ್ಲಿ ₹25 ಕೋಟಿ ವೆಚ್ಚದಲ್ಲಿ 10 ಎಕರೆ ಭೂಮಿಯಲ್ಲಿ ನೂತನ ಜಿಲ್ಲಾ ಕ್ರೀಡಾಂಗಣ ನಿರ್ಮಾಣ ಮಾಡಲಾಗುವುದು ಎಂದರು.

ADVERTISEMENT

ಕಳೆದ ಹಲವಾರು ವರ್ಷಗಳಿಂದ ಬೀದರ್‌ ನಗರದಲ್ಲಿ ರಾಷ್ಟ್ರಮಟ್ಟದ ಕ್ರೀಡಾಂಗಣ ನಿರ್ಮಿಸಬೇಕೆಂಬ ಬೇಡಿಕೆಯಿದೆ.  ಇದಕ್ಕಾಗಿ 10 ಎಕರೆ ಜಮೀನು ಗುರುತಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ವಿಶ್ವವಿಖ್ಯಾತ ನಾಡಹಬ್ಬ ದಸರಾ ಅಂಗವಾಗಿ ದಸರಾ ಸಿಎಂ ಕಪ್ ಕ್ರೀಡಾಕೂಟ ಆಯೋಜಿಸಲಾಗಿದೆ. ಎಲ್ಲಾ ಮಕ್ಕಳು ಭಾಗವಹಿಸಿದ್ದು ಸಂತೋಷದ ವಿಷಯ. ಪಾಠದ ಜೊತೆಗೆ ಕ್ರೀಡೆ ಬಹಳ ಮುಖ್ಯ. ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮಗೊಳ್ಳುತ್ತದೆ.  ಎಂದರು. ಕ್ರೀಡೆಯಲ್ಲಿ ಅನೇಕರು ಸಾಧನೆ ಮಾಡಿದ್ದಾರೆ. ಮೇಜರ್ ಧ್ಯಾನಚಂದ್, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಮೇರಿ ಕೋಮ್, ಪಿ.ವಿ. ಸಿಂಧು ಮುಂತಾದವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ ಎಂದರು.

ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಎಸ್. ಮತ್ತಿತರರು ಇದ್ದರು.

ಕಬಡ್ಡಿಯಲ್ಲಿ ಭಾಲ್ಕಿ ತಾಲ್ಲೂಕಿನ ಜ್ಯಾಂತಿ ತಂಡವನ್ನು ಮಣಿಸಿ ಸಂಭ್ರಮಿಸಿದ ಔರಾದ್‌ ತಂಡದ ವನಿತೆಯರು
ಗುರಿ ತಲುಪಲು ಪೈಪೋಟಿಯ ಓಟ
ವನಿತೆಯರ ಕಬಡ್ಡಿ ಆಟದ ಝಲಕ್‌
ಬಾಲಕಿಯರ ವಿಭಾಗದ ಖೋ ಖೋ ಸ್ಪರ್ಧೆ
ಪುರುಷರ ವಿಭಾಗದ ಕಬಡ್ಡಿ ಸ್ಪರ್ಧೆ –ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ

ಉತ್ಸಾಹದ ಪೈಪೋಟಿ ಬೀದರ್‌ ಜಿಲ್ಲಾಮಟ್ಟದ ದಸರಾ ಸಿಎಂ ಕಪ್‌ ಕ್ರೀಡಾಕೂಟದ ಮೊದಲ ದಿನ ಜಿಲ್ಲೆಯ ವಿವಿಧ ಭಾಗದ ಕ್ರೀಡಾಪಟುಗಳು ಉತ್ಸಾಹದಿಂದ ಭಾಗವಹಿಸಿ ಅವರ ಸಾಮರ್ಥ್ಯ ಒರೆಗೆ ಹಚ್ಚಿದರು. ಅಥ್ಲೆಟಿಕ್ಸ್‌ ಕಬಡ್ಡಿ ಖೋ ಖೋ ಸ್ಪರ್ಧೆಯಲ್ಲಿ ಮಹಿಳೆಯರು ಹಾಗೂ ಪುರುಷರು ಹುರುಪಿನಿಂದ ಭಾಗವಹಿಸಿ ಪ್ರಶಸ್ತಿ ಗೆಲ್ಲುವುದಕ್ಕಾಗಿ ಅವಿರತ ಶ್ರಮಿಸಿದರು. ಮಂಗಳವಾರ ಎರಡನೇ ದಿನವೂ ವಿವಿಧ ಕ್ರೀಡೆಗಳು ನಡೆಯಲಿದ್ದು ಸಂಜೆ ವಿಜೇತರ ಹೆಸರುಗಳು ಘೋಷಣೆಯಾಗಲಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.