ಬೀದರ್‌ನ ಚೌಬಾರ ಸಮೀಪದ ರಾಜು ಗೋಕುಲದಾಸ್ ಮೇದಾ ಅವರ ಮಳಿಗೆಯಲ್ಲಿ ಗಾಳಿಪಟ ಖರೀದಿಸುತ್ತಿರುವುದು
-ಪ್ರಜಾವಾಣಿ ಚಿತ್ರ: ಲೋಕೇಶ ವಿ. ಬಿರಾದಾರ
ಬೀದರ್: ದಸರಾ ಬಂತೆಂದರೆ ಆಕಾಶಕ್ಕೆ ತಳಿರು ತೋರಣ ಕಟ್ಟಿದಂತಿರುತ್ತಿತ್ತು. ಬಗೆಬಗೆ ಬಣ್ಣ ಹಾಗೂ ವಿನ್ಯಾಸದ ಪಟಗಳು ಎಲ್ಲರ ಗಮನ ಸೆಳೆಯುತ್ತಿದ್ದವು. ಪ್ರತಿಯೊಂದು ಮನೆಯ ಮಾಳಿಗೆಯ ಮೇಲೆ ಪತಂಗ ಹಾರಿಸುತ್ತ ಸಂಭ್ರಮಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಆದರೆ, ಕಳೆದ ಕೆಲವು ವರ್ಷಗಳಿಂದ ಇದೆಲ್ಲ ಕಣ್ಮರೆಯಾಗಿದೆ. ಅಲ್ಲೋ, ಇಲ್ಲೋ ಎಂಬಂತೆ ಬಹಳ ಅಪರೂಪಕ್ಕೆ ಕೆಲವರು ಅಲ್ಲಲ್ಲಿ ಗಾಳಿಪಟ ಹಾರಿಸುತ್ತಿದ್ದಾರೆ. ಆ ಹಿಂದಿನ ವೈಭವ ಈಗ ಬಹುತೇಕ ಮರೆಯಾಗಿದೆ.
ಆಧುನಿಕತೆಯ ಭರಾಟೆಯಲ್ಲಿ ಜಾನಪದ ಕಲಾ ಪ್ರಕಾರಗಳು, ನಮ್ಮ ಸಂಪ್ರದಾಯ, ಆಚರಣೆಗಳು , ಗ್ರಾಮೀಣ ಕ್ರೀಡೆಗಳು ಹೀಗೆ ಒಂದೊಂದೇ ನಶಿಸಿ ಹೋಗುತ್ತಿವೆ. ಅದಕ್ಕೆ ಗಾಳಿಪಟ ಹಾರಿಸುವ ಸಂಪ್ರದಾಯವೂ ಸೇರಿಕೊಳ್ಳುತ್ತಿದೆ.
ದಶಕದ ಹಿಂದೆ ದಸರಾಗೂ ಮುಂಚೆ ಆರಂಭಗೊಳ್ಳುತ್ತಿದ್ದ ಗಾಳಿಪಟ ಹಾರಿಸುವ ಸಂಭ್ರಮ ದೀಪಾವಳಿ ಹಬ್ಬ ಕೊನೆಗೊಳ್ಳುವವರೆಗೂ ಇರುತ್ತಿತ್ತು. ಈಗ ಆ ಸಂಭ್ರಮ ಬಹುತೇಕ ಕಣ್ಮರೆಯಾಗಿದೆ.
ಎಲ್ಲ ವಯಸ್ಸಿನವರು ಸಂಭ್ರಮದಿಂದ ಹಿಂದೆ ಗಾಳಿಪಟಗಳನ್ನು ಹಾರಿಸುತ್ತಿದ್ದರು. ಸಂಜೆ ನಾಲ್ಕರ ನಂತರವಂತೂ ಆಕಾಶದಲ್ಲಿ ಪತಂಗಗಳದ್ದೇ ಕಾರುಬಾರು ಕಂಡು ಬರುತ್ತಿತ್ತು. ಅನೇಕರು ‘ಪೇಂಚ್’ ನೋಡಿ ಖುಷಿ ಪಡುತ್ತಿದ್ದರು. ಅವರೊಂದಿಗೆ ಮಾಳಿಗೆಯ ಮೇಲಿರುತ್ತಿದ್ದ ಸ್ನೇಹಿತರು, ಕುಟುಂಬ ಸದಸ್ಯರು ಕೇಕೆ ಹಾಕಿ, ಶಿಳ್ಳೆ ಹೊಡೆದು ಸಂಭ್ರಮಿಸುತ್ತಿದ್ದರು. ‘ಪೇಂಚ್’ ಬಿದ್ದಾಗ ಸೂತ್ರದಿಂದ ಕಟ್ ಆಗಿ ಕೆಳಗೆ ಬೀಳುತ್ತಿದ್ದ ಗಾಳಿಪಟಗಳನ್ನು ಹಿಡಿಯಲು ಮಕ್ಕಳು, ಯುವಕರ ದಂಡೇ ರಸ್ತೆಗುಂಟ ಇರುತ್ತಿತ್ತು. ಗಾಳಿಪಟ ಕಡಿದು ಎಷ್ಟೇ ದೂರ ಹೋಗಿ ಬಿದ್ದರೂ ಅದನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದರು. ಪ್ರತಿಯೊಂದು ಗಲ್ಲಿಗಳಲ್ಲಿ ಈ ದೃಶ್ಯ ಹಿಂದೆಲ್ಲ ಸಾಮಾನ್ಯವಾಗಿತ್ತು.
ಒಬ್ಬೊಬ್ಬರು ಹತ್ತರಿಂದ ಹದಿನೈದು ಗಾಳಿಪಟಗಳನ್ನು ‘ಪೇಂಚ್’ ಮೂಲಕ ಕಟ್ ಮಾಡಿ ಹೆಮ್ಮೆ ಪಡುತ್ತಿದ್ದರು. ಒಬ್ಬರನ್ನು ಮೀರಿಸಲು ಮತ್ತೊಬ್ಬರು ಪ್ರಯತ್ನಿಸುತ್ತಿದ್ದರು. ಎಲ್ಲವೂ ಕ್ರೀಡಾ ಮನೋಭಾವದಿಂದ ಸ್ವೀಕರಿಸುತ್ತಿದ್ದರು. ಯಾರೂ ಕೂಡ ದ್ವೇಷ ಸಾಧಿಸುತ್ತಿರಲಿಲ್ಲ. ಆಟದಲ್ಲಿ ಗೆಲ್ಲಬೇಕೆಂಬ ಮನೋಭಾವದಿಂದ ಎಲ್ಲೆಲ್ಲಿಂದಲೋ ‘ಮಾಂಜಾ’ ತರುತ್ತಿದ್ದರು. ತನ್ನ ಯಾರೂ ಮೀರಿಸದಿರಲೆಂದು ‘ಮಾಂಜಾ’ ತಂದ ಸ್ಥಳವನ್ನು ಗೌಪ್ಯವಾಗಿ ಇಡುತ್ತಿದ್ದರು. ಅತಿ ಆತ್ಮೀಯರೊಂದಿಗೆ ಮಾತ್ರ ಆ ಸ್ಥಳದ ವಿವರ ಹಂಚಿಕೊಳ್ಳುತ್ತಿದ್ದರು. ಉತ್ತಮವಾದ ‘ಮಾಂಜಾ’ಕ್ಕೆ ಭಾರಿ ಬೇಡಿಕೆ ಇತ್ತು. ಬೆಲೆಯೂ ತುಸು ದುಬಾರಿಯಾಗಿರುತ್ತಿತ್ತು.
ದಸರಾ ಹಬ್ಬಕ್ಕೂ ಮುನ್ನವೇ ಹಲವರು ಮಾಂಜಾ ತಯಾರಿಸುತ್ತಿದ್ದರು. ಅದರೊಂದಿಗೆ ಕಾಗದ ಹಾಗೂ ಬಿದಿರಿನಿಂದ ಬಗೆಬಗೆಯ ಗಾಳಿಪಟಗಳನ್ನು ಸಿದ್ಧಪಡಿಸುತ್ತಿದ್ದರು. ನಗರದ ಸಿದ್ಧಿ ತಾಲೀಮ್‌ನಿಂದ ಚೌಬಾರ ಮುಖ್ಯರಸ್ತೆಯುದ್ದಕ್ಕೂ ಗಾಳಿಪಟ ಮಳಿಗೆಗಳು ಎಲ್ಲರನ್ನೂ ಆಕರ್ಷಿಸುತ್ತಿದ್ದವು. ಬೆಳಗಿನಿಂದ ಸಂಜೆ ವರೆಗೆ ಗಾಳಿಪಟ ಖರೀದಿಸಲು ಜನಜಂಗುಳಿ ಇರುತ್ತಿತ್ತು. ಈಗ ಅದೆಲ್ಲ ನೆನಪು ಮಾತ್ರ.
ಈಗ ಚೌಬಾರ ರಸ್ತೆಯಲ್ಲಿರುವ ಬಹುತೇಕ ಮಳಿಗೆಗಳು ಬಂದ್ ಆಗಿವೆ. ಕೆಲವೇ ಕೆಲವರು ಅಲ್ಲಿದ್ದು, ಅವರ್‍ಯಾರೂ ಕೂಡ ಗಾಳಿಪಟ, ಮಾಂಜಾ ಯಾವುದೂ ಕೂಡ ಮಾಡುತ್ತಿಲ್ಲ. ಹೈದರಾಬಾದ್ ಸೇರಿದಂತೆ ಇತರೆ ಮಹಾನಗರಗಳಿಂದ ಪ್ಲಾಸ್ಟಿಕ್ ಗಾಳಿಪಟಗಳನ್ನು ಆಮದು ಮಾಡಿಕೊಂಡು ಮಾರಾಟ ಮಾಡುತ್ತಿದ್ದಾರೆ. ಆದರೆ, ಅದಕ್ಕೂ ಬೇಡಿಕೆ ಹೇಳಿಕೊಳ್ಳುವಂತಿಲ್ಲ. ಇದು ಅವರ ಉಪಜೀವನಕ್ಕೆ ಸಾಕಾಗುತ್ತಿಲ್ಲ. ಹೀಗಾಗಿಯೇ ಅವರು ತಮ್ಮ ಸಂಪ್ರದಾಯಿಕ ವೃತ್ತಿ ಬಿಟ್ಟು ಬೇರೆಡೆ ಮುಖ ಮಾಡಿದ್ದಾರೆ.
‘ಬೇಡಿಕೆ ಅಷ್ಟಾಗಿ ಇಲ್ಲ’
‘ಕಳೆದ ಹತ್ತು ಹದಿನೈದು ವರ್ಷಗಳಿಂದ ಗಾಳಿಪಟ ಹಾರಿಸುವವರ ಸಂಖ್ಯೆ ಬಹಳ ಕಡಿಮೆಯಾಗಿದೆ. ಖರೀದಿಸುವವರೇ ಇಲ್ಲದ ಕಾರಣ ನಾವು ಗಾಳಿಪಟ ಮಾಂಜಾ ಏನೂ ಮಾಡುತ್ತಿಲ್ಲ. ಹಳೆಯ ಕೆಲಸ ಬಿಡಬಾರದು ಎಂಬ ಕಾರಣಕ್ಕಾಗಿ ಪ್ಲಾಸ್ಟಿಕ್ ಗಾಳಿಪಟ ತರಿಸಿಕೊಂಡು ಮಾರುತ್ತಿದ್ದೇವೆ. ಇದಕ್ಕೂ ಬೇಡಿಕೆ ಅಷ್ಟಾಗಿ ಇಲ್ಲ’ ಎಂದು ಚೌಬಾರ ಸಮೀಪ ಗಾಳಿಪಟ ಮಳಿಗೆ ಹೊಂದಿರುವ ರಾಜು ಗೋಕುಲದಾಸ್ ಮೇದಾ ‘ಪ್ರಜಾವಾಣಿ’ಗೆ ತಿಳಿಸಿದರು.
‘ಹಿಂದೆಲ್ಲ ದಿನಕ್ಕೆ 500 ಗಾಳಿಪಟಗಳು ಮಾರಾಟವಾಗುತ್ತಿದ್ದವು. ಮಾಂಜಾ ಕೂಡ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿದ್ದರು. ಈಗ ದಿನಕ್ಕೆ 50 ಗಾಳಿಪಟಗಳು ಮಾರಾಟವಾದರೆ ಹೆಚ್ಚು. ಈಗ ಬಿದಿರಿನ ಇತರೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದೇವೆ. ನಮ್ಮ ಹೊಸ ತಲೆಮಾರಿಗೂ ನಮ್ಮ ಕೆಲಸದ ಬಗ್ಗೆ ಹೆಚ್ಚಿನ ಆಸಕ್ತಿ ಇಲ್ಲ’ ಎಂದು ಹೇಳಿದರು.
ಉತ್ಸಾಹ ಕುಗ್ಗಲು ಕಾರಣ...
ಕಳೆದ ಎರಡು ದಶಕಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಹಿಂದೆಲ್ಲ ಗಾಳಿಪಟ ಹಾರಿಸುವುದು ಜೀವನದ ಒಂದು ಭಾಗವಾಗಿತ್ತು. ಆದರೆ ಬರುಬರುತ್ತ ಅದು ದೂರವಾಗುತ್ತಿದೆ. ಈಗ ಶಾಲಾ–ಕಾಲೇಜಿಗೆ ಹೋಗುವವರು ಆಟೋಟಗಳಲ್ಲಿ ಭಾಗವಹಿಸುತ್ತಿಲ್ಲ. ಬೆಳಿಗ್ಗೆಯಿಂದ ಸಂಜೆಯ ತನಕ ಶಾಲೆಗಳಲ್ಲಿ ಸಮಯ ಕಳೆಯುತ್ತಾರೆ. ಸಂಜೆಯಿಂದ ರಾತ್ರಿ ತನಕ ಟ್ಯೂಷನ್‌ನಲ್ಲಿರುತ್ತಾರೆ. ಅಥವಾ ಟಿವಿ ಮೊಬೈಲ್‌ಗಳಲ್ಲಿ ವ್ಯಸ್ತರಾಗಿರುತ್ತಾರೆ. ಹೆಚ್ಚಿನ ಪೋಷಕರು ದೈಹಿಕ ಚಟುವಟಿಕೆಗಳಿಗಿಂತ ಮಕ್ಕಳ ಓದಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಿದ್ದಾರೆ.
ಇನ್ನು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ದೈನಂದಿನ ಕಾರ್ಯದ ಒತ್ತಡ ಹೆಚ್ಚಾಗಿದೆ. ಬಹುತೇಕರಿಗೆ ಅದನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಇನ್ನು ಮೊಬೈಲ್‌ನಲ್ಲಿ ಹೆಚ್ಚಿನ ಸಮಯ ವ್ಯಯವಾಗುತ್ತಿದೆ. ಗಾಳಿಪಟ ಸೇರಿದಂತೆ ಇತರೆ ಚಟುವಟಿಕೆಗಳಿಂದ ದೂರ ಉಳಿಯಲು ಮುಖ್ಯ ಕಾರಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.