
ಬಸವಕಲ್ಯಾಣ: ತಾಲ್ಲೂಕಿನ ನಾರಾಯಣಪುರವಾಡಿ ಗ್ರಾಮ ವ್ಯಾಪ್ತಿಯ ರಾಜೋಳಾ ರಸ್ತೆಯಲ್ಲಿನ ಅರಣ್ಯ ಪ್ರದೇಶಕ್ಕೆ ಹತ್ತಿಕೊಂಡಿರುವ ದತ್ತಾತ್ರೇಯ ಪಾದುಕಾ ಮಂದಿರದಲ್ಲಿ ಗುರುವಾರ ದತ್ತಾತ್ರೇಯ ಮೂರ್ತಿ ಹಾಗೂ ಅನಘಾಲಕ್ಷ್ಮಿ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನಾ ಕಾರ್ಯ ಭಕ್ತಿಭಾವ, ಸಂಭ್ರಮದಿಂದ ನೆರವೆರಿತು.
ಬೆಟಬಾಲ್ಕುಂದಾ ದತ್ತಾತ್ರೇಯ ಮಂದಿರ ಟ್ರಸ್ಟ್ ಪ್ರಮುಖರಾದ ಬಸವರಾಜ ಮಹಾರಾಜ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಚಟುವಟಿಕೆಗಳು ಜರುಗಿದವು. ಸಸ್ತಾಪುರ ಶಿವಲಿಂಗೇಶ್ವರ ಮಠದ ಸದಾನಂದ ಸ್ವಾಮೀಜಿ ವಿಧಿವತ್ತಾಗಿ ಪ್ರತಿಷ್ಠಾಪನಾ ಕಾರ್ಯ ಕೈಗೊಂಡರು. ಹೋಮ, ಕಲಶಪೂಜೆ, ಮೂರ್ತಿಗಳಿಗೆ ವಸ್ತ್ರಾಲಂಕಾರ, ಪುಷ್ಪಾರ್ಚನೆ, ನೈವೇದ್ಯ, ತೆಂಗು, ಕರ್ಪೂರ ಅರ್ಪಣೆ ನಡೆಯಿತು. ‘ಬ್ರಹ್ಮವಿಷ್ಣು ಮಹೇಶ್ವರಾ, ಶ್ರೀಪಾದವಲ್ಲಭ ದಿಗಂಬರಾ’ ಎಂಬ ನಾಮಜಪ ಮಾಡಲಾಯಿತು.
ಹುಗ್ಗಿ, ಅನ್ನ ಸಾಂಬಾರಿನ ಅನ್ನಸಂತರ್ಪಣೆ ಕೈಗೊಳ್ಳಲಾಯಿತು. ಭೂದಾನಿಗಳಾದ ಮಹೇಶರೆಡ್ಡಿ ಮಲ್ಲರೆಡ್ಡಿ ಭೋಗಲೆ ಹಾಗೂ ಗಣ್ಯರ, ಸಾಧಕರ ಸನ್ಮಾನ ನಡೆಯಿತು. ಪ್ರಮುಖರಾದ ಅಂಬಾರಾಯ ಸೈದಾಪುರೆ, ಪ್ರಶಾಂತ ಪಾಠಕ, ಮಹಾದೇವ ಬಿರಾದಾರ, ಸುಭಾಷ ಮಂಠಾಳೆ, ಶುಭಂ ಹರಗಾಂವಕರ, ಜಗದೇವಿ ಮಂಠಾಳೆ, ಮನೋಹರರಾವ ರೇಣಕೆ, ಔದುಂಬರರಾವ ಘುಗರೆ, ಶಿವಪ್ಪ ಶಿಂಧೆ ಉಪಸ್ಥಿತರಿದ್ದರು.
ನಾರಾಯಣಪುರವಾಡಿ ಮತ್ತು ಬೇಲೂರ ಭಜನಾ ತಂಡಗಳಿಂದ ಇಡೀ ದಿನ ಭಜನೆ ನಡೆಯಿತು. ಬಸವಕಲ್ಯಾಣ, ಬೆಟಬಾಲ್ಕುಂದಾ, ನಾರಾಯಣಪುರ, ಕಿಟ್ಟಾ, ರಾಜೋಳಾ, ಹುಲಗುತ್ತಿ, ಯದ್ಲಾಪುರ, ಶಿವಪುರ ಮುಂತಾದೆಡೆಯ ಭಕ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.