ADVERTISEMENT

ಬೀದರ್ | 'ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಿಂದ ಮಾನಸಿಕ ಹಿಂಸೆ'

ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಡಿ.ಕೆ. ಸಿದ್ರಾಮ ಆರೋಪ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2025, 4:28 IST
Last Updated 11 ಮಾರ್ಚ್ 2025, 4:28 IST
ಡಿ.ಕೆ. ಸಿದ್ರಾಮ
ಡಿ.ಕೆ. ಸಿದ್ರಾಮ   

ಬೀದರ್: ‘ರಾಜಕೀಯ ದುರುದ್ದೇಶದಿಂದ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಅಮರ್‌ ಖಂಡ್ರೆಯವರು ನನಗೆ ನಿತ್ಯ ಕಾಟ ಕೊಡುತ್ತಿದ್ದಾರೆ. ಶನಿವಾರವಿರಲಿ, ಭಾನುವಾರವಿರಲಿ ಅಧಿಕಾರಿಗಳನ್ನು ಕಳಿಸಿ ಅವರ ಮೂಲಕ ಮಾನಸಿಕ ಹಿಂಸೆ ಕೊಡುತ್ತಿದ್ದಾರೆ’ ಎಂದು ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ (ಎನ್‌ಎಸ್‌ಎಸ್‌ಕೆ) ಅಧ್ಯಕ್ಷ ಡಿ.ಕೆ. ಸಿದ್ರಾಮ ಆರೋಪಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎನ್‌ಎಸ್‌ಎಸ್‌ಕೆ ಸದ್ಯ ಜಿಲ್ಲೆಯಲ್ಲಿ ನಂಬರ್‌ ಒನ್‌ ಸ್ಥಾನದಲ್ಲಿದೆ. ಈಗಲೂ ಎಲ್ಲ ಯಂತ್ರಗಳು ಸುಸ್ಥಿತಿಯಲ್ಲಿವೆ. ಉತ್ತಮ ಕಾರ್ಮಿಕರಿದ್ದಾರೆ. ಸಾಲದ ಹೊರೆ ಬಿಟ್ಟರೆ ಬೇರೇನೂ ಸಮಸ್ಯೆ ಇಲ್ಲ. ಆದರೆ, ರಾಜಕೀಯ ಕಾರಣಕ್ಕಾಗಿ ಸಂಸ್ಥೆ ಹಾಳುಗೆಡವಲು ಯತ್ನಿಸುತ್ತಿದ್ದಾರೆ’ ಎಂದು ಆರೋಪ ಮಾಡಿದರು.

‘ವೈಯಕ್ತಿಕ ಹಗೆತನಕ್ಕೆ ಸಂಸ್ಥೆ ಹಾಳು ಮಾಡುತ್ತಿದ್ದಾರೆ. ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮು ಮುಗಿದಿದ್ದು, ₹20 ಕೋಟಿ ನಿವ್ವಳ ಆದಾಯ ಬಂದಿದೆ. ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರ ₹59 ಕೋಟಿ ಕೊಡಬೇಕಿದೆ. ರೈತರಿಗೆ ಪಾವತಿಸಿದ ನಂತರ ಮಿಕ್ಕುಳಿದ ಹಣದಲ್ಲಿ ಸಾಲ ತೀರಿಸುತ್ತೇವೆ. ರೈತರ ಹಿತಕ್ಕಾಗಿ ಜೈಲಿಗೆ ಹೋಗಲು ಸಿದ್ಧ. ನಾನು ಯಾವುದೇ ಅವ್ಯವಹಾರ ಮಾಡಿಲ್ಲ. ಎಂಜಿಎಸ್‌ಎಸ್‌ಕೆ ಮೇಲೂ ಸಾಲ ಇದೆ. ಅವರಿಗೆ ಯಾರೂ ಕೇಳುತ್ತಿಲ್ಲ. ಸಾಲಕ್ಕಾಗಿ ನಮ್ಮ ಬಳಿ 400 ಜನ ಕಳಿಸಿ, ಹೆದರಿಸಿದ್ದಾರೆ. ಬರುವ ಅಕ್ಟೋಬರ್‌ನಲ್ಲಿ ಎನ್‌ಎಸ್‌ಎಸ್‌ಕೆಗೆ ಚುನಾವಣೆ ನಡೆಯಲಿದೆ. ಹೆದರಿಸಿ ನಾಗಮಾರಪಳ್ಳಿ ಅವರ ಪೆನಾಲ್‌ ಸೋಲಿಸಲು ಷಡ್ಯಂತ್ರ ನಡೆದಿದೆ. ಆದರೆ, ಅದಕ್ಕಾಗಿ ಚಿಲ್ಲರೆ ರಾಜಕಾರಣ ಮಾಡಬಾರದು’ ಎಂದರು.

ADVERTISEMENT

‘₹669 ಕೋಟಿ ಸಾಲಕ್ಕೆ ₹809 ಕೋಟಿ ಮೌಲ್ಯದ ಆಸ್ತಿ ಭದ್ರತೆಯಾಗಿ ನೀಡಿದ್ದರೂ ವಿನಾ ಕಾರಣ ಹೆದರಿಸಿ ಸಂಸ್ಥೆ ಹಾಳುಗೆಡವಲಾಗುತ್ತಿದೆ. ಗೋದಾಮಿನ ಕೀ ತೆಗೆದುಕೊಂಡು ರೈತರ ಬಾಕಿ ಸಾಲ ಪಾವತಿಸಲು ಆಗುವುದಿಲ್ಲ. ರೈತರು ಹಾಗೂ ಕಾರ್ಖಾನೆಯ ವಿರುದ್ಧ ನಿರ್ಣಯ ಕೈಗೊಂಡರೆ, ಕಿರುಕುಳದಿಂದ ಕಾರ್ಖಾನೆ ಮುಚ್ಚಿ ಹೋದರೆ ಅದಕ್ಕೆ ಅವರೇ ಹೊಣೆ. ಅವಕಾಶ ಕೊಟ್ಟರೆ ಪ್ರತಿವರ್ಷ ₹20 ಕೋಟಿ ಸಾಲ ಮರುಪಾವತಿಸುವೆ. ಉಸ್ತುವಾರಿ ಸಚಿವರು ಮಧ್ಯಸ್ಥಿಕೆ ವಹಿಸಬೇಕು’ ಎಂದರು.

‘ಡಬಲ್‌ ಗೇಮ್‌, ಟ್ರಿಪಲ್‌ ಗೇಮ್‌ ರಾಜಕಾರಣ ಮಾಡಿ ಡಿಸಿಸಿ ಬ್ಯಾಂಕ್‌, ನಾರಂಜಾ ಕಾರ್ಖಾನೆ ಹಾಳಾಗಬಾರದು. ₹1 ಸಾವಿರ ಕೋಟಿ ರಾಜ್ಯ ಸರ್ಕಾರದಿಂದ ತಂದರೆ ಇವೆರಡೂ ಸಂಸ್ಥೆಗಳನ್ನು ಉಳಿಸಬಹುದು. ಸಹಕಾರ ಸಚಿವರೂ ಆದ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ಕೇಂದ್ರದಿಂದ ಸಾಲ ಕೊಡಲು ಮುಂದೆ ಬಂದಿದ್ದಾರೆ. ಆದರೆ, ರಾಜ್ಯ ಸರ್ಕಾರ ಒಪ್ಪಿಗೆ ಕೊಡಬೇಕಿದೆ’ ಎಂದರು.

ಎನ್‌ಎಸ್‌ಎಸ್‌ಕೆ ಉಪಾಧ್ಯಕ್ಷ ಬಾಲಾಜಿ ಚಂದ್ರಶೇಖರ, ನಿರ್ದೇಶಕರಾದ ರಾಜಕುಮಾರ ಕಣಜಿ, ಸಂಗಮೇಶ ಪಾಟೀಲ, ಸೀತಾರಾಮ ನಾಗಶೆಟ್ಟಿ, ಸಿದ್ರಾಮಪ್ಪ, ವೀರಶೆಟ್ಟಿ ಪಟ್ನೆ, ಶೋಭಾವತಿ, ಶರಣಪ್ಪ, ಸಿ.ಸಿ. ಪಾಟೀಲ ಹಾಜರಿದ್ದರು.

ಉಮಾಕಾಂತ ನಾಗಮಾರಪಳ್ಳಿ

‘ಬಿಎಸ್‌ಎಸ್‌ಕೆಯಿಂದ ಖಂಡ್ರೆ ಪರಿವಾರ ಮೇಲೆ ಬಂದಿದೆ’ (ಚಿತ್ರ ಇದೆ) ‘ನಾನು ಮದುವೆಗೆ ಹೋಗಲಿ ಮಣ್ಣಿಗೆ ಹೋಗಲಿ ಎಲ್ಲ ಕಡೆ ಅವನನ್ನು ಜೈಲಿಗೆ ಹಾಕಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಹಾಗೇ ಹೇಳುವವರು ಸಾಚಾ ಇರಬೇಕಲ್ಲ. ಬಿಎಸ್‌ಎಸ್‌ಕೆ ಮೇಲೆ ಖಂಡ್ರೆ ಪರಿವಾರ ಮೇಲೆ ಬಂದಿದೆ ಎಂಬುದನ್ನು ಅವರು ಮರೆಯಬಾರದು’ ಎಂದು ಎನ್‌ಎಸ್‌ಎಸ್‌ಕೆ ಅಧ್ಯಕ್ಷ ಡಿ.ಕೆ. ಸಿದ್ರಾಮ ಹೇಳಿದರು. ‘ಖಂಡ್ರೆ ಪರಿವಾರದವರೇ ಮಂತ್ರಿ ಎಂಪಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಿದ್ದಾರೆ. ಹೀಗಿದ್ದರೂ ಎಲ್ಲ ಹಾಳಾಗುತ್ತಿದೆ. ಡಿಸಿಸಿ ಬ್ಯಾಂಕಿನಲ್ಲಿ ದಿವಂಗತ ಗುರುಪಾದಪ್ಪ ನಾಗಮಾರಪಳ್ಳಿ ಅವರ ಮೂರ್ತಿ ಎದುರು ನಿತ್ಯ ದೀಪ ಉರಿಯುತ್ತಿತ್ತು. ಅದನ್ನು ತೆಗೆದು ಹಾಕಿದ್ದಾರೆ. ಒಂದು ದಿನವೂ ಕಸ ಹೊಡೆಯುತ್ತಿಲ್ಲ. ದೇವರು ನಿಮಗೆ ಮಾಫಿ ಮಾಡಲ್ಲ’ ಎಂದರು.

‘ರಾಜಕೀಯಕ್ಕೆ ಬರುವುದು ಗ್ಯಾರಂಟಿ’ ‘ಉಮಾಕಾಂತ ನಾಗಮಾರಪಳ್ಳಿ ಅವರು ರಾಜಕೀಯಕ್ಕೆ ಬರುವುದು ಗ್ಯಾರಂಟಿ. ನಾಗಮಾರಪಳ್ಳಿ ಪರಿವಾರದ ಒಂದು ಕುಡಿ ಬೆಳೆಯಬೇಕೆಂಬ ತುಡಿತ ಜಿಲ್ಲೆಯ ಜನತೆಗಿದೆ. ಸಮಯ ಬಂದಾಗ ರಾಜಕೀಯ ಪ್ರವೇಶಿಸುವುದು ಘೋಷಿಸುತ್ತಾರೆ’ ಎಂದು ಎನ್‌ಎಸ್‌ಎಸ್‌ಕೆ ಅಧ್ಯಕ್ಷ ಡಿ.ಕೆ. ಸಿದ್ರಾಮ ಹೇಳಿದರು. ‘ನಾಗಮಾರಪಳ್ಳಿ ಬೆಂಬಲಿಗರು ಇತ್ತೀಚೆಗೆ ಭಾಲ್ಕಿಯಲ್ಲಿ ಭರ್ಜರಿಯಾಗಿ ಜನ್ಮದಿನ ಆಚರಿಸಲು ಯೋಜನೆ ರೂಪಿಸಿದ್ದರು. ಆದರೆ ಉಮಾಕಾಂತ ಅವರ ಮನವಿ ಮೇರೆಗೆ ಕೈಬಿಟ್ಟಿದ್ದಾರೆ. ನಾಗಮಾರಪಳ್ಳಿ ಕುಟುಂಬಕ್ಕಾಗಿ ನಾನು ಜೀವ ಕೊಡಲು ಸಿದ್ಧ. ಇನ್ನು ಭಾಲ್ಕಿ ಕ್ಷೇತ್ರ ಅವರಿಗೆ ಬಿಟ್ಟುಕೊಡುವುದಿಲ್ಲವೇ’ ಎಂದರು. ಉಮಾಕಾಂತ ನಾಗಮಾರಪಳ್ಳಿ ಮಾತನಾಡಿ ‘ರಾಜಕೀಯ ನಿಂತ ನೀರಲ್ಲ. ಚುನಾವಣೆ ಸಮೀಪಿಸಿದಾಗ ಅದರ ಬಗ್ಗೆ ಸೂಕ್ತ ನಿರ್ಧಾರಕ್ಕೆ ಬರುವೆ’ ಎಂದರು.

ಡಿಸಿಸಿ ಬ್ಯಾಂಕ್‌ ಪರಿಸ್ಥಿತಿ ಸರಿಯಿಲ್ಲ’ (ಚಿತ್ರ ಇದೆ) ‘ಡಿಸಿಸಿ ಬ್ಯಾಂಕ್‌ ಪರಿಸ್ಥಿತಿ ಸದ್ಯ ಸರಿಯಿಲ್ಲ. ರೈತರಿಗೆ ಸಾಲ ಕೊಡುತ್ತಿಲ್ಲ. ಚಿನ್ನಾಭರಣಗಳ ಮೇಲಿನ ಸಾಲ ಕೊಡುವ ವ್ಯವಸ್ಥೆ ಸರಿಯಿಲ್ಲ. ಹಿರಿಯರು ಕಟ್ಟಿದ ಸಂಸ್ಥೆ ಹಾಳಾಗುತ್ತಿದೆ. ನಾನು ಸೇರಿದಂತೆ ನಮ್ಮ ಪೆನಾಲ್‌ನವರು ಸಂಪೂರ್ಣ ಬೆಂಬಲ ಕೊಡುತ್ತಿದ್ದರೂ ಬ್ಯಾಂಕಿನ ಹಿತಕ್ಕಾಗಿ ಯಾವುದೇ ಸೂಕ್ತ ನಿರ್ಧಾರ ಕೈಗೊಳ್ಳುತ್ತಿಲ್ಲ’ ಎಂದು ಡಿಸಿಸಿ ಬ್ಯಾಂಕಿನ ನಿರ್ದೇಶಕ ಉಮಾಕಾಂತ ನಾಗಮಾರಪಳ್ಳಿ ಆರೋಪಿಸಿದರು. ‘ನಾನು ಬ್ಯಾಂಕಿನ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾಗ ಬ್ಯಾಂಕ್‌ ನಿರಂತರವಾಗಿ ಆದಾಯದ ಹಾದಿಯಲ್ಲಿತ್ತು. ಈಗ ಅದಿಲ್ಲ. ಬ್ಯಾಂಕ್‌ ಮೇಲೆ ₹118 ಕೋಟಿ ಸಾಲ ಆಗಿದೆ. ರಾಜಕೀಯ ದುರುದ್ದೇಶದಿಂದ ನನ್ನ ಹೆಸರಿಗೆ ಕಪ್ಪು ಚುಕ್ಕೆ ತರಲು ಯತ್ನಿಸಲಾಗುತ್ತಿದೆ. ಉಸ್ತುವಾರಿ ಸಚಿವರು ಸಹಕಾರಿ ಕ್ಷೇತ್ರದಲ್ಲಿ ಪ್ರವೇಶಿಸಿ ರಾಜಕೀಯ ಬೆರೆಸಬಾರದು. ಇತ್ತೀಚೆಗೆ ನಡೆದ ಚುನಾವಣೆ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ನನ್ನ ಮೇಲೆ ಎಫ್‌ಐಆರ್‌ ದಾಖಲಿಸಿದ್ದರು’ ಎಂದು ಆರೋಪಿಸಿದರು.

‘ಬಿಎಸ್‌ಎಸ್‌ಕೆ ಜಾಗದಲ್ಲಿ ಲೇಔಟ್‌ಗೆ ಸಿದ್ಧತೆ’ ‘ಬಿಎಸ್‌ಎಸ್‌ಕೆ ಹರಾಜು ಪ್ರಕ್ರಿಯೆ ತಡೆಯಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಸುಭಾಷ ಗಂಗಾ ನಂತರ ಬಿಎಸ್‌ಎಸ್‌ಕೆಯನ್ನು ಬಸವರಾಜ ಎಂಬುವರಿಗೆ ಕೊಟ್ಟಿದ್ದಾರೆ. ಈ ಬಗ್ಗೆ ಡಿಸಿಸಿ ಬ್ಯಾಂಕಿನಲ್ಲಿ ಗೊತ್ತುವಳಿ ಅಂಗೀಕರಿಸಲಾಗಿದೆ. ಲೇಔಟ್‌ ನಿರ್ಮಿಸಿ ನಿವೇಶನಗಳನ್ನು ಮಾಡಿ ಮಾರಾಟಕ್ಕೆ ಸಿದ್ಧತೆ ನಡೆಸಲಾಗಿದೆ’ ಎಂದು ಎನ್‌ಎಸ್‌ಎಸ್‌ಕೆ ಅಧ್ಯಕ್ಷ ಡಿ.ಕೆ. ಸಿದ್ರಾಮ ಆರೋಪಿಸಿದರು. ‘ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಅಮರ್‌ ಖಂಡ್ರೆ ಅವರನ್ನು ಸಚಿವರು ನಿಯಂತ್ರಿಸಬೇಕು. ಇಲ್ಲವಾದರೆ ಅವರಿಗೆ ಕೆಟ್ಟ ಹೆಸರು ಬರುತ್ತದೆ. ಅವರ ರಾಜಕೀಯಕ್ಕೂ ಕುತ್ತು ಬರುತ್ತದೆ’ ಎಂದು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.