ADVERTISEMENT

ಬೀದರ್: ಡಿಸಿಸಿ ಬ್ಯಾಂಕ್ ಶಾರದಾ ಆರ್-ಸೆಟಿಗೆ ರಾಜ್ಯ ಮಟ್ಟದ ಪ್ರಶಸ್ತಿ

ಆರ್-ಸೆಟಿ ಸಾಧನೆಗೆ ಕೇಂದ್ರ  ಗ್ರಾಮೀಣಾಭಿವೃದ್ಧಿ ಸಚಿವಾಲಯ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2022, 13:25 IST
Last Updated 22 ಅಕ್ಟೋಬರ್ 2022, 13:25 IST
ಬೆಂಗಳೂರಿನಲ್ಲಿ ನಡೆದ ರಾಜ್ಯದ ಎಲ್ಲ ಆರ್‌ಸೆಟಿಗಳ ಕಾರ್ಯ ಚಟುವಟಿಕೆ ಪರಿಶೀಲನಾ ಸಭೆಯಲ್ಲಿ ಕೇಂದ್ರ ಸಚಿವಾಲಯದ ಜಂಟಿ ಕಾರ್ಯದರ್ಶಿ ಕರ್ಮಾಭೂತಿಯಾ ಅವರು ಬೀದರ್ ಆರ್‌ಸೆಟಿ ನಿರ್ದೇಶಕ ಬಿ. ಶಿವಪ್ರಸಾದ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು
ಬೆಂಗಳೂರಿನಲ್ಲಿ ನಡೆದ ರಾಜ್ಯದ ಎಲ್ಲ ಆರ್‌ಸೆಟಿಗಳ ಕಾರ್ಯ ಚಟುವಟಿಕೆ ಪರಿಶೀಲನಾ ಸಭೆಯಲ್ಲಿ ಕೇಂದ್ರ ಸಚಿವಾಲಯದ ಜಂಟಿ ಕಾರ್ಯದರ್ಶಿ ಕರ್ಮಾಭೂತಿಯಾ ಅವರು ಬೀದರ್ ಆರ್‌ಸೆಟಿ ನಿರ್ದೇಶಕ ಬಿ. ಶಿವಪ್ರಸಾದ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು   

ಬೀದರ್: ನಿರುದ್ಯೋಗಿ ಯುವಕರಿಗೆ ಉದ್ಯಮಶೀಲತಾ ತರಬೇತಿ ನೀಡಿ, ಸ್ವಯಂ ಉದ್ಯೋಗ ಕೈಗೊಳ್ಳಲು ನೆರವಾಗುತ್ತಿರುವ ನಗರದ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಡಿಸಿಸಿ ಬ್ಯಾಂಕ್ ಶಾರದಾ ಆರ್-ಸೆಟಿ ಸಂಸ್ಥೆಯು ರಾಜ್ಯ ಮಟ್ಟದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.

ಬೆಂಗಳೂರಿನಲ್ಲಿ ದಿ. 21 ರಂದು ನಡೆದ ರಾಜ್ಯದ ಎಲ್ಲ ಆರ್‌ಸೆಟಿಗಳ ಕಾರ್ಯ ಚಟುವಟಿಕೆ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವಾಲಯದ ಜಂಟಿ ಕಾರ್ಯದರ್ಶಿ ಕರ್ಮಾಭೂತಿಯಾ ಅವರು ಬೀದರ್ ಆರ್‌ಸೆಟಿ ನಿರ್ದೇಶಕ ಬಿ. ಶಿವಪ್ರಸಾದ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

ತರಬೇತಿಯ ಜೊತೆಗೆ ಬ್ಯಾಂಕ್ ಸಂಪರ್ಕ ಕಲ್ಪಿಸಿ, ಸ್ವಯಂ ಉದ್ಯೋಗ ಕೈಗೊಳ್ಳಲು ನೆರವಾಗುವಲ್ಲಿ ಬೀದರ್ ಆರ್‍ಸೆಟಿ ಇಡೀ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿರುವುದು ಮಾದರಿಯಾಗಿದೆ ಎಂದು ಅವರು ಹೇಳಿದರು.

ADVERTISEMENT

ತರಬೇತಿ ನೀಡಿದ ಮಾತ್ರಕ್ಕೆ ನಿರುದ್ಯೋಗ ಕೊನೆಗೊಳ್ಳಲ್ಲ. ತರಬೇತಿ ಪಡೆದವರು ಸ್ವಯಂ ಉದ್ಯೋಗ ಕೈಗೊಂಡಾಗಲೇ ನಿರುದ್ಯೋಗ ಕಡಿಮೆಯಾಗಬಲ್ಲದು. ಶಾರದಾ ಆರ್-ಸೆಟಿಯು ತರಬೇತಿಯ ಜೊತೆಗೆ ಉದ್ಯೋಗ ಕೈಗೊಳ್ಳಲು ಬ್ಯಾಂಕ್ ಸಂಪರ್ಕ ಕಲ್ಪಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಜಂಟಿ ಕಾರ್ಯದರ್ಶಿ ಕರ್ಮಾಭೂತಿಯಾ ಬಣ್ಣಿಸಿದರು.

ಎನ್.ಎಲ್.ಎಂ ಮಿಷನ್ ಡೈರೆಕ್ಟರ್ ಡಾ. ರಾಗಪ್ರಿಯಾ, ಆರ್‌ಸೆಟಿಗಳ ರಾಷ್ಟ್ರೀಯ ನಿರ್ದೇಶಕ ಬಿಫುಲ್ ಚಂದ್ರ ಶಹಾ, ಕರ್ನಾಟಕ ರಾಜ್ಯದ ನಿರ್ದೇಶಕ ಎನ್. ಮಂಜುನಾಥ ಮತ್ತಿತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ರಾಜ್ಯದ ಎಲ್ಲ ಜಿಲ್ಲೆಗಳ ಆರ್‌ಸೆಟಿ ನಿರ್ದೇಶಕರು ಪಾಲ್ಗೊಂಡಿದ್ದರು.

ನಿರುದ್ಯೋಗಿ ಯುವಕರಿಗೆ ತರಬೇತಿ ನೀಡಿ, ಸಶಸಕ್ತಿಗೊಳಿಸಿ, ಸ್ವಾವಲಂಬಿಯನ್ನಾಗಿ ಮಾಡಿ, ಗೌರವಪೂರ್ಣ ಬದುಕು ಸಾಗಿಸುವಂತೆ ಮಾಡುತ್ತಿರುವ ನಗರದ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಡಿಸಿಸಿ ಬ್ಯಾಂಕ್ ಶಾರದಾ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (ಶಾರದಾ ಆರ್-ಸೆಟಿ)ಯ ಸಾಧನೆಯನ್ನು ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ಕೊಂಡಾಡಿರುವುದು ಹರ್ಷದ ಸಂಗತಿ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ತಿಳಿಸಿದ್ದಾರೆ.

ಶಾರದಾ ಆರ್‌ಸೆಟಿ ಸಂಸ್ಥೆಯು ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ಇದು ಇಡೀ ಜಿಲ್ಲೆಗೆ ಹೆಮ್ಮೆಯ ಸಂಗತಿ ಎಂದು ತಿಳಿಸಿದ್ದಾರೆ.

ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಸಹಕಾರ, ಮಾರ್ಗದರ್ಶನದಿಂದಾಗಿಯೇ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ. ಯುವಕರನ್ನು ಸ್ವಾವಲಂಬಿಯನ್ನಾಗಿ ಮಾಡಬೇಕೆಂಬ ಪ್ರಾಮಾಣಿಕ ಕಾಳಜಿ ಬ್ಯಾಂಕ್ ಅಧ್ಯಕ್ಷರಾದ ಉಮಾಕಾಂತ ನಾಗಮಾರಪಳ್ಳಿ ಅವರಲ್ಲಿದೆ ಎಂದು ಆರ್‌ಸೆಟಿ ನಿರ್ದೇಶಕ ಬಿ. ಶಿವಪ್ರಸಾದ್ ತಿಳಿಸಿದ್ದಾರೆ.

ಸರಕಾರವು 2021-22 ನೇ ಸಾಲಿನಲ್ಲಿ 565 ಯುವಕರಿಗೆ ಸ್ವಯಂ ಉದ್ಯೋಗ ತರಬೇತಿ ನೀಡುವ ಗುರಿ ನಿಗದಿಪಡಿಸಿತ್ತು. 634 ಯುವಕರಿಗೆ ತರಬೇತಿ ನೀಡಿ, ಗುರಿ ಮೀರಿ ಸಾಧನೆ ಮಾಡಲಾಗಿದೆ. ಸ್ವಯಂ ಉದ್ಯೋಗ ಕೈಗೊಂಡಿರುವ 589 ಯುವಕರ ಪೈಕಿ 518 ಯುವಕರಿಗೆ ಬ್ಯಾಂಕ್‍ನಿಂದ ಸಾಲ ಕೊಡಿಸಲಾಗಿದೆ. 67 ಯುವಕರು ಸ್ವತ: ಸ್ವಯಂ ಉದ್ಯೋಗ ಕೈಗೊಂಡಿದ್ದಾರೆ. ನಾಲ್ವರು ನೌಕರಿ ಸೇರಿದ್ದಾರೆ. ಸ್ವಯಂ ಉದ್ಯೋಗ ಕೈಗೊಂಡವರ ಪ್ರಮಾಣ ಶೇ. 93 ರಷ್ಟಿದೆ. ಬ್ಯಾಂಕ್ ನೆರವು ಪಡೆದುಕೊಂಡವರ ಪ್ರಮಾಣ ಶೇ. 89 ರಷ್ಟಿದೆ ಎಂದು ನಿರ್ದೇಶಕ ಶಿವಪ್ರಸಾದ್ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.