ADVERTISEMENT

ಬೀದರ್‌ | ಮುಖ್ಯ ಶಿಕ್ಷಕರ ಸಂಬಳ ತಡೆಹಿಡಿಯಿರಿ: ಡಿಡಿಪಿಐ ನಿರ್ದೇಶನ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 3 ಏಪ್ರಿಲ್ 2025, 6:27 IST
Last Updated 3 ಏಪ್ರಿಲ್ 2025, 6:27 IST
ಸಲೀಂ ಪಾಷಾ
ಸಲೀಂ ಪಾಷಾ   

ಬೀದರ್‌: ರಾಜ್ಯ ಸರ್ಕಾರ ನಿಗದಿಪಡಿಸಿದ ಆನ್‌ಲೈನ್‌ ಕಾರ್ಯ ನೆರವೇರಿಸದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರ ಏಪ್ರಿಲ್‌ ತಿಂಗಳ ಸಂಬಳ ತಡೆ ಹಿಡಿಯಬೇಕೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಸಲೀಂ ಪಾಷಾ ಅವರು ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

‘ಅಪಾರ್‌’ ಪ್ರಗತಿ, ಆಧಾರ್‌ ಪರಿಶೀಲನೆ, ‘ಡ್ರಾಪ್‌ಬಾಕ್ಸ್‌’ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ವಿವರ ಅಪ್‌ಡೇಟ್‌ ಮಾಡುವುದು, ಶಿಕ್ಷಕರ ಡೇಟಾಬೇಸ್‌ ವರದಿಯನ್ನು ಆನ್‌ಲೈನ್‌ನಲ್ಲಿ ನಮೂದಿಸಬೇಕು. ಇದರ ಲಾಗ್‌ ಇನ್‌ ಆಯಾ ಶಾಲೆಯ ಮುಖ್ಯಶಿಕ್ಷಕರಿಗೆ ನೀಡಲಾಗಿದೆ.

ಈ ಸಂಬಂಧ ಹಲವು ಸಲ ಝೂಮ್‌ ಸಭೆಗಳು, ಮುಖ್ಯಶಿಕ್ಷಕರ ಸಭೆಗಳು, ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಸಭೆಗಳು, ಸಿಆರ್‌ಪಿ ಸಭೆಗಳು, ಈ ಸಂಬಂಧ ಹಲವು ಸಲ ಕಾರಣ ಕೇಳಿ ನೋಟಿಸ್‌ ನೀಡಿದ್ದರೂ ಸೂಕ್ತ ರೀತಿಯಲ್ಲಿ ಕೆಲಸ ನಿರ್ವಹಿಸದೆ ನಿರ್ಲಕ್ಷ್ಯ ತೋರುತ್ತಿರುವ ಹಿನ್ನೆಲೆಯಲ್ಲಿ ಸಮಗ್ರ ಶಿಕ್ಷಣ ಕರ್ನಾಟಕದ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು ಆದ ಡಿಡಿಪಿಐ ಅವರು ಕ್ರಮಕ್ಕೆ ಮುಂದಾಗಿದ್ದಾರೆ.

ADVERTISEMENT

ಆನ್‌ಲೈನ್‌ನಲ್ಲಿ ವಿದ್ಯಾರ್ಥಿಗಳ ವಿವರ ದಾಖಲಿಸುವುದರಲ್ಲಿ 2024ನೇ ವರ್ಷಾಂತ್ಯಕ್ಕೆ ಬೀದರ್‌ ಜಿಲ್ಲೆ ಕೊನೆಯ ಸ್ಥಾನದಲ್ಲಿತ್ತು. ಇದಕ್ಕೆ ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಮಾರ್ಚ್‌ ಎರಡನೇ ವಾರ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅವರು ಸಂಬಂಧಿಸಿದವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಮಕ್ಕಳ ವಿಷಯದಲ್ಲಿ ನಿರ್ಲಕ್ಷ್ಯ ತೋರದಂತೆಯೂ ಎಚ್ಚರಿಕೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಡಿಡಿಪಿಐ ಅವರು ಜಿಲ್ಲೆಯ ಬಸವಕಲ್ಯಾಣ, ಔರಾದ್‌, ಭಾಲ್ಕಿ, ಬೀದರ್‌ ಹಾಗೂ ಹುಮನಾಬಾದ್‌ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ 2025ರ ಮಾರ್ಚ್‌ 28ರಂದು ಜ್ಞಾಪನ ಪತ್ರ ಕಳಿಸಿ, ಶೇ 100ರಷ್ಟು ಪ್ರಗತಿ ಸಾಧಿಸದ ಮುಖ್ಯಶಿಕ್ಷಕರ ಏಪ್ರಿಲ್‌ ತಿಂಗಳ ವೇತನ ಬಿಡುಗಡೆಗೊಳಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಹೋದ ವರ್ಷಾಂತ್ಯದ ಹೊತ್ತಿಗೆ ಆನ್‌ಲೈನ್‌ ವಿವರ ದಾಖಲಿಸುವುದರಲ್ಲಿ ಬೀದರ್‌ ಕೊನೆಯ ಸ್ಥಾನದಲ್ಲಿತ್ತು. ಈಗ ಕೆಲಸ ವೇಗವಾಗಿ ನಡೆಯುತ್ತಿದೆ. ಕೆಲಸ ಮಾಡದವರ ಸಂಬಳ ತಡೆ ಹಿಡಿಯಲು ನಿರ್ಧರಿಸಲಾಗಿದೆ
ಸಲೀಂ ಪಾಷಾ, ಡಿಡಿಪಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.