ADVERTISEMENT

ಬೀದರ್‌ | ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ; ಬಂಧನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 6:27 IST
Last Updated 17 ಅಕ್ಟೋಬರ್ 2025, 6:27 IST
ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಬೀದರ್‌ನಲ್ಲಿ ಗುರುವಾರ ಎಸ್ಪಿ ಪ್ರದೀಪ್‌ ಗುಂಟಿ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಬೀದರ್‌ನಲ್ಲಿ ಗುರುವಾರ ಎಸ್ಪಿ ಪ್ರದೀಪ್‌ ಗುಂಟಿ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಬೀದರ್‌: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ ವ್ಯಕ್ತಿಯನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ವಿವಿಧ ಸಾಮಾಜಿಕ ಸಂಘಟನೆಗಳು ಆಗ್ರಹಿಸಿವೆ.

ಈ ಸಂಬಂಧ ಎರಡೂ ಸಂಘಟನೆಗಳ ಪದಾಧಿಕಾರಿಗಳು ನಗರದಲ್ಲಿ ಗುರುವಾರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರದೀಪ್‌ ಗುಂಟಿ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.

ಪ್ರಿಯಾಂಕ್ ಖರ್ಗೆ ಅವರು ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಆರ್‌.ಎಸ್‌.ಎಸ್‌. ಸಂಘಟನೆಯ ಚಟುವಟಿಕೆಗಳನ್ನು ನಿಷೇಧಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಆದರೆ, ಅದಕ್ಕೆ ಪ್ರತಿಕ್ರಿಯೆಯಾಗಿ ಕೆಲವರು ಅವರ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಕರೆಗಳನ್ನು ಮಾಡುತ್ತಿದ್ದಾರೆ. ಇಂತಹ ಕೃತ್ಯಗಳು ಸಮಾಜದಲ್ಲಿ ಅಸಹಿಷ್ಣುತೆ ಮತ್ತು ಹಿಂಸಾತ್ಮಕ ಮನೋಭಾವ ಬೆಳೆಸುವ ಅಪಾಯವಿದೆ ಎಂದು ತಿಳಿಸಿದ್ದಾರೆ.

ADVERTISEMENT

ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿನೋದಕುಮಾರ ಅಪ್ಪೆ, ಇಂಡಿಯನ್ ನ್ಯಾಷನಲ್ ಭೀಮ್ ಆರ್ಮಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ ಕುಮಾರ್ ವರ್ಮಾ, ಜಿಲ್ಲಾ ಅಧ್ಯಕ್ಷ ರಾಹುಲ್‌ ಭಂಗೂರೆ, ಪಾಲಿಕೆ ಸದಸ್ಯ ಸೂರ್ಯಕಾಂತ ಸಾಧುರೆ, ಮಹಾನಾಯಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಗೋಪಾಲ ದೊಡ್ಡಿ, ಕ್ರಾಂತಿಕಾರಿ ಜನತಾ ಸಂಘದ ಪವನ ಮಿಠಾರೆ, ಎನ್.ಎಸ್.ಯು.ಐ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೌತಮ ಮುತ್ತಂಗಿಕರ್, ಕರ್ನಾಟಕ ರಕ್ಷಣಾ ವೇದಿಕೆ (ಗಜಸೇನಾ) ಉಪಾಧ್ಯಕ್ಷ ಸುನೀಲ ಚಂದಾ, ಯುವ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಅಶೋಕ ಭಾವಿದೊಡ್ಡೆ, ದಲಿತ ಸಂಘರ್ಷ ಸಮಿತಿಯ (ಪರಿವರ್ತನ ವಾದ) ಜಿಲ್ಲಾ ಅಧ್ಯಕ್ಷ ಜಗನ್ನಾಥ ಹೊನ್ನಾ ಮತ್ತಿತರರು ಇದ್ದರು.