ADVERTISEMENT

ಹೆಚ್ಚುವರಿ ಗ್ರಂಥಾಲಯ ಮಂಜೂರಾತಿಗೆ ಆಗ್ರಹ 

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2022, 13:29 IST
Last Updated 5 ಅಕ್ಟೋಬರ್ 2022, 13:29 IST

ಬೀದರ್: ತಾಲ್ಲೂಕಿನ ಹಮಿಲಾಪುರಕ್ಕೆ ಹೆಚ್ಚುವರಿ ಗ್ರಂಥಾಲಯ ಮಂಜೂರು ಮಾಡಬೇಕು ಎಂದು ಗ್ರಾಮದ ದಿ ಬುದ್ಧ ಯುತ್ ಕ್ಲಬ್ ಅಧ್ಯಕ್ಷ ಮಹೇಶ ಎಸ್. ರಾಂಪುರೆ ಆಗ್ರಹಿಸಿದ್ದಾರೆ.


ಈ ಕುರಿತು ಅವರು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.


ಗಾದಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಳು ಗ್ರಾಮಗಳಲ್ಲಿ ಗ್ರಂಥಾಲಯ ಇಲ್ಲ. ಕಾರಣ, ಗಾದಗಿ, ಹಮಿಲಾಪುರ, ಸೋಲಪುರ, ಮೀರಾಗಂಜ್, ಶಾಮರಾಜಪುರ, ಮಾಮನಕೇರಿ ಗ್ರಾಮಗಳ ಜನರ ಅನುಕೂಲಕ್ಕೆ ಹಮಿಲಾಪುರದಲ್ಲಿ ಹೆಚ್ಚುವರಿ ಗ್ರಂಥಾಲಯ ಸ್ಥಾಪನೆ ಅಗತ್ಯವಾಗಿದೆ ಎಂದು ಹೇಳಿದ್ದಾರೆ.

ADVERTISEMENT


ಹೆಚ್ಚುವರಿ ಗ್ರಂಥಾಲಯ ಮಂಜೂರು ಮಾಡಿದ್ದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ಬಡ ವಿದ್ಯಾರ್ಥಿಗಳು, ಸಾಹಿತಿಗಳು ಹಾಗೂ ಸಾರ್ವಜನಿಕರಿಗೆ ಜ್ಞಾನಾರ್ಜನೆಗೆ ನೆರವಾಗಲಿದೆ ತಿಳಿಸಿದ್ದಾರೆ.

* * *

ಮಹಿಳೆಯರಿಗೆ ಕಾರ್ಯಾಗಾರ 8 ರಿಂದ
ಬೀದರ್: ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘವು ಅಕ್ಟೋಬರ್ 8 ರಿಂದ 15 ರ ವರೆಗೆ ಜಿಲ್ಲೆಯಲ್ಲಿ ಮಹಿಳೆಯರಿಗೆ ಮನೆ ಮದ್ದು ಹಾಗೂ ಮಾನವೀಯ ಸಂಬಂಧ ಕುರಿತು ಕಾರ್ಯಾಗಾರಗಳನ್ನು ಹಮ್ಮಿಕೊಂಡಿದೆ.


‘ನಮ್ಮ ಆರೋಗ್ಯ ನಮ್ಮ ಕೈಯಲ್ಲಿ’ ಘೋಷವಾಕ್ಯದಡಿ ಬಸವಕಲ್ಯಾಣ ಹಾಗೂ ಹುಲಸೂರು ತಾಲ್ಲೂಕುಗಳ ಕಾರ್ಯಾಗಾರ ಬಸವಕಲ್ಯಾಣದಲ್ಲಿ ಹಾಗೂ ಉಳಿದ ತಾಲ್ಲೂಕುಗಳ ಕಾರ್ಯಾಗಾರ ಆಯಾ ತಾಲ್ಲೂಕುಗಳಲ್ಲಿ ಜರುಗಲಿವೆ ಎಂದು ಸಂಘದ ನಿರ್ದೇಶಕ ರೇವಣಸಿದ್ದಪ್ಪ ಜಲಾದೆ ತಿಳಿಸಿದ್ದಾರೆ.


8 ರಂದು ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ(ಬಿ) ಪಟ್ಟಣದ ಬಸವತೀರ್ಥ ವಿದ್ಯಾಪೀಠ, 10 ರಂದು ಬೀದರ್ ನಗರದ ಪ್ರತಾಪನಗರದ ಜನಸೇವಾ ಶಾಲೆ ಸಭಾಂಗಣ, 11 ರಂದು ಚಿಟಗುಪ್ಪದ ಆರ್ಯ ಸಮಾಜ ಮಂದಿರ, 12 ರಂದು ಬಸವಕಲ್ಯಾಣದ ಸದಾನಂದ ಮಠ, 13 ರಂದು ಕಮಲನಗರದ ಪಟ್ಟದ್ದೇವರ ಮಠ, 14 ರಂದು ಔರಾದ್‍ನ ಕನಕ ಭವನ ಹಾಗೂ 15 ರಂದು ಭಾಲ್ಕಿ ಪಟ್ಟಣದ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಕಾರ್ಯಾಗಾರ ನಡೆಯಲಿದೆ ಎಂದು ಹೇಳಿದ್ದಾರೆ.


ಸಂಘದ ಶಿಕ್ಷಣ, ಕಲೆ ಹಾಗೂ ಸಾಂಸ್ಕೃತಿಕ ಉಪ ಸಮಿತಿಯ ಅಧ್ಯಕ್ಷೆ ಲೀಲಾ ಕಾರಟಗಿ, ತುಮಕೂರಿನ ಮನೆ ಮದ್ದು ಸಂಪನ್ಮೂಲ ವ್ಯಕ್ತಿ ಮುರಳಿಧರ ಗುಂಗುರಮಳೆ, ಮಹಿಳಾ ಸಬಲೀಕರಣ ಸಂಪನ್ಮೂಲ ವ್ಯಕ್ತಿ ಸೌಭಾಗ್ಯವತಿ ಆರ್. ಅವರು ಮನೆ ಮದ್ದು ಹಾಗೂ ಮಾನವೀಯ ಸಂಬಂಧಗಳ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.