ಬೀದರ್: ಹುಬ್ಬಳ್ಳಿಯ ವೀರಾಪುರ ಓಣಿ ನಿವಾಸಿ ಅಂಜಲಿ ಅಂಬಿಗೇರ್ ಕೊಲೆ ಆರೋಪಿಗೆ ಎನ್‌ಕೌಂಟರ್ ಮಾಡಬೇಕೆಂದು ಟೋಕರೆ ಕೋಳಿ ಸಮಾಜ ಸಂಘ ಆಗ್ರಹಿಸಿದೆ.
ಈ ಸಂಬಂಧ ಸಮಾಜದ ಪ್ರಮುಖರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರಿಗೆ ಬರೆದ ಮನವಿ ಪತ್ರವನ್ನು ನಗರದಲ್ಲಿ ಶನಿವಾರ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಸಲ್ಲಿಸಿ ಒತ್ತಾಯಿಸಿದರು.
‘ಅಂಜಲಿಯನ್ನು ಹುಬ್ಬಳ್ಳಿಯ ಯಲ್ಲಾಪುರ ಓಣಿ ನಿವಾಸಿ ವಿಶ್ವನಾಥ ಅಲಿಯಾಸ್ ಗಿರೀಶ್ ಸಾವಂತ ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ. ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಘಟನೆ ಮಾಸುವ ಮುನ್ನವೇ ಈ ಘಟನೆ ನಡೆದಿರುವುದು ದುರದೃಷ್ಟಕರ. ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಬೇಕು. ಆರೋಪಿಯನ್ನು ಎನ್‌ಕೌಂಟರ್ ಮಾಡಬೇಕು’ ಎಂದು ಆಗ್ರಹಿಸಿದರು.
ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ ಇದೇ ರೀತಿ ಮಹಿಳೆಯರ ಜೀವಗಳಿಗೆ ರಕ್ಷಣೆ ಸಿಗುವುದಿಲ್ಲ. ಕೂಡಲೇ ಕಠಿಣ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಟೋಕರೆ ಕೋಳಿ ಸಮಾಜ ಸಂಘದ ಜಿಲ್ಲಾಧ್ಯಕ್ಷ ಜಗನ್ನಾಥ ಜಮಾದಾರ್, ಅಂಬಿಗರ ಚೌಡಯ್ಯ ಯುವ ಸೇನೆ ಸಂಸ್ಥಾಪಕ ಅಧ್ಯಕ್ಷ ಸುನೀಲ ಭಾವಿಕಟ್ಟಿ, ಸಂಘದ ಉಪಾಧ್ಯಕ್ಷ ಸುನೀಲ ಕಾಶೆಪುರ್, ಪ್ರಧಾನ ಕಾರ್ಯದರ್ಶಿ ಪಾಂಡುರಂಗ ಗುರೂಜೀ, ಶಿವರಾಜ ಬಂಬುಳಗಿ, ರಮೇಶ ಕಾಶೆಂಪುರ್, ಷಣ್ಮುಖಪ್ಪ ಶೇಕಾಪುರ್, ಸಿದ್ದು ಕಾಶೆಂಪುರ್, ಅರುಣಕುಮಾರ ಅರ್ಕಿ, ಲಾಲಪ್ಪ ಕೋರಿ, ಕಿರಣ ಕೌಠಾ, ವಿಶ್ವನಾಥ ಕೌಠಾ, ನಾಗೇಶ ವಾಲೀಕಾರ್, ಶ್ರೀಕಾಂತ ಬಸಂತಪೂರೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.