ಬೀದರ್: ‘ಲೈಂಗಿಕ ದೌರ್ಜನ್ಯ ನಡೆಸಿ ಯುವತಿಯರ ಜೀವನ ಹಾಳು ಮಾಡಿರುವ ಪ್ರಕರಣ ಸಂಬಂಧ ಔರಾದ್ ಶಾಸಕ ಪ್ರಭು ಚವಾಣ್ ಅವರ ಮಗ ಪ್ರತೀಕ್ ಚವಾಣ್ ಹಾಗೂ ಮಗನಿಗೆ ಬೆಂಬಲವಾಗಿ ನಿಂತ ತಂದೆಯನ್ನು ಬಂಧಿಸಬೇಕು’ ಎಂದು ಏಕತಾ ಫೌಂಡೇಶನ್ ಅಧ್ಯಕ್ಷ ರವೀಂದ್ರ ಸ್ವಾಮಿ ಆಗ್ರಹಿಸಿದರು.
‘ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕ ದೌರ್ಜನ್ಯವೆಸಗಿ ವಂಚಿಸಿದ್ದಾರೆ. ಇಷ್ಟೇ ಅಲ್ಲ, ಅನೇಕ ಯುವತಿಯರ ಜೀವನ ಹಾಳು ಮಾಡಿದ್ದಾರೆ’ ಎಂದು ಮಹಾರಾಷ್ಟ್ರದ ಸಂತ್ರಸ್ತೆ ಯುವತಿಯೊಬ್ಬರು ಇತ್ತೀಚೆಗೆ ರಾಜ್ಯ ಮಹಿಳಾ ಆಯೋಗ ಮತ್ತು ಮಹಿಳಾ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಆದರೆ, ಇದುವರೆಗೆ ಬಂಧಿಸಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ಬಂಧಿಸದಿರುವುದು ಸೋಜಿಗ ಎಂದು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.
ಇಡೀ ಪ್ರಕರಣದ ಸಮಗ್ರ ತನಿಖೆಯನ್ನು ವಿಶೇಷ ತನಿಖಾ ತಂಡದ (ಎಸ್‌ಐಟಿ) ಮೂಲಕ ಮಾಡಿಸಬೇಕು. ನೊಂದ ಯುವತಿಯರಿಗೆ ನ್ಯಾಯ ದೊರೆಯುವವರೆಗೆ ಏಕತಾ ಫೌಂಡೇಶನ್ ಅವರ ಬೆನ್ನಿಗೆ ನಿಲ್ಲಲಿದೆ. ಮಗನ ಕಾಮಕ್ಕೆ ಕುಮ್ಮಕ್ಕು ನೀಡಿದ ಶಾಸಕ ಪ್ರಭು ಚವಾಣ್ ಅವರನ್ನೂ ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.
ಸಂತ್ರಸ್ತೆ ಯುವತಿಯ ಪೋಷಕರು, ಸಂಬಂಧಿಕರು ಮದುವೆ ವಿಚಾರದ ಬಗ್ಗೆ ಚರ್ಚಿಸಿಲು ಮನೆಗೆ ತೆರಳಿದಾಗ ಅವರ ಮೇಲೆ ಹಲ್ಲೆ ಮಾಡಿದ್ದು ಹಾಗೂ ಪ್ರಭಾವ ಬಳಸಿ ಕೇಸ್ ದಾಖಲಿಸಿರುವುದು ನಾಚಿಕೆಗೇಡಿನ ಸಂಗತಿ. ಮಗನಿಗೆ ಬುದ್ಧಿವಾದ ಹೇಳುವುದರ ಬದಲು ಆತನ ಪರ ನಿಂತು ಪತ್ರಿಕಾಗೋಷ್ಠಿ ನಡೆಸಿ, ಕೇಂದ್ರದ ಮಾಜಿಸಚಿವ ಭಗವಂತ ಖೂಬಾ ಹಾಗೂ ಇತರರ ಹೆಸರು ಪ್ರಸ್ತಾಪಿಸಿ ಪ್ರಕರಣದಿಂದ ನುಣುಚಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದರು.
ಔರಾದ್ ತಾಲ್ಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಭೂಕಬಳಿಕೆ ಹೆಚ್ಚಾಗಿದೆ. ಅತ್ಯಾಚಾರ ತಾಂಡವವಾಡುತ್ತಿದೆ. ಏಕತಾ ಫೌಂಡೇಶನ್ ಜೊತೆ ಗುರುತಿಸಿಕೊಂಡಿರುವ ಔರಾದ್ ಹಾಗೂ ಕಮಲನಗರ ತಾಲ್ಲೂಕಿನ ಹಲವು ಮುಖಂಡರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿ, ಭಯದ ವಾತಾವರಣ ಸೃಷ್ಟಿಸಲಾಗಿದೆ ಎಂದು ಆರೋಪ ಮಾಡಿದರು.
ಫೌಂಡೇಶನ್ ಪ್ರಮುಖರಾದ ತೇಜರಾವ್ ಮುಳೆ, ಅಶೋಕ ಪಾಟೀಲ ಹೊಕ್ರಾಣ, ಸಂದೀಪ ಪಾಟೀಲ ಹಂಗರಗಾ, ಧನಾಜಿ ಕಾಂಬಳೆ, ಪ್ರಭು ಸ್ವಾಮಿ, ಹಣ್ಮು ಪಾಜಿ, ಪ್ರಕಾಶ ಪಾಟೀಲ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.