ಬಸವಕಲ್ಯಾಣ: ‘ನ್ಯಾಯಾಲಯಗಳ ನೂತನ ಸಂಕೀರ್ಣದಲ್ಲಿ ಡಿಜಿಟಲ್ ವ್ಯವಸ್ಥೆಗೆ ಪ್ರಯತ್ನಿಸಲಾಗುವುದು’ ಎಂದು ರಾಜ್ಯ ಹೈಕೋರ್ಟ್ ನ ಗೌರವಾನ್ವಿತ ನ್ಯಾಯಮೂರ್ತಿ ಹಾಗೂ ಬೀದರ್ ಜಿಲ್ಲೆ ಆಡಳಿತಾತ್ಮಕ ನ್ಯಾಯಮೂರ್ತಿ ಎಸ್. ವಿಶ್ವಜೀತ್ ಶೆಟ್ಟಿ ಹೇಳಿದ್ದಾರೆ.
ನಗರದಲ್ಲಿನ ಹಳೆಯ ತಹಶೀಲ್ದಾರ ಕಚೇರಿಯ ಆವರಣದಲ್ಲಿ ಜಿಲ್ಲಾ ನ್ಯಾಯಾಂಗ್, ಲೋಕೋಪಯೋಗಿ ಇಲಾಖೆ ಹಾಗೂ ಬಸವಕಲ್ಯಾಣ ವಕೀಲರ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸುಮಾರು ₹13.87 ಕೋಟಿ ವೆಚ್ಚದ ನೂತನ ನ್ಯಾಯಾಲಯ ಸಂಕೀರ್ಣದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
‘ಸುಮಾರು 5 ಎಕರೆ ಜಾಗವಿದ್ದು, ದೊಡ್ಡ ಕಟ್ಟಡ ನಿರ್ಮಾಣ ಆಗುತ್ತಿದೆ. ಮುಂದಿನ 50 ವರ್ಷಗಳಲ್ಲಿನ ಸೌಕರ್ಯಗಳನ್ನು ಇಲ್ಲಿ ಒದಗಿಸಬೇಕಾಗಿದೆ. ಹೀಗಾಗಿ ಎಲ್ಲ ಅಧುನಿಕ ಸೌಲಭ್ಯಗಳುಳ್ಳ ಕಟ್ಟಡ ಇದಾಗಬೇಕು ಎಂಬುದು ನನ್ನ ಬಯಕೆ. ಲೋಕೋಪಯೋಗಿ ಇಲಾಖೆಯವರು 18 ತಿಂಗಳೊಳಗಾಗಿ ಉತ್ತಮ ರೀತಿಯಲ್ಲಿ ಇದನ್ನು ನಿರ್ಮಿಸಿಕೊಡಬೇಕು’ ಎಂದು ಹೇಳಿದರು.
‘ಬಸವಕಲ್ಯಾಣ ಹೆಸರೇ ಶುಭ ಸೂಚಕವಾಗಿದೆ. ಬೀದರ್ ಜಿಲ್ಲೆಯಲ್ಲಿಯೇ ದೊಡ್ಡ ತಾಲ್ಲೂಕು ಇದಾಗಿದೆ. ಅದರ ಬೆಳವಣಿಗೆಗೆ ಅನುಸಾರವಾಗಿ ಇಲ್ಲಿ ನ್ಯಾಯಾಲಯದ ಸುಸಜ್ಜಿತ ಕಟ್ಟಡದ ಅಗತ್ಯವಿದೆ. ಇಲ್ಲಿನ ಈ ಕಟ್ಟಡ ರಾಜ್ಯದಲ್ಲಿಯೇ ಮಾದರಿ ಎನಿಸುವಂತೆ ಎಲ್ಲ ವ್ಯವಸ್ಥೆ ಹೊಂದಬೇಕು’ ಎಂದು ಹೇಳಿದರು.
'ಸಮಾಜದ ಅಭಿವೃದ್ಧಿಗಾಗಿ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗಗಳು ಸಮಾನ ರೀತಿಯಲ್ಲಿ ಪ್ರಯತ್ನಿಸಬೇಕಾಗಿದೆ. ಇದಕ್ಕಾಗಿ ಈ ಕ್ಷೇತ್ರಗಳಿಗೆ ಮೂಲಸೌಕರ್ಯ ಒದಗಿಸುವುದು ಕೂಡ ಅತ್ಯಗತ್ಯವಾಗಿದೆ’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ವಿ.ಎಂ. ಆನಂದಶೆಟ್ಟಿ, ವಕೀಲರ ಸಂಘದ ಅಧ್ಯಕ್ಷ ಭೀಮಾಶಂಕರ ಕುರಕೋಟೆ, ವಕೀಲ ರಾಜಕುಮಾರ ಮುಡಬೆ ಮಾತನಾಡಿದರು.
2ನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶ ರಾಘವೇಂದ್ರ ಚನ್ನಬಸಪ್ಪ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಶಂಕರ ಕಾಮಶೆಟ್ಟಿ, ವಕೀಲರ ಸಂಘದ ಕಾರ್ಯದರ್ಶಿ ಎಸ್.ಬಿ. ಮಾಶಾಳಕರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.