ADVERTISEMENT

ಡಿಎಚ್‌ಒ ವಿರುದ್ಧ ಶಿಸ್ತುಕ್ರಮ: ಸಚಿವ ಪ್ರಭು ಚವಾಣ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 15:13 IST
Last Updated 25 ಜುಲೈ 2020, 15:13 IST
ಪ್ರಭು ಚವಾಣ್‌
ಪ್ರಭು ಚವಾಣ್‌   

ಬೀದರ್‌: ‘ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಹಾಗೂ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳ ವಿರುದ್ಧ ಜನಪ್ರತಿನಿಧಿಗಳು, ಮಾಧ್ಯಮಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ ಅನೇಕ ದೂರುಗಳು ಬರುತ್ತಿವೆ. ಜಿಲ್ಲಾ ಮಟ್ಟದ ಸಭೆಯಲ್ಲೇ ಎಚ್ಚರಿಕೆ ನೀಡಿದರೂ ಅವರ ಕಾರ್ಯವೈಖರಿಯಲ್ಲಿ ಸುಧಾರಣೆ ಕಂಡು ಬಂದಿಲ್ಲ. ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಹೇಳಿದರು.

‘ಡಿಎಚ್‌ಒ ಅವರ ವಿರುದ್ಧ ಅನೇಕ ದೂರುಗಳು ಬರುತ್ತಿವೆ. ಜಿಲ್ಲೆಯ ಚುನಾಯಿತ ಪ್ರತಿನಿಧಿಗಳ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರ ವಿರುದ್ಧ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ’ ಎಂದು ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಡಿಎಚ್‌ಒ ಕೋವಿಡ್‌ಗೆ ಸಂಬಂಧಿಸಿದಂತೆ ಸರಿಯಾದ ಮಾಹಿತಿ ಹಂಚಿಕೊಳ್ಳುತ್ತಿಲ್ಲ. ಇದರಿಂದ ತಪ್ಪು ಮಾಹಿತಿ ರವಾನೆಯಾಗುತ್ತಿದೆ. ಗೊಂದಲ ನಿವಾರಿಸಿಕೊಳ್ಳಲು ಮಾಧ್ಯಮ ಪ್ರತಿನಿಧಿಗಳು ಕರೆ ಮಾಡಿದರೂ ಕರೆಗಳನ್ನೇ ಸ್ವೀಕರಿಸುತ್ತಿಲ್ಲ ಎಂದು ಮಾಧ್ಯಮ ಪ್ರತಿನಿಧಿಗಳು ಸಚಿವರಿಗೆ ತಿಳಿಸಿದಾಗ ಅವರೂ ಬೇಸರ ವ್ಯಕ್ತಪಡಿಸಿದರು.

ADVERTISEMENT

ಡಿಎಚ್‌ಒ ಮೊಬೈಲ್‌ಗೆ ತಕ್ಷಣ ಕರೆ ಮಾಡಿ ಖಾತರಿ ಪಡಿಸಿಕೊಳ್ಳಿ ಎಂದು ಪತ್ರಕರ್ತರು ಒತ್ತಾಯಿಸಿದಾಗ ಸಚಿವರ ಆಪ್ತ ಸಹಾಯಕ ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ. ಇದರಿಂದ ಸಚಿವರು ಇನ್ನಷ್ಟು ಮುಜುಗರಕ್ಕೆ ಒಳಗಾಗಬೇಕಾಯಿತು. ಇದೇ ಬಿಜೆಪಿ ಸರ್ಕಾರದ ಒಂದು ವರ್ಷದ ಸಾಧನೆ ನೋಡಿ ಎಂದು ಪತ್ರಕರ್ತರು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.