ADVERTISEMENT

ಬೀದರ್ | ಮಾವಿಗೆ ಜಿಗಿ, ಬೂದಿ ರೋಗ ಬಾಧೆ

ನಿರ್ವಹಣೆಗೆ ತೋಟಗಾರಿಕೆ ಅಧಿಕಾರಿಗಳ ಸಲಹೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2020, 20:12 IST
Last Updated 30 ಜನವರಿ 2020, 20:12 IST
ಬೀದರ್‌ನ ತೋಟಗಾರಿಕೆ ಇಲಾಖೆಯ ಜಿಲ್ಲಾ ಹಾರ್ಟಿಕ್ಲಿನಿಕ್ ವಿಷಯ ತಜ್ಞ ಡಾ.ವಿ.ಎಸ್ ರೇವಣ್ಣವರ್ ಅವರು ಮಾವಿನ ಗಿಡಕ್ಕೆ ಬರುವ ರೋಗಗಳ ಕುರಿತು ಬೆಳೆಗಾರರಿಗೆ ಮಾಹಿತಿ ನೀಡಿದರು
ಬೀದರ್‌ನ ತೋಟಗಾರಿಕೆ ಇಲಾಖೆಯ ಜಿಲ್ಲಾ ಹಾರ್ಟಿಕ್ಲಿನಿಕ್ ವಿಷಯ ತಜ್ಞ ಡಾ.ವಿ.ಎಸ್ ರೇವಣ್ಣವರ್ ಅವರು ಮಾವಿನ ಗಿಡಕ್ಕೆ ಬರುವ ರೋಗಗಳ ಕುರಿತು ಬೆಳೆಗಾರರಿಗೆ ಮಾಹಿತಿ ನೀಡಿದರು   

ಬೀದರ್: ಮಾವಿನ ಗಿಡಗಳಲ್ಲಿ ಜಿಗಿ ಹಾಗೂ ಬೂದಿ ರೋಗ ನಿರ್ವಹಣೆಗೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಕೆಲವು ಕಡೆ ಮಾವಿನ ಗಿಡಗಳು ಕೆಲವು ಹೂ ಬಿಡುತ್ತಿದ್ದು, ಇನ್ನು ಕೆಲವೆಡೆ ಹೂವು ಬಿಡುವ ಹಂತದಲ್ಲಿವೆ. ಮಂಜು ಮತ್ತು ಮೋಡ ಕವಿದ ವಾತಾವರಣದ ಕಾರಣ ಜಿಗಿ ಮತ್ತು ಬೂದಿ ರೋಗ ಬರುವ ಸಂಭವ ಇದೆ. ಕೆಲ ಮಾವಿನ ತೋಟಗಳ ಗಿಡಗಳಲ್ಲಿ ಸ್ವಲ್ಪ ಪ್ರಮಾಣದ ಬೂದಿ ರೋಗ ಕಂಡು ಬಂದಿದೆ ಎಂದು ತಿಳಿಸಿದ್ದಾರೆ.

ಮಾವಿನ ಗಿಡಗಳಲ್ಲಿ ಹೂ ಗೊಂಚಲು ಹಾಗೂ ಎಲೆಗಳ ಮೇಲೆ ಬೂದಿಯಂತಹ ಬೆಳವಣಿಗೆ ಆಗಿ ನಂತರ ಹೂ ಗೊಂಚಲು ಒಣಗಿ ಉದುರುವುದು, ಎಲೆಗಳು ಮುರುಟುವುದು ಹಾಗೂ ಎಳೆಯ ಕಾಯಿಗಳು ಉದುರುವುದು ಬೂದಿ ರೋಗದ ಲಕ್ಷಣಗಳಾಗಿವೆ ಎಂದು ಹೇಳಿದ್ದಾರೆ.

ADVERTISEMENT

ಹೂ ಗೊಂಚಲುಗಳಲ್ಲಿ ಮತ್ತು ಎಲೆಗಳ ಮೇಲೆ ಅಂಟಿನಂತಹ ಜಿಗಿ ಪದಾರ್ಥ ಅಂಟಿಕೊಂಡು, ಎಲೆಗಳು ಮಿಂಚುವುದು, ಮುಟ್ಟಿದಾಗ ಬೆರಳುಗಳಿಗೆ ಜಿಗಿ ಅಂಟಿಕೊಳ್ಳುವುದು ಜಿಗಿಯ ಲಕ್ಷಣಗಳು ಎಂದು ತಿಳಿಸಿದ್ದಾರೆ.

ಬೂದಿ ರೋಗ ಮತ್ತು ಜಿಗಿಯ ಹತೋಟಿಗಾಗಿ 2 ಗ್ರಾಂ ವೆಟ್ಟೆಬಲ್ ಸಲ್ಫರ್, 3 ಮಿ.ಲೀ. ಬೇವಿನ ಎಣ್ಣೆ ಮತ್ತು ಅರ್ಧ ಮಿಲಿ ಮ್ಯಾಕ್ಷಿವೆಟ್ /ಟೀಪಾಲ್/ಯಾವುದೇ ವೆಟ್ಟಿಂಗ್ ಏಜೆಂಟ್‌ನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. ಗಿಡಗಳಲ್ಲಿ ಎತ್ತರದಲ್ಲಿ ಹಳದಿ, ನೀಲಿ ಬಣ್ಣದ ಜಿಗುಟು ಅಂಟಿನ ಪೇಪರ್‌ಗಳನ್ನು ತೂಗು ಹಾಕಬೇಕು ಎಂದು ಹೇಳಿದ್ದಾರೆ.

ಹಾರಾಡುವ ಜಿಗಿ ಹುಳು, ಏಫಿಡ್ ಥ್ರಿಪ್‌ನಂತಹ ಹುಳುಗಳು ಅಂಟಿನ ಪೇಪರ್‌ಗೆ ಅಂಟಿಕೊಳ್ಳುತ್ತವೆ. ಇದರಿಂದ ಸ್ವಲ್ಪ ಪ್ರಮಾಣದ ಕೀಟಗಳ ಹತೋಟಿ ಆಗುತ್ತದೆ ಎಂದು ತಿಳಿಸಿದ್ದಾರೆ.

ಕೆಲಕಡೆ ಮಾವಿನ ಗಿಡಗಳಿಗೆ ಕಾಂಡ ಕೊರಕ(ಸ್ಟೆಮ್ ಬೋರರ್) ಸಮಸ್ಯೆ ಕೂಡ ಕಂಡು ಬಂದಿದೆ. ಮರಿ ಹುಳುಗಳು ಕಾಂಡವನ್ನು ಕೊರೆದು ಒಳಗಡೆ ಸೇರಿ ಮೆತ್ತನೆಯ ಪದಾರ್ಥ ತಿನ್ನುತ್ತವೆ. ಒಳಗಿನಿಂದ ಪುಡಿ ಹೊರ ಹಾಕುತ್ತವೆ. ಕಾಂಡದ ಬುಡದಲ್ಲಿ ಹೊಟ್ಟು ಬಿದ್ದಿರುತ್ತದೆ. ಕಾಂಡದಲ್ಲಿ ತೂತನ್ನು ಉದ್ದನೆಯ ತಂತಿಯಿಂದ ಸ್ವಚ್ಛಗೊಳಿಸಿ, ಇದರ ಹತೋಟಿಗೆ ಫಿನಾಲ್ ಶೇ 50 ಇಲ್ಲವೇ ಡೈಕ್ಲೋರೊವಾಸ್-70ನ ಕೆಲ ಹನಿಗಳನ್ನು ತೂತಿನಲ್ಲಿ ಹಾಕಿ, ಹಸಿ ಮಣ್ಣಿನಿಂದ (ಕೆಸರು) ಅಥವಾ ಹೀಲರ್ ಕಮ್ ಸೀಲರ್‌ನಿಂದ ತೂತುಗಳನ್ನು ಮುಚ್ಚಬೇಕು ಎಂದು ಹೇಳಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ತೋಟಗಾರಿಕೆ ಅಧಿಕಾರಿಗಳನ್ನು ಅಥವಾ ಜಿಲ್ಲಾ ಹಾರ್ಟಿಕ್ಲಿನಿಕ್ ವಿಷಯ ತಜ್ಞ ಡಾ.ವಿ.ಎಸ್.ರೇವಣ್ಣವರ್ (9482053985) ಅವರನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.