ಜನವಾಡ: ಬೀದರ್ ತಾಲ್ಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ಹೆಸರು, ಸೋಯಾ ಹಾಗೂ ಅವರೆಯಲ್ಲಿ ಹಳದಿ ನಂಜು ರೋಗಭಾದೆ ಕಂಡು ಬಂದಿದೆ.
ಬೀದರ್ ತಾಲ್ಲೂಕಿನ ಜನವಾಡ ಸಮೀಪದ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ಜಿಲ್ಲೆಯಲ್ಲಿ ನಡೆಸಿದ ಸಮೀಕ್ಷೆ ವೇಳೆ ರೋಗ ಪತ್ತೆಯಾಗಿದೆ. ಹುಮನಾಬಾದ್ ತಾಲ್ಲೂಕಿನ ಕೆಲ ಹೊಲಗಳಲ್ಲಿ ಹೆಸರು ಬೆಳೆಯಲ್ಲಿ ಎಲೆ ಚುಕ್ಕೆ ರೋಗ ಕಾಣಿಸಿದೆ.
ಹಳದಿ ನಂಜು ರೋಗ ಪಸರಿಸಲು ಬಿಳಿ ನೊಣ ಕಾರಣವಾಗಿದೆ. ಪ್ರೌಢ ಹಾಗೂ ಮರಿಕೀಟ ಎಲೆ ಹಾಗೂ ಇತರ ಭಾಗಗಳಿಂದ ರಸ ಹೀರುತ್ತದೆ. ಜೊಲ್ಲಿನ ಮೂಲಕ ಹಳದಿ ರೋಗದ ನಂಜಾಣು ಗಿಡದಲ್ಲಿ ಸೇರಿಸಿ, ಪರೋಕ್ಷವಾಗಿ ಭಾದೆ ಉಂಟು ಮಾಡುತ್ತದೆ ಎಂದು ಸಮೀಕ್ಷಾ ತಂಡದಲ್ಲಿದ್ದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುನೀಲಕುಮಾರ ಎನ್.ಎಂ. ತಿಳಿಸಿದರು.
ಮೊದಲು ಎಲೆಗಳ ಮೇಲೆ ಹಳದಿ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ನಂತರ ಹೆಚ್ಚಾಗಿ, ಹಳದಿ, ಹಸಿರು ಲಕ್ಷಣಗಳು ಗೋಚರಿಸುತ್ತವೆ. ಕೊನೆಗೆ ಇಡೀ ಗಿಡದ ಎಲೆ ಹಾಗೂ ಕಾಯಿಗಳು ಸಂಪೂರ್ಣ ಹಳದಿ ಬಣ್ಣಕ್ಕೆ ತಿರುಗುತ್ತವೆ. ಗಿಡದಲ್ಲಿ ಹೂವುಗಳು ಇರುವುದಿಲ್ಲ. ಕಾಯಿಗಳೂ ಕಟ್ಟುವುದಿಲ್ಲ ಎಂದು ಹೇಳಿದರು.
ಹಳದಿ ನಂಜು ರೋಗ ಬಾಧಿತ ಗಿಡಗಳನ್ನು ಕಿತ್ತು ನಾಶಪಡಿಸಬೇಕು. ಹೊಲದಲ್ಲಿ ಪ್ರತಿ ಎಕರೆಗೆ 8 ರಿಂದ 10 ಹಳದಿ ಅಂಟು ಬಲೆಗಳನ್ನು ಬೆಳೆಗಳಿಗಿಂತ ಒಂದು ಅಡಿ ಎತ್ತರದಲ್ಲಿ ಹಾಕಬೇಕು. ಕೀಟನಾಶಕ ಇಮಿಡಾಕ್ಲೊಪ್ರೀಡ್ 17.5 ಎಸ್.ಎಲ್ ಪ್ರತಿ ಲೀಟರ್ ನೀರಿಗೆ 0.3 ಮಿ.ಲೀ ಅಥವಾ ಥಾಯೋಮಿ ಥ್ಯಾಕಸ್‍ಂ ಪ್ರತಿ ಲೀಟರ್ ನೀರಿಗೆ 0.3 ಗ್ರಾಂ ಅಥವಾ ಅಸಿಫೇಟ್ ಪ್ರತಿ ಲೀಟರ್ ನೀರಿಗೆ 1 ಗ್ರಾಂ ಬೆರೆಸಿ ಸಿಂಪಡಿಸಬೇಕು. 15 ದಿನಗಳ ನಂತರ ಮತ್ತೊಮ್ಮೆ ಇವುಗಳನ್ನೇ ಸಿಂಪಡಣೆ ಮಾಡಬೇಕು ಎಂದು ತಿಳಿಸಿದರು.
ಎಲೆ ಚುಕ್ಕೆ ರೋಗದ ನಿರ್ವಹಣೆಗೆ ಹೆಕ್ಸಾಕೊನೊಝೊಲ್ ಪ್ರತಿ ಲೀಟರ್ ನೀರಿಗೆ 1 ಮಿ.ಲೀ ಬೆರೆಸಿ ಸಿಂಪಡಿಸಬೇಕು ಎಂದು ಸಲಹೆ ಮಾಡಿದರು. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ ಡಾ. ಜ್ಞಾನದೇವ ಬುಳ್ಳಾ, ಡಾ. ಅಕ್ಷಯಕುಮಾರ ಸಮೀಕ್ಷಾ ತಂಡದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.