ಬೀದರ್: ‘ಜನಸಾಮಾನ್ಯರು ಸರ್ಕಾರಿ ಆಸ್ಪತ್ರೆಗೆ ಹೋದಾಗ ಸಕಾಲಕ್ಕೆ ಅವರಿಗೆ ಚಿಕಿತ್ಸೆ ಸಿಗದಿದ್ದಲ್ಲಿ ಅವರು ದೂರು ದಾಖಲಿಸಲು ವ್ಯವಸ್ಥೆ ಜಾರಿಗೆ ತರಬೇಕು’ ಎಂದು ಸಂಸದ ಸಾಗರ್ ಖಂಡ್ರೆ ಅವರು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ವರದಿ ಪರಿಶೀಲನಾ ಸಭೆ (ದಿಶಾ) ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೂರು ದಾಖಲಿಸಲು ‘ಆನ್‌ಲೈನ್ ಮೆಕ್ಯಾನಿಸಂ’ ವ್ಯವಸ್ಥೆ ಜಾರಿಗೆ ತರಬೇಕು. ಈ ಸಂಬಂಧ ಜಿಲ್ಲಾಧಿಕಾರಿ ವಿಸ್ತೃತವಾದ ವರದಿ ಸಲ್ಲಿಸಬೇಕು ಎಂದು ತಿಳಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಬೆಮಳಖೇಡಾ ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್ ಇಲ್ಲದ ಕಾರಣ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ ಎಂದರು.
ಡಿಎಚ್‌ಒ ಡಾ. ಧ್ಯಾನೇಶ್ವರ ನೀರಗುಡೆ ಪ್ರತಿಕ್ರಿಯಿಸಿ, ಆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡ್ರೈವರ್ ಇಲ್ಲ ಎಂದರು. ಮಧ್ಯ ಪ್ರವೇಶಿಸಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ‘ಸಮೀಪದ ಆರೋಗ್ಯ ಕೇಂದ್ರದಿಂದ ಆಂಬ್ಯುಲೆನ್ಸ್ ತರಿಸಿ ವ್ಯವಸ್ಥೆ ಮಾಡಬಹುದಿತ್ತಲ್ಲ’ ಎಂದು ಪ್ರಶ್ನಿಸಿದರು. ಅದಕ್ಕೆ ದನಿಗೂಡಿಸಿದ ಸಾಗರ್ ಖಂಡ್ರೆ, ‘ಆ ಹುದ್ದೆ ಭರ್ತಿ ಆಗುವವರೆಗೆ ಏನಾದರೂ ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂದರು. ಡಿಎಚ್‌ಒ ಮಾತನಾಡಿ, ‘ಸಮಸ್ಯೆ ಬಗೆಹರಿಸಲಾಗುವುದು. ಜಿಲ್ಲೆಯಲ್ಲಿ ಒಟ್ಟು 48 ಆಂಬ್ಯುಲೆನ್ಸ್‌ಗಳಿದ್ದು, 45 ಚಾಲಕರಿದ್ದಾರೆ’ ಎಂದರು.
ಬೆಲ್ದಾಳೆ ಅವರು ಪುನಃ ಮಾತನಾಡಿ, ಮನ್ನಾಏಖ್ಖೆಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ‘ಗೈನಕಾಲಜಿಸ್ಟ್’ ಇಲ್ಲ. ಅಲ್ಲಿ 50ರಿಂದ 60 ಸಾವಿರ ಜನಸಂಖ್ಯೆ ಇದೆ. ಹುದ್ದೆ ಮಂಜೂರಾದರೂ ವೈದ್ಯರಿಲ್ಲ’ ಎಂದು ಗಮನ ಸೆಳೆದರು. ಡಿಎಚ್‌ಒ ಪ್ರತಿಕ್ರಿಯಿಸಿ, ‘ಈ ಕುರಿತು ಪತ್ರಿಕೆಯಲ್ಲಿ ಜಾಹೀರಾತು ಕೊಟ್ಟರೂ ಯಾರೂ ಮುಂದೆ ಬಂದಿಲ್ಲ’ ಎಂದರು.
ಮನ್ನಾಏಖ್ಖೆಳ್ಳಿಯಂತೆ ಹಲಬರ್ಗಾದಲ್ಲೂ ಇದೇ ರೀತಿ ಸಮಸ್ಯೆ ಇದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ನೀತಿ ನಿರೂಪಣೆಯಲ್ಲಿ ಏನಾದರೂ ಬದಲಾವಣೆ ಆಗಬೇಕಿದ್ದರೆ ಅದರ ಬಗ್ಗೆ ವರದಿ ಸಲ್ಲಿಸಿ, ನಾನು ಸರ್ಕಾರದ ಗಮನ ಸೆಳೆಯುತ್ತೇನೆ. ಏನು ಮಾಡಿದರೆ ಸರ್ಕಾರಿ ಆಸ್ಪತ್ರೆಗಳು ನೂರಕ್ಕೆ ನೂರು ಸುಧಾರಿಸಿ ಉತ್ತಮ ಸೇವೆ ಕೊಡಬಹುದು ಎನ್ನುವುದರ ಬಗ್ಗೆ ವಿಸ್ತೃತವಾದ ವರದಿ ಕೊಡಬೇಕು ಎಂದು ಸಾಗರ್ ಖಂಡ್ರೆ ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
‘ಶೇ 49ರಷ್ಟು ಕೊರತೆ ಮಳೆ’
‘ಜೂನ್ ತಿಂಗಳಲ್ಲಿ ಶೇ 49ರಷ್ಟು ಕೊರತೆ ಮಳೆಯಾಗಿದೆ. ಆದರೆ ತಿಂಗಳ ಆರಂಭದ ಒಂದೆರಡು ದಿನ ಉತ್ತಮ ಮಳೆಯಾಗಿರುವುದರಿಂದ ಬೆಳೆಗಳಿಗೆ ಯಾವುದೇ ಸಮಸ್ಯೆ ಇಲ್ಲ’ ಎಂದು ಜಂಟಿ ಕೃಷಿ ನಿರ್ದೇಶಕಿ ದೇವಿಕಾ ಆರ್. ಸಭೆಗೆ ತಿಳಿಸಿದರು. ಸಂಸದ ಸಾಗರ್ ಖಂಡ್ರೆ ಮಧ್ಯ ಪ್ರವೇಶಿಸಿ ಕಲಬುರಗಿ ಜಿಲ್ಲೆಯ ಆಳಂದ ಚಿಂಚೋಳಿಯಲ್ಲಿ ರೈತರಿಗೆ ಪ್ರಧಾನ ಮಂತ್ರಿ ಫಸಲ್ ವಿಮೆ ಹಣ ಜಾಸ್ತಿ ಬಂದಿದೆ. ಆದರೆ ಬೀದರ್ ಜಿಲ್ಲೆಯ ಭಾಗದ ರೈತರಿಗೆ ಬಂದಿಲ್ಲ. ರೈತರು ವಿಮೆ ಮಾಡಿಸಿದರೂ ಹಣ ಬರದಿದ್ದರೆ ಹೇಗೆ? ಈ ಬಗ್ಗೆ ಅಧ್ಯಯನ ಮಾಡಿ ವಿಸ್ತೃತವಾದ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು. ‘ಕಮಲನಗರದಲ್ಲಿ ಕಳಪೆ ಬೀಜ ಗೊಬ್ಬರ ಕೊಟ್ಟಿದ್ದಾರೆ ಎಂಬ ದೂರುಗಳು ಬಂದಿವೆ’ ಎಂದು ದಿಶಾ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಗಮನ ಸೆಳೆದರು. ಅದಕ್ಕೆ ಸಾಗರ್ ಖಂಡ್ರೆ ಪ್ರತಿಕ್ರಿಯಿಸಿ ನಿರ್ದಿಷ್ಟವಾಗಿ ಯಾವ ರೈತರಿಗೆ ಸಮಸ್ಯೆಯಾಗಿದೆ ಎಂದು ತಿಳಿಸಿದರೆ ಅದನ್ನು ಆಧರಿಸಿ ಕ್ರಮ ಜರುಗಿಸಲಾಗುವುದು ಎಂದರು.
‘ಟಿಎಚ್‌ಒ ವಾಹನ ಇದೆ ಡ್ರೈವರ್ ಇಲ್ಲ’
‘ಹುಮನಾಬಾದ್ ತಾಲ್ಲೂಕು ಆರೋಗ್ಯ ಅಧಿಕಾರಿಗೆ (ಟಿಎಚ್‌ಒ) ವಾಹನ ಇದೆ. ಆದರೆ ಆ ವಾಹನ ಓಡಿಸಲು ಡ್ರೈವರ್ ಇಲ್ಲ’ ಎಂದು ಡಿಎಚ್‌ಒ ಡಾ. ಧ್ಯಾನೇಶ್ವರ ನೀರಗುಡೆ ತಿಳಿಸಿದರು. ‘ಹುಮನಾಬಾದ್ ಟಿಎಚ್‌ಒ ಅವರಿಗೆ ಓಡಾಡಲು ವಾಹನ ಇಲ್ಲ. ಸ್ವಂತ ವಾಹನ ಓಡಿಸುತ್ತಿದ್ದಾರೆ. ಅದಕ್ಕೆ ಏಕೆ ವ್ಯವಸ್ಥೆ ಮಾಡುತ್ತಿಲ್ಲ’ ಎಂದು ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಅವರು ಪ್ರಶ್ನಿಸಿದ್ದಕ್ಕೆ ಮೇಲಿನಂತೆ ಉತ್ತರಿಸಿದರು. ‘ಜು. 20ರೊಳಗೆ ಟಿಎಚ್‌ಒ ಹಾಗೂ ಆಂಬ್ಯುಲೆನ್ಸ್‌ಗಳಿಗೆ ಚಾಲಕರ ವ್ಯವಸ್ಥೆ ಮಾಡಲಾಗುವುದು’ ಎಂದು ಡಾ. ಧ್ಯಾನೇಶ್ವರ ನೀರಗುಡೆ ತಿಳಿಸಿದರು.
‘ಎಸಿ ರೂಮ್‌ನಲ್ಲಿ ಕುಳಿತು ಕಾಲಹರಣ’
‘ರಸ್ತೆಬದಿ ಯಾವುದೇ ಸುರಕ್ಷತೆ ಇಲ್ಲದೆ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತಿದೆ. ಬೀದರ್‌ನ ದೀಪಕ್ ಥೇಟರ್‌ಗೆ ಹೋಗುವ ರಸ್ತೆಯಲ್ಲಿ ತಳ್ಳುಬಂಡಿ ಮೇಲೆ ಜಿಲೇಬಿ ಮಾರಾಟ ಮಾಡುತ್ತಾರೆ. ಅದರ ಮೇಲೆ ದೂಳು ಬೀಳುತ್ತದೆ. ಕನಿಷ್ಠ ಅವರು ಗ್ಲಾಸ್ ಹಾಕಿಸಿಕೊಂಡು ಮಾರಾಟ ಮಾಡಬೇಕು. ಇಲ್ಲವಾದರೆ ಜನರಿಗೆ ತೊಂದರೆ ಆಗುತ್ತದೆ. ಈ ಬಗ್ಗೆ ತಿಳಿಸಿದರೂ ಏನೂ ಮಾಡಿಲ್ಲ. ನೀವು ಎಲ್ಲಿಗೂ ಹೋಗುತ್ತಿಲ್ಲ. ಎಸಿ ರೂಮ್‌ನಲ್ಲಿ ಕುಳಿತು ಕಾಲ ಕಳೆಯುತ್ತಿದ್ದೀರಿ’ ಎಂದು ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಅವರು ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿ ಸಂತೋಷ ಕಾಳೆ ಅವರನ್ನು ತರಾಟೆಗೆ ತೆಗೆದುಕೊಂಡರು. ಸಂಸದ ಸಾಗರ್ ಖಂಡ್ರೆ ಮಾತನಾಡಿ ಆಹಾರ ಸುರಕ್ಷತೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿಲ್ಲ. ಯಾವ ರೀತಿ ಅಡುಗೆ ಎಣ್ಣೆ ಬಳಸುತ್ತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಯಾರಾದರೂ ಒಬ್ಬರ ವಿರುದ್ಧ ಕ್ರಮ ತೆಗೆದುಕೊಂಡರೆ ಉಳಿದವರು ಸುಧಾರಿಸುತ್ತಾರೆ. ಆದರೆ ನೀವು ಏನು ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ದಿಶಾ ಸದಸ್ಯ ಶಿವಯ್ಯ ಸ್ವಾಮಿ ‘ಎಲ್ಲ ಹೋಟೆಲ್‌ಗಳಲ್ಲಿ ಟೇಸ್ಟಿಂಗ್ ಪೌಡರ್ ಮುಕ್ತವಾಗಿ ಮಾರಾಟ ಮಾಡಲಾಗುತ್ತಿದೆ. ಅದನ್ನೇಕೆ ತಡೆಯುತ್ತಿಲ್ಲ’ ಎಂದು ಪ್ರಶ್ನಿಸಿದರು. ‘ಪ್ರತಿಯೊಬ್ಬರಿಗೂ ಇದರಿಂದ ಸಮಸ್ಯೆಯಾಗುತ್ತಿದೆ. ಇದರ ಬಗ್ಗೆ ಕ್ರಮ ತೆಗೆದುಕೊಂಡು ನನಗೆ ವರದಿ ಸಲ್ಲಿಸಬೇಕು’ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸೂಚನೆ ನೀಡಿದರು.
ಸಿಸಿಟಿವಿ ಬಯೋಮೆಟ್ರಿಕ್ ಕಡ್ಡಾಯಕ್ಕೆ ಸೂಚನೆ
‘ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾ ಮತ್ತು ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಜಾರಿಗೆ ತರಬೇಕು. ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಡಾ. ಗಿರೀಶ ಬದೋಲೆ ಅವರು ಈ ನಿಟ್ಟಿನಲ್ಲಿ ಕ್ರಮ ಜರುಗಿಸಬೇಕು’ ಎಂದು ಸಂಸದ ಸಾಗರ್ ಖಂಡ್ರೆ ನಿರ್ದೇಶನ ನೀಡಿದರು.
‘ಸರ್ಕಾರದ ನಿಯಮದಂತೆ ಅಧಿಕಾರಿಗಳ ವರ್ಗಾವಣೆಯಾಗಲಿ’
‘ಐದು ವರ್ಷಕ್ಕಿಂತ ಹೆಚ್ಚಿನ ಅವಧಿಯಿಂದ ಜಿಲ್ಲೆಯ ಅನೇಕ ಇಲಾಖೆಗಳಲ್ಲಿ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ. ಸರ್ಕಾರ ಇದಕ್ಕಾಗಿ ನಿಯಮ ಮಾಡಿದ್ದು ಅದರ ಪ್ರಕಾರ ಅವರನ್ನು ಬೇರೆಡೆ ವರ್ಗಾವಣೆಗೊಳಿಸಬೇಕು’ ಎಂದು ದಿಶಾ ಸದಸ್ಯ ಶಿವಯ್ಯ ಸ್ವಾಮಿ ಸಭೆಯ ಗಮನ ಸೆಳೆದರು. ‘ನಾಲ್ಕು ವರ್ಷಗಳಿಗಿಂತ ಹೆಚ್ಚು ಅವಧಿಯಾದರೆ ಅಂತಹವರನ್ನು ವರ್ಗಾವಣೆ ಮಾಡಲಾಗುತ್ತಿದೆ. ಆದರೆ ಶೇ 6ಕ್ಕಿಂತ ಹೆಚ್ಚು ವರ್ಗಾವಣೆ ಮಾಡುವಂತಿಲ್ಲ. ಇದು ಸರ್ಕಾರದ ನಿಯಮ’ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು. ಸಂಸದ ಸಾಗರ್ ಖಂಡ್ರೆ ಮಾತನಾಡಿ ಯಾವ್ಯಾವ ಇಲಾಖೆಯ ಅಧಿಕಾರಿಗಳು ನಾಲ್ಕು ವರ್ಷಗಳಿಗಿಂತ ಹೆಚ್ಚಿನ ಅವಧಿಯಿಂದ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂತಹವರ ಪಟ್ಟಿ ಮಾಡಿ ಸಲ್ಲಿಸಬೇಕು’ ಎಂದು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.