ADVERTISEMENT

1.5 ಲಕ್ಷ ಜನರಿಗೆ ಆಹಾರ ಪೊಟ್ಟಣ ವಿತರಣೆ

ಮಾನವೀಯತೆ ಮೆರೆದ ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 13:26 IST
Last Updated 5 ಜೂನ್ 2021, 13:26 IST
ಧರ್ಮಸಿಂಗ್ ಅವರ ಹೆಸರಿನ ಫೌಂಡೇಶನ್ ವತಿಯಿಂದ ಬಸವಕಲ್ಯಾಣದಲ್ಲಿ ಬಡವರಿಗೆ ಆಹಾರ ಪೊಟ್ಟಣ ವಿತರಿಸಲಾಯಿತು
ಧರ್ಮಸಿಂಗ್ ಅವರ ಹೆಸರಿನ ಫೌಂಡೇಶನ್ ವತಿಯಿಂದ ಬಸವಕಲ್ಯಾಣದಲ್ಲಿ ಬಡವರಿಗೆ ಆಹಾರ ಪೊಟ್ಟಣ ವಿತರಿಸಲಾಯಿತು   

ಬೀದರ್: ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಅವರು ತಮ್ಮ ತಂದೆ ಧರ್ಮಸಿಂಗ್ ಅವರ ಹೆಸರಿನ ಫೌಂಡೇಶನ್ ವತಿಯಿಂದ ಹದಿನೈದು ದಿನಗಳ ಅವಧಿಯಲ್ಲಿ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ 1.5 ಲಕ್ಷ ಜನರಿಗೆ ಉಚಿತ ಆಹಾರ ಪೊಟ್ಟಣ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಕೋವಿಡ್ ಪ್ರಯುಕ್ತ ವಿಧಿಸಲಾದ ಲಾಕ್‍ಡೌನ್‍ನಿಂದ ತೊಂದರೆಗೆ ಒಳಗಾದ ಬಸವಕಲ್ಯಾಣ ನಗರ ಹಾಗೂ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳ ಬಡವರು, ನಿರ್ಗತಿಕರು, ಅಲೆಮಾರಿಗಳು, ಕೊರೊನಾ ಸೋಂಕಿತರು, ರೋಗಿಗಳು ಸೇರಿದಂತೆ 10 ಸಾವಿರ ಜನರಿಗೆ ಆಹಾರ ಪೂರೈಕೆ ಮಾಡುತ್ತಿದ್ದಾರೆ.

ಚಪಾತಿ, ಪಲ್ಯ, ಅನ್ನ, ಸಾಂಬಾರು, ಮೊಸರು, ಮಜ್ಜಿಗೆ ಒಳಗೊಂಡ ಆಹಾರ ಪೊಟ್ಟಣ ವಿತರಣೆ ಮಾಡುತ್ತಿದ್ದಾರೆ. ಒಂದು ದಿನ ವೆಜ್ ಬಿರಿಯಾನಿ, ಮತ್ತೊಂದು ದಿನ ಆಲೂಭಾತ್, ಇನ್ನೊಂದು ದಿನ ಚಿತ್ರಾನ್ನ ಹೀಗೆ ಆಹಾರ ಒದಗಿಸುತ್ತಿದ್ದಾರೆ.

ADVERTISEMENT

‘ಸಂಕಷ್ಟದಲ್ಲಿದ್ದವರಿಗೆ ನೆರವಾಗು ವುದು ನಮ್ಮ ಧರ್ಮ. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 15 ದಿನಗಳಿಂದ ನಿರಂತರ ಅನ್ನ ದಾಸೋಹ ಮಾಡುತ್ತಿದ್ದೇನೆ. ಲಾಕ್‍ಡೌನ್ ಮುಗಿಯುವವರೆಗೂ ಆಹಾರ ಪೊಟ್ಟಣ ವಿತರಿಸಲಾಗುವುದು’ ಎಂದು ವಿಜಯಸಿಂಗ್ ತಿಳಿಸಿದ್ದಾರೆ.

‘ಆಹಾರ ಸರಬರಾಜು ಮಾಡಲು ನಿತ್ಯ 10 ಕ್ವಿಂಟಲ್ ಅಕ್ಕಿ ಬಳಸಲಾಗುತ್ತಿದೆ. ಅಡುಗೆ ತಯಾರಿಕೆ, ಪ್ಯಾಕಿಂಗ್ ಹಾಗೂ ವಿತರಣೆ ಕಾರ್ಯದಲ್ಲಿ ಪ್ರತ್ಯೇಕ ತಂಡಗಳು ಕಾರ್ಯನಿರತವಾಗಿವೆ. ಧರ್ಮಸಿಂಗ್ ಫೌಂಡೇಶನ್ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ.

‘ಸೋಂಕಿತರನ್ನು ತುರ್ತಾಗಿ ಆಸ್ಪತ್ರೆಗೆ ಸಾಗಿಸಲು ಬಸವಕಲ್ಯಾಣ ಹಾಗೂ ಹುಲಸೂರು ತಾಲ್ಲೂಕಿಗೆ ಒಟ್ಟು ಎರಡು ಹಾಗೂ ಔರಾದ್ ತಾಲ್ಲೂಕಿಗೆ ಒಂದು ಆಂಬುಲೆನ್ಸ್ ಒದಗಿಸಲಾಗಿದೆ. ಆಂಬುಲೆನ್ಸ್‌ಗಳು ರೋಗಿಗಳಿಗೆ ಉಚಿತ ಸೇವೆ ನೀಡಲಿವೆ. ಅವಶ್ಯಕತೆ ಇರುವವರು ಆಂಬುಲೆನ್ಸ್ ಸೇವೆಯ ಪ್ರಯೋಜನ ಪಡೆಯಬೇಕು’ ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.