ADVERTISEMENT

ಬೀದರ್: 100 ಕುಟುಂಬಗಳಿಗೆ ಆಹಾರಧಾನ್ಯ ಕಿಟ್ ವಿತರಣೆ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ನೆರವು

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 13:16 IST
Last Updated 26 ನವೆಂಬರ್ 2021, 13:16 IST
ಬೀದರ್‌ನ ಶ್ರೀಮತಿ ಲಕ್ಷ್ಮೀಬಾಯಿ ಕಮಠಾಣೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಡ ಕುಟುಂಬಗಳ ಮಹಿಳೆಯರಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಆಹಾರಧಾನ್ಯ ಕಿಟ್ ಉಚಿತವಾಗಿ ವಿತರಿಸಲಾಯಿತು
ಬೀದರ್‌ನ ಶ್ರೀಮತಿ ಲಕ್ಷ್ಮೀಬಾಯಿ ಕಮಠಾಣೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಡ ಕುಟುಂಬಗಳ ಮಹಿಳೆಯರಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಆಹಾರಧಾನ್ಯ ಕಿಟ್ ಉಚಿತವಾಗಿ ವಿತರಿಸಲಾಯಿತು   

ಬೀದರ್: ಕೋವಿಡ್ ಪ್ರಯುಕ್ತ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಇಲ್ಲಿಯ ವಿದ್ಯಾನಗರ ಕಾಲೊನಿಯಲ್ಲಿ ಇರುವ ಶ್ರೀಮತಿ ಲಕ್ಷ್ಮೀಬಾಯಿ ಕಮಠಾಣೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಜಿಲ್ಲೆಯ ಬಡತನ ರೇಖೆಗಿಂತ ಕೆಳಗಿರುವ 100 ಕುಟುಂಬಗಳಿಗೆ ಆಹಾರಧಾನ್ಯ ಕಿಟ್ ಉಚಿತವಾಗಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಪ್ರತಿನಿಧಿ ಡಾ. ವೈಜಿನಾಥ ಕಮಠಾಣೆ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆ ಸಮಾಜ ಸೇವಾ ಸಂಸ್ಥೆಯಾಗಿದೆ. ತನ್ನ ಚಟುವಟಿಕೆಗಳ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿದೆ ಎಂದು ಹೇಳಿದರು.

ಕೋವಿಡ್ ಸಂದರ್ಭದಲ್ಲಿ ಸಂಸ್ಥೆಯಿಂದ ಮಾಸ್ಕ್, ಸ್ಯಾನಿಟೈಸರ್ ವಿತರಣೆ ಸೇರಿದಂತೆ ವಿವಿಧ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು. ಕೋವಿಡ್‍ನಿಂದ ಸಂಕಷ್ಟಕ್ಕೆ ಒಳಗಾದ ಕುಟುಂಬಗಳಿಗೆ ನೆರವಾಗಲು ಇದೀಗ ಆಹಾರಧಾನ್ಯ ಕಿಟ್ ವಿತರಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ನೌಬಾದ್‍ನ ಬಿಆರ್‍ಸಿ ವಿಜಯಕುಮಾರ ಬಂಬಳಗೆ ಮಾತನಾಡಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಾಮಾಜಿಕ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿದೆ. ಭೂಕಂಪ, ಪ್ರವಾಹ ಸೇರಿದಂತೆ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ತಕ್ಷಣ ಜನರ ನೆರವಿಗೆ ಧಾವಿಸುತ್ತ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬೀದರ್ ಘಟಕದ ಕಾರ್ಯದರ್ಶಿ ಡಾ. ವಿದ್ಯಾ ಎಸ್. ಪಾಟೀಲ ಮಾತನಾಡಿ, ಸಂಸ್ಥೆಯು ಜಿಲ್ಲೆಯಲ್ಲಿ ಶಿಕ್ಷಣ, ಆರೋಗ್ಯ, ನೈರ್ಮಲ್ಯ, ಪರಿಸರ ಮೊದಲಾದ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಸಂವಿಧಾನ ದಿನದ ಪ್ರಯುಕ್ತ ಬೀದರ್ ಗ್ರಾಮೀಣ ಪಿಎಸ್‍ಐ ಸುವರ್ಣಾ ಪ್ರತಿಜ್ಞಾ ವಿಧಿ ಬೋಧಿಸಿದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬೀದರ್ ಘಟಕದ ಸಭಾಪತಿ ಶಿವರಾಜ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಸಂಸ್ಥೆಯ ಉಪ ಸಭಾಪತಿ ಡಾ. ಕೆ. ರಾಜಕುಮಾರ, ಖಜಾಂಚಿ ಡಾ. ಸಿ. ಆನಂದರಾವ್, ಬಸವ ತತ್ವ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ದಿಲೀಪ್ ಕಮಠಾಣೆ, ಬೀದರ್‍ನ ಬಿಆರ್‍ಸಿ ಮಂಜುನಾಥ ಬಿರಾದಾರ, ಪ್ರಾಚಾರ್ಯ ಧನರಾಜ ಪಾಟೀಲ, ವಿ.ಕೆ. ಇಂಟರ್‍ನ್ಯಾಷನಲ್ ಪ್ರಾಚಾರ್ಯ ನಾಗೇಶ ಬಿರಾದಾರ, ಉಪನ್ಯಾಸಕರಾದ ಮಹಮ್ಮದ್ ಯುನೂಸ್, ಜಗದೀಶ್ ಹಿಬಾರೆ ಇದ್ದರು. ವೈಜಿನಾಥ ಪಾಟೀಲ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.