ADVERTISEMENT

ಕುಸುಬೆ, ಜೋಳ, ಗೋಧಿ, ಕಡಲೆಗೂ ರೋಗ

ಚಂದ್ರಕಾಂತ ಮಸಾನಿ
Published 5 ಡಿಸೆಂಬರ್ 2022, 4:18 IST
Last Updated 5 ಡಿಸೆಂಬರ್ 2022, 4:18 IST
ಚಿಟಗುಪ್ಪ ತಾಲ್ಲೂಕಿನ ಬೇಮಳಖೇಡದಲ್ಲಿ ತೊಗರಿ ಬೆಳೆ ಪರಿಶೀಲಿಸುತ್ತಿರುವ ಅಧಿಕಾರಿ
ಚಿಟಗುಪ್ಪ ತಾಲ್ಲೂಕಿನ ಬೇಮಳಖೇಡದಲ್ಲಿ ತೊಗರಿ ಬೆಳೆ ಪರಿಶೀಲಿಸುತ್ತಿರುವ ಅಧಿಕಾರಿ   

ಬೀದರ್‌: ಜಿಲ್ಲೆಯ ರೈತರು ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಲೇ ಇದ್ದಾರೆ. ಪ್ರಸಕ್ತ ವರ್ಷ ಮುಂಗಾರಿನಲ್ಲಿ ಮಳೆ ಅಬ್ಬರಿಸಿದರೆ, ಹಿಂಗಾರಿನಲ್ಲಿ ಕೀಟ ಬಾಧೆ ಕಾಣಿಸಿಕೊಂಡಿದೆ. ತೊಗರಿ ಅಲ್ಲದೇ ಇನ್ನುಳಿದಬೆಳೆಗಳಲ್ಲೂ ಕೀಟ ಬಾಧೆ ಕಾಣಿಸಿಕೊಂಡು ರೈತರ ನಿದ್ದೆಗೆಡಿಸಿದೆ.

ವಾಣಿಜ್ಯ ಬೆಳೆಯಾದ ಕಬ್ಬು ಬೆಳೆದು ಕಾರ್ಖಾನೆಗೆ ಸಾಗಿಸಿದರೂ ಕಾರ್ಖಾನೆಗಳು ರೈತರಿಗೆ ಸಕಾಲದಲ್ಲಿ ಬಾಕಿ ಹಣ ಪಾವತಿಸುತ್ತಿಲ್ಲ. ತೊಗರಿ ಬೆಳೆದು ಆದಾಯ ಪಡೆದುಕೊಳ್ಳಬೇಕೆಂದರೂ ನೆಟೆ ರೋಗ ತಗುಲಿ ಬೆಳೆ ಸಂಪೂರ್ಣ ನಷ್ಟವಾಗಿದೆ. ಕಬ್ಬು ಹಾಗೂ
ತೊಗರಿಯ ಉಸಾಬರಿಯೇ ಬೇಡ ಎಂದು ಅಂತರ ಕಾಯ್ದುಕೊಂಡು ಹಿಂಗಾರು ಜೋಳ, ಗೋಧಿ ಹಾಗೂ ಕುಸುಬೆ ಬೆಳೆದವರೂ ಈಗ ತೊಂದರೆ ಅನುಭವಿಸುತ್ತಿದ್ದಾರೆ.

ತೊಗರಿ ಜತೆಗೆ ಹಿಂಗಾರು ಜೋಳ, ಗೋಧಿ ಹಾಗೂ ಕುಸುಬೆ ಬೆಳೆಯಲ್ಲೂ ರೋಗ ಕಾಣಿಸಿಕೊಂಡಿದ್ದು, ರೈತರು ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಕೃಷಿ ಕೇಂದ್ರಗಳಿಗೂ ಭೇಟಿ ಕೊಟ್ಟು ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಬೆಳೆಗಳ ರೋಗ ನಿಯಂತ್ರಿಸುವ ದಿಸೆಯಲ್ಲಿ ಕೃಷಿ ಇಲಾಖೆ ಹಾಗೂ ಜನವಾಡದ ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ.

ADVERTISEMENT

ಮುಂಗಾರು ಹಾಗೂ ಹಿಂಗಾರು ಪೂರ್ವದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ನೀಡಿದ ಸಲಹೆ ಹಾಗೂ ಟಿಪ್ಸ್‌ಗಳನ್ನು ಪಾಲಿಸದೇ ಇರುವ ಕಾರಣ ಜಿಲ್ಲೆಯ ರೈತರು ಹೆಚ್ಚು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ನಿರಂತರವಾಗಿ ತೊಗರಿ ಬೆಳೆಯದಂತೆ
ಮುನ್ಸೂಚನೆ ನೀಡಿದರೂ ಹೆಚ್ಚಿನ ಲಾಭಗಳಿಸುವ ಆಸೆಯಲ್ಲಿ ಕಷ್ಟಕ್ಕೆ ಒಳಗಾಗಿದ್ದಾರೆ.

ಹಿಂಗಾರು ಜೋಳದಲ್ಲಿ ಕಾಂಡ ಕೊರೆಯುವ ಹುಳುವಿನ ಕಾಟ: ಜೋಳದ ಎಲೆಯಲ್ಲಿ ಅಡ್ಡಡ್ಡ ಸಾಲಾಗಿ ರಂಧ್ರಗಳು
ಕಾಣುತ್ತವೆ. ಕೀಟಗಳು ಎಲೆಗಳ ಮಧ್ಯ ಭಾಗದಲ್ಲಿ ಕೊರೆದು ತಿನ್ನುತ್ತವೆ. ಸಣ್ಣ ಕೀಟಗಳು ಕಾಂಡದ ಮಧ್ಯಭಾಗವನ್ನು ಸೇರಿ ಕಾಂಡ ಕೊರೆಯುವುದರಿಂದ ಸುಳಿ ಮುದುಡಿಕೊಳ್ಳುತ್ತಿದೆ. ಇದರಿಂದ ರೈತರು ಆತಂಕಗೊಂಡಿದ್ದಾರೆ.

ಜೋಳಕ್ಕೆ ಸುಳಿ ರೋಗ ಕಾಣಿಸಿಕೊಂಡಿದೆ. ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಔರಾದ್‌ ತಾಲ್ಲೂಕಿನ ಸಂತಪುರ ಹೋಬಳಿಯ ನಾಗೂರ(ಬಿ) ಗ್ರಾಮದ ಸೂರ್ಯಕಾಂತ ರಾಚಪ್ಪ ಕೋಟೆ ಮನವಿ ಮಾಡಿದ್ದಾರೆ.

ಪ್ರತಿ ಎಕರೆಗೆ 3 ಕಿ.ಗ್ರಾಂ ನಂತೆ ಕಾರ್ಬೋಫ್ಯುರನ್ ಶೇ 3 ರ ಹರಳು ಅಥವಾ ಕಾರ್ಬರಿಲ್ ಶೇ 4 ಹರಳು ಅಥವಾ ಲಿಂಡೇನ್
ಶೇ 1 ರ ಹರಳನ್ನು ಸುಳಿಯಲ್ಲಿ ಹಾಕಬೇಕು ಅಥವಾ ಕ್ಲೊರಾಂಟ್ರಿನಿಲಿಪ್ರೋಲ್ 18.5 ಎಸ್.ಸಿ 0.2 ಪ್ರತಿ ಲೀಟರ್‌ ನೀರಿಗೆ ಬೆರೆಸಿ 20-25 ದಿವಸದ ಬೆಳೆಗೆ ಸಿಂಪಡಿಸಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರತೇಂದ್ರನಾಥ ಸುಗೂರ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.