ADVERTISEMENT

ಗೃಹ ನಿರ್ಬಂಧಿತ ವ್ಯಕ್ತಿಗಳ ಮೇಲೆ ನಿಗಾ ಇರಿಸಿ

ತಹಶೀಲ್ದಾರರು, ತಾಲ್ಲೂಕು ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿ ವಿಡಿಯೊ ಸಂವಾದ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 11:48 IST
Last Updated 24 ಮಾರ್ಚ್ 2020, 11:48 IST


ಬೀದರ್‌: ‘ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಗೃಹ ನಿರ್ಬಂಧನದಲ್ಲಿರುವ ವ್ಯಕ್ತಿಗಳು ಎಲ್ಲಿಯೂ ಓಡಾಡದಂತೆ ಕ್ರಮ ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಸೋಮವಾರ ಇಲ್ಲಿ ತಹಶೀಲ್ದಾರರು ಹಾಗೂ ತಾಲ್ಲೂಕು ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿ ಅವರು ಮಾತನಾಡಿದರು.

‘ಗೃಹ ನಿರ್ಬಂಧಿತ ವ್ಯಕ್ತಿಗಳನ್ನು ಗಮನಿಸಲು ಹೋಬಳಿ ಮಟ್ಟದಲ್ಲಿ ರಚಿಸಿರುವ ಎರಡು ತಂಡಗಳು ಪ್ರತಿ ದಿನ ತಪ್ಪದೇ ಗೃಹ ನಿರ್ಬಂಧಿತ ವ್ಯಕ್ತಿಗಳಿರುವ ಮನೆಗಳಿಗೆ ಭೇಟಿ ನೀಡಬೇಕು. ಅಕ್ಕ ಪಕ್ಕದ ಮನೆಯವರೊಂದಿಗೆ ಮಾತನಾಡಿಸಿ ಅವರು ಮನೆಯಲ್ಲಿಯೇ ಇದ್ದಾರೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಈ ಕಾರ್ಯಕ್ಕಾಗಿ ಆಶಾ ಕಾರ್ಯಕರ್ತೆಯರು, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು, ವಾಟರ್‌ಮೆನ್‌ನಂತಹ ಸಿಬ್ಬಂದಿಯ ನೆರವು ಪಡೆಯಬಹುದು’ ಎಂದು ತಿಳಿಸಿದರು.

ADVERTISEMENT

ಗೃಹ ನಿರ್ಬಂಧನದಲ್ಲಿ ಇರುವವರ ಪೈಕಿ ಯಾರಲ್ಲಿಯಾದರೂ ರೋಗ ಲಕ್ಷಣಗಳು ಕಾಣಿಸಿದಲ್ಲಿ ತಕ್ಷಣ ಆಂಬುಲನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು. ಯಾವುದಾದರೂ ಗೊಂದಲಗಳಿದ್ದಲ್ಲಿ ತಕ್ಷಣ ಮೇಲಧಿಕಾರಿಗಳ ಗಮನಕ್ಕೆ ತಂದು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಈ ವಿಷಯದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರಿಸುವುದು ಸರಿಯಲ್ಲ’ ಎಂದು ಎಚ್ಚರಿಸಿದರು.

ಗೃಹ ನಿರ್ಬಂಧನದಲ್ಲಿರುವ ವ್ಯಕ್ತಿಗಳಿಗೆ ತಪ್ಪದೇ ಮಾಸ್ಕ್ ಹಾಗೂ ಸ್ಯಾನಿಟೈಸರ್‌ಗಳನ್ನು ಒದಗಿಸಬೇಕು. ಪದೇ ಪದೇ ಕೈ ತೊಳೆಯುವುದು, ಮಾಸ್ಕ್ ಧರಿಸುವುದು ಸೇರಿದಂತೆ ಎಲ್ಲ ರೋಗ ನಿಯಂತ್ರಣ ಕ್ರಮಗಳನ್ನು ಅನುಸರಿಸುವಂತೆ ನೋಡಿಕೊಳ್ಳಬೇಕು. ಆರೋಗ್ಯ ಇಲಾಖೆಯಿಂದ ಮುದ್ರಿಸಲಾಗಿರುವ ರೋಗ ನಿಯಂತ್ರಣ ಕುರಿತ ಕರಪತ್ರಗಳನ್ನು ಪ್ರತಿಯೊಂದು ಮನೆಗೆ ತಲುಪಿಸಬೇಕು’ ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗ್ಯಾನೇಂದ್ರಕುಮಾರ ಗಂಗ್ವಾರ್‌ ಮಾತನಾಡಿ, ‘ವಿಶ್ವದಾದ್ಯಂತ ಭಯಭೀತಿ ಹುಟ್ಟಿಸಿರುವ ಸೋಂಕು ಬೀದರ್‌್ ಜಿಲ್ಲೆಗೆ ಬಾರದಂತಿರಲು ಎಲ್ಲ ಅಧಿಕಾರಿಗಳು ಶಿಸ್ತಿನಿಂದ ಕೆಲಸ ನಿರ್ವಹಿಸಬೇಕಿದೆ. ಇದಕ್ಕಾಗಿ ವಿವಿಧ ಸಮಿತಿಗಳನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಸಮಿತಿಯವರು ತಮ್ಮ ಜವಾಬ್ದಾರಿಗಳನ್ನು ಸೂಕ್ತವಾಗಿ ನಿಭಾಯಿಸಬೇಕು’ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್ ಮಾತನಾಡಿ, ‘ಗೃಹ ನಿರ್ಬಂಧನದಲ್ಲಿರುವ ವ್ಯಕ್ತಿಗಳು ಓಡಾಡದಂತೆ ಗಮನಿಸಲು ಹೋಬಳಿ ಮಟ್ಟದಲ್ಲಿ ರಚಿಸಿರುವ ತಂಡಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ಸೇರಿಸಲಾಗಿದೆ. ಇವರು ಯಾವುದೇ ಲೋಪಗಳಿಗೆ ಆಸ್ಪದ ನೀಡದಂತೆ ಕರ್ತವ್ಯ ನಿರ್ವಹಿಸಬೇಕು’ ಎಂದು ಸೂಚಿಸಿದರು.

ಎಲ್ಲ ತಹಶೀಲ್ದಾರರು ಹೊರ ರಾಜ್ಯ ಮತ್ತು ಹೊರ ಜಿಲ್ಲೆಗಳಿಂದ ಆಗಮಿಸಿದವರು ಹಾಗೂ ಗೃಹ ನಿರ್ಬಂಧದಲ್ಲಿರುವರ ವಿವರಣೆ ನೀಡಿದರು. ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಆಯಾ ತಾಲ್ಲೂಕುಗಳಲ್ಲಿ ಕೈಗೊಂಡಿರುವ ಕ್ರಮಗಳ ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಉಪ ವಿಭಾಗಾಧಿಕಾರಿ ಅಕ್ಷಯ್ ಶ್ರೀಧರ್, ಬ್ರಿಮ್ಸ್ ನಿರ್ದೇಶಕ ಡಾ.ಶಿವಕುಮಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.