ADVERTISEMENT

ಪೂಜಾ ಪ್ರಥಮ, ಚೇತನ್ ದ್ವಿತೀಯ ಸ್ಥಾನ

ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2021, 3:06 IST
Last Updated 23 ಫೆಬ್ರುವರಿ 2021, 3:06 IST
ಬೀದರ್‌ನಲ್ಲಿ ನಡೆದ ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ ಜೀಜಾಮಾತಾ ಕನ್ಯಾ ಪ್ರೌಢ ಶಾಲೆಯ ವಿದ್ಯಾರ್ಥಿನಿ ಪೂಜಾ ಮೊಗಲಪ್ಪ ಮತ್ತು ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿ ಚೇತನ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು
ಬೀದರ್‌ನಲ್ಲಿ ನಡೆದ ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ ಜೀಜಾಮಾತಾ ಕನ್ಯಾ ಪ್ರೌಢ ಶಾಲೆಯ ವಿದ್ಯಾರ್ಥಿನಿ ಪೂಜಾ ಮೊಗಲಪ್ಪ ಮತ್ತು ಕರ್ನಾಟಕ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿ ಚೇತನ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಬೀದರ್: ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಸ್ಪರ್ಧೆಯಲ್ಲಿ ಇಲ್ಲಿಯ ಜೀಜಾಮಾತಾ ಕನ್ಯಾ ಪ್ರೌಢ ಶಾಲೆಯ 10ನೇ ವಿದ್ಯಾರ್ಥಿನಿ ಪೂಜಾ ಮೊಗಲಪ್ಪ ಪ್ರಥಮ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್‍ನ 10ನೇ ವಿದ್ಯಾರ್ಥಿ ಚೇತನ್ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಒಟ್ಟು 100 ಅಂಕಗಳ ಲಿಖಿತ ಪರೀಕ್ಷೆ, ವಿಜ್ಞಾನ ಪ್ರಯೋಗ ಹಾಗೂ ಮೌಖಿಕ ಸಂದರ್ಶನ ಆಧಾರಿತ ಸ್ಪರ್ಧೆಯಲ್ಲಿ ಪೂಜಾ ₹5 ಸಾವಿರ ಹಾಗೂ ಚೇತನ್ ₹3 ಸಾವಿರ ನಗದು ಬಹುಮಾನಕ್ಕೆ ಪಾತ್ರರಾದರು. ಮಾರ್ಚ್ 13 ಮತ್ತು 14ರಂದು ಯಾದಗಿರಿಯಲ್ಲಿ ನಡೆಯಲಿರುವ ಕಲಬುರ್ಗಿ ವಿಭಾಗ ಮಟ್ಟದ ಯುವ ವಿಜ್ಞಾನಿ ಸ್ಪರ್ಧೆಗೆ ಅರ್ಹತೆಯನ್ನೂ ಗಳಿಸಿದರು.
ಡಿ.ವಿ. ತುಪ್ಪದ ಹಾಗೂ ಡಾ. ಪ್ರಭಾ ನಿರ್ಣಾಯಕರಾಗಿದ್ದರು. ಜಿಲ್ಲೆಯ ಪ್ರೌಢಶಾಲೆಗಳ ಒಟ್ಟು 56 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಸ್ಪರ್ಧೆಗಳಿಂದ ಪ್ರೇರಣೆ: ಜೀಜಾಮಾತಾ ಕನ್ಯಾ ಪ್ರೌಢ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಯುವ ವಿಜ್ಞಾನಿ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದ ಬಿ.ವಿ. ಭೂಮರಡ್ಡಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಪ್ರೊ. ಅನಿಲಕುಮಾರ ಆಣದೂರೆ, ‘ಸ್ಪರ್ಧೆಗಳಿಂದ ವಿದ್ಯಾರ್ಥಿಗಳಿಗೆ ಪ್ರೇರಣೆ ದೊರೆಯುತ್ತದೆ. ಜಿಲ್ಲೆಯ ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಛಾಪು ಮೂಡಿಸಲು ಪ್ರಯತ್ನಿಸಬೇಕು’ ಎಂದರು.

ADVERTISEMENT

ರಾಜ್ಯ ವಿಜ್ಞಾನ ಪರಿಷತ್ ಕಾರ್ಯಕಾರಿಣಿ ಸದಸ್ಯ ಪ್ರಕಾಶ ಲಕ್ಕಶೆಟ್ಟಿ ಮಾತನಾಡಿ, ‘ಮಾರ್ಚ್ 19, 20 ಮತ್ತು 21 ರಂದು ಜಿಲ್ಲೆಯಲ್ಲಿ ಮೊದಲ ಬಾರಿಗೆ ರಾಜ್ಯ ವಿಜ್ಞಾನ ಪರಿಷತ್ತಿನ ರಾಜ್ಯ ಮಟ್ಟದ ಸಮಾವೇಶ ನಡೆಯಲಿದೆ’ ಎಂದು ಹೇಳಿದರು.

ರಾಜ್ಯ ವಿಜ್ಞಾನ ಪರಿಷತ್ ಮತ್ತೋರ್ವ ಕಾರ್ಯಕಾರಿಣಿ ಸದಸ್ಯ ಮಹಾರುದ್ರಪ್ಪ ಆಣದೂರೆ ಮಾತನಾಡಿ, ‘ವಿದ್ಯಾರ್ಥಿಗಳಲ್ಲಿ ವಿಜ್ಞಾನ ಆಸಕ್ತಿ ಬೆಳೆಸಲು ಪರಿಷತ್ತಿನಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗು ತ್ತಿದೆ. ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲಾಗುತ್ತಿದೆ’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜೀಜಾಮಾತಾ ಕನ್ಯಾ ಪ್ರೌಢ ಶಾಲೆ ಮುಖ್ಯಶಿಕ್ಷಕ ಪರಮೇಶ್ವರ ಬಿರಾದಾರ ಮಾತನಾಡಿ, ‘ಇಂದು ಜಗತ್ತು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಬಹಳಷ್ಟು ಪ್ರಗತಿ ಸಾಧಿಸಿದೆ. ಕಚೇರಿ ಕೆಲಸ ಕಾರ್ಯ ಹಾಗೂ ನಿತ್ಯದ ಜೀವನದಲ್ಲಿ ವಿಜ್ಞಾನ ಅನೇಕ ಅನುಕೂಲಗಳನ್ನು ಮಾಡಿಕೊಟ್ಟಿದೆ. ಪ್ರತಿಯೊಬ್ಬರೂ ವಿಜ್ಞಾನದ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಸಲಹೆ ಮಾಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಜ್ಞಾನ ವಿಷಯ ಪರಿವೀಕ್ಷಕ ಗುಂಡಪ್ಪ ಹುಡಗೆ ಮಾತನಾಡಿದರು. ಗೋಯಲ್ ಫಾರ್ಮಸಿ ಕಾಲೇಜು ಉಪನ್ಯಾಸಕ ರಾಜಕುಮಾರ ಧುಮ್ಮನಸೂರೆ, ಸಹ ಶಿಕ್ಷಕರಾದ ಅನಿಲಕುಮಾರ ಟೇಕೊಳೆ, ಪ್ರಭಣ್ಣ ಕಾಳಗೊಂಡ, ಅನಿಲ ಕುಮಾರ ರಾಮರತನ್, ಅಂಬಾದಾಸ ಜಾನಾ ಪುರೆ, ಮೋಹನ್ ಜೋಶಿ, ಸಂಜಯ್ ಪಾಟೀಲ, ಆನಂದ, ಅರ್ಜುನ, ಭೀಮಶಾ, ಬಸವರಾಜ ಗಾಯತ್ರಿ ಇದ್ದರು. ಸುಧೀರಕುಮಾರ ಬುಜ್ಜಿ ಸ್ವಾಗತಿಸಿದರು. ಚಂದ್ರಕಾಂತ ಚಿಕಲೆ ನಿರೂಪಿಸಿದರು. ರಾಜಕುಮಾರ ಗಾದಗೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.