ADVERTISEMENT

ಗುಂಪಾ ರಿಂಗ್‌ರೋಡ್‌ ಪರಿಶೀಲಿಸಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ವಿವಿಧ ಬಡಾವಣೆಗಳಿಗೆ ಕಾಲ್ನಡಿಗೆಯಲ್ಲಿ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿದ ಡಿಸಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 6:34 IST
Last Updated 11 ಡಿಸೆಂಬರ್ 2025, 6:34 IST
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಅಧಿಕಾರಿಗಳ ತಂಡದೊಂದಿಗೆ ಬುಧವಾರ ಬೀದರ್‌ನ ಗುಂಪಾ ರಿಂಗ್‌ರೋಡ್‌ ಪರಿಶೀಲಿಸಿದರು. ಈ ವೇಳೆ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಅಧಿಕಾರಿಗಳ ತಂಡದೊಂದಿಗೆ ಬುಧವಾರ ಬೀದರ್‌ನ ಗುಂಪಾ ರಿಂಗ್‌ರೋಡ್‌ ಪರಿಶೀಲಿಸಿದರು. ಈ ವೇಳೆ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು   

ಬೀದರ್‌: ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಅವರ ಇಡೀ ಅಧಿಕಾರಿಗಳ ತಂಡದೊಂದಿಗೆ ಬುಧವಾರ ನಗರದ ವಿವಿಧ ಬಡಾವಣೆಗಳಿಗೆ ಭೇಟಿ ಕೊಟ್ಟು ಖುದ್ದು ಸಮಸ್ಯೆ ಪರಿಶೀಲಿಸಿ, ಜನರ ಗೋಳು ಕೇಳಿದರು.

ನಗರದ ಹಡಪದ ಅಪ್ಪಣ್ಣ ವೃತ್ತದಿಂದ ಗುಂಪಾ ಸಿದ್ದಾರೂಢ ವೃತ್ತದವರೆಗಿನ ರಿಂಗ್‌ರೋಡ್‌ ರಸ್ತೆ ಅತಿಕ್ರಮಣವಾಗಿದ್ದು, ಅದನ್ನು ತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ವಿವಿಧ ಕಾಲೊನಿಯ ಜನ ಮಂಗಳವಾರ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಕಾಲೊನಿಗಳಲ್ಲಿ ಮೂಲಸೌಕರ್ಯ ಕಲ್ಪಿಸಬೇಕೆಂದು ಆಗ್ರಹಿಸಿದ್ದರು. ಮನವಿ ಸ್ವೀಕರಿಸಿ, ಖುದ್ದು ಸ್ಥಳಕ್ಕೆ ಬಂದು ಪರಿಶೀಲಿಸುವುದಾಗಿ ಆಶ್ವಾಸನೆ ಕೊಟ್ಟಿದ್ದರು.

ಅದರಂತೆ ಬುಧವಾರ ಗುಂಪಾ ಸಿದ್ದಾರೂಢ ವೃತ್ತಕ್ಕೆ ಬಂದು ಪರಿಶೀಲಿಸಿದರು. ಅಲ್ಲಿಂದ ಹಡಪದ ಅಪ್ಪಣ್ಣ ವೃತ್ತದವರೆಗೆ ಕಾಲ್ನಡಿಗೆಯಲ್ಲಿ ತೆರಳಿ ಪರಿಶೀಲಿಸಿದರು. ಕಟ್ಟಡಗಳ ಮಾಲೀಕರೊಂದಿಗೆ ಸಭೆ ನಡೆಸಿ, ಏನು ಮಾಡಬಹುದು ಎಂಬುದರ ಬಗ್ಗೆ ವರದಿ ಸಲ್ಲಿಸಬೇಕೆಂದು ಸ್ಥಳದಲ್ಲಿದ್ದ ಉಪವಿಭಾಗಾಧಿಕಾರಿ ಮುಹಮ್ಮದ್‌ ಶಕೀಲ್‌ ಅವರಿಗೆ ಸೂಚಿಸಿದರು.

ADVERTISEMENT

ಆನಂತರ ಸಿಎಂಸಿ ಕಾಲೊನಿಗೆ ತೆರಳಿದರು. ಅಲ್ಲಿನ ಮಹಿಳೆಯರು, ‘ಅನೇಕ ವರ್ಷಗಳಾದರೂ ನಮ್ಮ ಬಡಾವಣೆಯಲ್ಲಿ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲ. ಮಳೆ ಬಂದರೆ ನಡೆದಾಡಲು ಕಷ್ಟವಾಗುತ್ತದೆ. ವರ್ಷವಿಡೀ ದೂಳು ಇರುತ್ತದೆ. ಮಣ್ಣಿನ ರಸ್ತೆಯಲ್ಲೇ ಓಡಾಡುವಂತಾಗಿದೆ. ಕೂಡಲೇ ರಸ್ತೆ ದುರಸ್ತಿಪಡಿಸಬೇಕು’ ಎಂದು ಮನವಿ ಮಾಡಿದರು. ಈ ಸಂಬಂಧ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಸೂಚನೆ ಕೊಡುತ್ತೇನೆ. ಅವರು ರಸ್ತೆ ಮಾಡಿಸಿಕೊಡಲು ಕ್ರಮ ಕೈಗೊಳ್ಳುತ್ತಾರೆ: ಎಂದು ಶಿಲ್ಪಾ ಶರ್ಮಾ ಹೇಳಿದರು.

ಇದಾದ ನಂತರ ಮೌನೇಶ್ವರ ಮಂದಿರದಿಂದ ಗುಂಪಾ ಯಮಹಾ ಶೋ ರೂಮ್‌ ವರೆಗೆ ಸಂಪರ್ಕ ಕಲ್ಪಿಸುವ ರಸ್ತೆ ವೀಕ್ಷಿಸಿದರು. ಆನಂತರ ಅಗ್ರಿಕಲ್ಚರ್‌ ಕಾಲೊನಿಯ ಉದ್ಯಾನಕ್ಕೆ ಭೇಟಿ ಕೊಟ್ಟು ಪರಿಶೀಲಿಸಿದರು. ಉದ್ಯಾನವನ್ನು ಅಭಿವೃದ್ಧಿಪಡಿಸಬೇಕೆಂದು ಸ್ಥಳೀಯರು ಮನವಿ ಸಲ್ಲಿಸಿದರು.

ಪಾಲಿಕೆಯ ಅಧ್ಯಕ್ಷ ಮುಹಮ್ಮದ್‌ ಗೌಸ್‌, ಆಯುಕ್ತ ಮುಕುಲ್‌ ಜೈನ್‌ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು. ಅಗ್ರಿಕಲ್ಚರ್‌ ಕಾಲೊನಿ, ವಿವೇಕಾನಂದ ಕಾಲೊನಿ, ಸಿಎಮ್‌ಸಿ ಕಾಲೊನಿ, ಶಿವಾಜಿ ನಗರ, ಅಲ್ಲಮಪ್ರಭು ಕಾಲೊನಿ, ಮಹೇಶ ನಗರದ ನಿವಾಸಿಗಳು ಇದ್ದರು.

‘ವೈನ್‌ಶಾಪ್‌ ಬಂದ್‌ ಮಾಡಿಸಿ’

‘ಗುಂಪಾ ರಿಂಗ್‌ರೋಡ್‌ ಸಿದ್ದಾರೂಢ ವೃತ್ತದಿಂದ ನ್ಯಾಷನಲ್‌ ಮಾರ್ಟ್‌ಗೆ ಹೋಗುವ ಮಾರ್ಗದಲ್ಲಿ ಹೊಸದಾಗಿ ಎರಡು ವೈನ್‌ಶಾಪ್‌ಗಳನ್ನು ಆರಂಭಿಸಲಾಗಿದೆ. ಇದರಿಂದ ಕುಡುಕರ ಹಾವಳಿ ಹೆಚ್ಚಾಗಿದ್ದು ಸ್ಥಳೀಯರು ತೀವ್ರ ಸಮಸ್ಯೆ ಎದುರಿಸುತ್ತಿದ್ದು ಅವುಗಳನ್ನು ಸ್ಥಳಾಂತರಿಸಬೇಕು’ ಎಂದು ಸ್ಥಳೀಯ ಮಹಿಳೆಯರು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಮನವಿ ಮಾಡಿದರು. ಈ ಭಾಗದಲ್ಲಿ ಶಾಲಾ ಕಾಲೇಜುಗಳಿವೆ. ಸುತ್ತಲೂ ಮನೆಗಳಿವೆ. ವಿದ್ಯಾರ್ಥಿಗಳು ಮಹಿಳೆಯರೆಲ್ಲಾ ಓಡಾಡುತ್ತಾರೆ. ವೈನ್‌ಶಾಪ್‌ನಿಂದ ಜನ ಸೇರುತ್ತಾರೆ. ಕುಡಿದು ಓಡಾಡುತ್ತಾರೆ. ಇದರಿಂದ ಬೇರೆಯವರಿಗೆ ತೊಂದರೆಯಾಗುತ್ತಿದೆ. ಇದನ್ನು ಆದ್ಯತೆಯ ಮೇರೆಗೆ ಸ್ಥಳಾಂತರಿಸಬೇಕೆಂದು ಕೋರಿದರು. ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಶಿಲ್ಪಾ ಶರ್ಮಾ ಆಶ್ವಾಸನೆ ನೀಡಿದರು.

‘ಅತಿಕ್ರಮಣ ತೆರವಾಗದಿದ್ದರೆ ರಸ್ತೆತಡೆ’

‘ಗುಂಪಾ ರಿಂಗ್‌ರೋಡ್‌ ಅತಿಕ್ರಮಣ ತೆರವು ರಸ್ತೆ ಹಾಗೂ ಉದ್ಯಾನಗಳನ್ನು ಅಭಿವೃದ್ಧಿಪಡಿಸಿ ಮೂಲಸೌಕರ್ಯ ಕಲ್ಪಿಸಲು 15 ದಿನಗಳ ಗಡುವು ನೀಡಲಾಗಿದೆ. ಒಂದುವೇಳೆ ಕ್ರಮ ಕೈಗೊಳ್ಳದಿದ್ದಲ್ಲಿ 15 ದಿನಗಳ ನಂತರ ರಿಂಗ್‌ರೋಡ್‌ನಲ್ಲಿ ರಸ್ತೆತಡೆ ಚಳವಳಿ ನಡೆಸಲಾಗುವುದು’ ಎಂದು ಮಹಾನಗರ ಪಾಲಿಕೆಯ ಸದಸ್ಯರಾದ ಶಶಿಧರ ಹೊಸಳ್ಳಿ ರಾಜಾರಾಮ ಚಿಟ್ಟಾ ತಿಳಿಸಿದರು. ಇನ್ನೊಬ್ಬ ಸದಸ್ಯ ಶಿವಕುಮಾರ ಭಾವಿಕಟ್ಟಿ ಇದ್ದರು.

ಸಿಗ್ನಲ್‌ ದುರಸ್ತಿ ಕಾರ್ಯ ಆರಂಭ

ಗುಂಪಾ ರಿಂಗ್‌ರೋಡ್‌ನ ಸಿದ್ದಾರೂಢ ವೃತ್ತದಲ್ಲಿ ‘ಪೀಕ್‌ ಅವರ್‌’ನಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು ಸಿಗ್ನಲ್‌ ಆರಂಭಿಸಿ ಸಂಚಾರ ಪೊಲೀಸರನ್ನು ನಿಯೋಜಿಸಬೇಕೆಂಬ ಸ್ಥಳೀಯರ ಆಗ್ರಹಕ್ಕೆ ಜಿಲ್ಲಾ ಪೊಲೀಸ್‌ ಇಲಾಖೆ ಸ್ಪಂದಿಸಿದೆ. ಬುಧವಾರ ಸಿಗ್ನಲ್‌ ದುರಸ್ತಿ ಕಾರ್ಯ ಕೈಗೆತ್ತಿಕೊಂಡಿದೆ. ಕೆಲವೇ ದಿನಗಳಲ್ಲಿ ಸಿಗ್ನಲ್‌ ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿದ್ದಾರೂಢ ವೃತ್ತದಲ್ಲಿ ಹಲವೆಡೆ ಗುಂಡಿಗಳು ಬಿದ್ದಿದ್ದು ಅವುಗಳನ್ನು ಮುಚ್ಚಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.