ADVERTISEMENT

ಲಿಂಗಾಯತ ಧರ್ಮ: ಡಿಕೆಶಿ ತಕ್ಷಣ ಕ್ಷಮೆಯಾಚಿಸಲಿ-ಬೀದರ್‌ ಜಿಲ್ಲೆಯ ಮಠಾಧೀಶರ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2018, 12:54 IST
Last Updated 20 ಅಕ್ಟೋಬರ್ 2018, 12:54 IST
ಬಸವಲಿಂಗ ಪಟ್ಟದ್ದೇವರು
ಬಸವಲಿಂಗ ಪಟ್ಟದ್ದೇವರು   

ಬೀದರ್‌: ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ವಿಷಯದಲ್ಲಿ ಲಿಂಗಾಯತರಿಗೆ ನೋವಾಗುವ ರೀತಿಯಲ್ಲಿ ಹೇಳಿಕೆ ನೀಡಿರುವ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ತಕ್ಷಣ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಪ್ರತಿಭಟನೆಯ ಹಾದಿ ತುಳಿಯುವುದು ಅನಿವಾರ್ಯವಾಗಲಿದೆ ಎಂದು ಜಿಲ್ಲೆಯ ಮಠಾಧೀಶರು ಎಚ್ಚರಿಸಿದ್ದಾರೆ.

‘ಲಿಂಗಾಯತ ಸ್ವತಂತ್ರ ಧರ್ಮ ಎನ್ನುವುದು ಸೂರ್ಯ, ಚಂದ್ರನಷ್ಟೇ ಸತ್ಯ. ಸಿಖ್, ಜೈನ ಹಾಗೂ ಬೌದ್ಧ ಧರ್ಮಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡುವಾಗ ಯಾರೂ ವಿರೋಧ ಮಾಡಿಲ್ಲ. ಲಿಂಗಾಯತ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ’ ಎಂದು ಭಾಲ್ಕಿಯ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದ್ದೇವರು, ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ, ಕೌಠಾದ ಬಸವ ಯೋಗಾಶ್ರಮದ ಸಿದ್ಧರಾಮ ಬೆಲ್ದಾಳ ಶರಣರು, ಲಿಂಗಾಯತ ಧರ್ಮ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಚನ್ನಬಸವಾನಂದ ಸ್ವಾಮೀಜಿ ಹಾಗೂ ಜಿಲ್ಲಾ ಲಿಂಗಾಯತ ಸಮನ್ವಯ ಸಮಿತಿಯ ಅಧ್ಯಕ್ಷ ಬಸವರಾಜ ಧನ್ನೂರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಲಿಂಗಾಯತ ಧರ್ಮದ ಹೆಸರು ಬಳಸಿಕೊಂಡು ಡಿಕೆಶಿ ತಮ್ಮ ಸ್ವಾರ್ಥ ಸಾಧಿಸಲು ಹೊರಟಿದ್ದಾರೆ. ಲಿಂಗಾಯತರ ಸ್ವತಂತ್ರ ಧರ್ಮದ ಬೇಡಿಕೆ ನಿನ್ನೆ, ಮೊನ್ನೆಯದ್ದಲ್ಲ. ಬ್ರಿಟಿಶ್‌  ಕಾಲದಿಂದಲೂ ಇದೆ. ನ್ಯಾಯಮೂರ್ತಿ ನಾಗಮೋಹನದಾಸ ನೇತೃತ್ವದ ತಜ್ಞರ ಸಮಿತಿಯ ವರದಿಯನ್ನು ಆಧರಿಸಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಡಿಕೆಶಿ ಅನಗತ್ಯ ಹೇಳಿಕೆ ನೀಡಿದ್ದಾರೆ. ಅವರಿಗೆ ಒಳ್ಳೆಯ ಪಾಠ ಕಲಿಸುವ ಪ್ರಸಂಗ ಬಂದಿದೆ’ ಎಂದು ಬಸವಲಿಂಗ ಪಟ್ಟದ್ದೇವರು ಹೇಳಿದರು.

ADVERTISEMENT

‘ಡಿ.ಕೆ. ಶಿವಕುಮಾರ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದರೂ ಬದ್ಧತೆ ಇಲ್ಲದೆ ಮಾತನಾಡುವ ಮೂಲಕ ಜೇನುಗೂಡಿಗೆ ಕೈಹಾಕಿದ್ದಾರೆ. ಸಮಾಜಕ್ಕೆ ಅಷ್ಟೇ ಅಲ್ಲ, ಸರ್ಕಾರಕ್ಕೂ ಅವಮಾನ ಮಾಡಿದ್ದಾರೆ’ ಎಂದು ಅಕ್ಕ ಅನ್ನಪೂರ್ಣ ಅಸಮಾಧಾನ ವ್ಯಕ್ತಪಡಿಸಿದರು.

‘ಡಿಕೆಶಿ ಲಿಂಗಾಯತ ಧರ್ಮದ ವ್ಯಕ್ತಿಯೇ ಅಲ್ಲ. ಸರ್ಕಾರದ ಪ್ರತಿನಿಧಿಯಾಗಿ ಅಕ್ಷಮ್ಯ ಅಪರಾಧ ಮಾಡಿದ್ದಾರೆ. ವಿನಾಶ ಕಾಲೇ ವಿಪರೀತ ಬುದ್ಧಿ. ಅವರು ಲಿಂಗಾಯತರ ಕ್ಷಮೆಯಾಚಿಸದಿದ್ದರೆ ಹೋರಾಟ ಮುಂದುವರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

‘ಸಚಿವರು ಬಾಲಿಶತನದ ಹೇಳಿಕೆ ನೀಡಿದ್ದಾರೆ. ಲಿಂಗಾಯತರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ದಕ್ಷಿಣ ಕರ್ನಾಟಕದಲ್ಲಿ ಒಕ್ಕಲಿಗರು ಎಷ್ಟು ಜನ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ ಎನ್ನುವ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಚನ್ನಬಸವಾನಂದ ಸ್ವಾಮೀಜಿ ಹೇಳಿದರು.

‘ರಂಭಾಪುರಿ ಶ್ರೀಗಳ ವೇದಿಕೆಯಲ್ಲಿ ನಿಂತು ಸಹಜ ಒತ್ತಡಕ್ಕೆ ಒಳಗಾಗಿ ಹೇಳಿಕೆ ನೀಡಿದ್ದಾರೆ. ಲಿಂಗಾಯತ ವಿರೋಧಿ ನಿಲುವು ತಾಳಿದರೆ ಉತ್ತರ ಕರ್ನಾಟಕ ಪ್ರವೇಶಕ್ಕೆ ತಡೆಯೊಡ್ಡಬೇಕಾಗುತ್ತದೆ’ಎಂದು ಎಚ್ಚರಿಕೆ ನೀಡಿದರು.

‘ಸಚಿವ ಸಂಪುಟದಲ್ಲಿ ನಿರ್ಧಾರ ಕೈಗೊಂಡು ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಡಿ.ಕೆ.ಶಿವಕುಮಾರ ಹಾಗೂ ಶಾಮನೂರು ಶಿವಶಂಕರಪ್ಪ ಶ್ರೀಮಂತಿಕೆಯ ಮೇಲೆ ಅಧಿಕಾರಕ್ಕೆ ಬಂದಿದ್ದಾರೆ. ಡಿಕೆಶಿ ಲಿಂಗಾಯತ ಸ್ವತಂತ್ರ ಧರ್ಮದ ಬಗ್ಗೆ ಅಧ್ಯಯನ ಮಾಡಿದವರೇನಲ್ಲ’ ಎಂದು ಕೌಠಾದ ಬಸವ ಯೋಗಾಶ್ರಮದ ಸಿದ್ಧರಾಮ ಬೆಲ್ದಾಳ ಶರಣರು ಟೀಕಿಸಿದರು.

‘ರಾಜಕೀಯ, ಜಾತಿ ಹಾಗೂ ಸ್ವಾರ್ಥದ ಹಿಂದೆ ರಾಜಕಾರಣಿಗಳು ಗಿರಿಕಿ ಹೊಡೆಯುತ್ತಿದ್ದಾರೆ. ಬಸವ ತತ್ವದಲ್ಲಿ ರಾಷ್ಟ್ರೀಯ ಐಕ್ಯತೆ ಇದೆ ಎನ್ನುವುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.