ಹುಮನಾಬಾದ್: ‘ನನ್ನ ಐದು ವರ್ಷದ ಆಡಳಿತ ಅವಧಿಯಲ್ಲಿ ಯಾವ ಅಧಿಕಾರಿಗೂ ಅಗೌರವ ತೊರಿ ಮಾತನಾಡಿಲ್ಲ. ನಾನು ಸಹ ಸರ್ಕಾರಿ ನೌಕರನಾಗಿ ಸುಮಾರು 15 ವರ್ಷ ಸೇವೆ ಮಾಡಿದ್ದೇನೆ. ಆದರೆ, ಜನಪ್ರತಿನಿಧಿಗಳಿಗೆ ಯಾವ ರೀತಿಯಾಗಿ ಮಾತನಾಡಬೇಕು ಎಂಬ ಕನಿಷ್ಠ ಸೌಜನ್ಯವು ಸಹ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಶಿವಕುಮಾರ ಅವರಿಗೆ ಇಲ್ಲ’ ಎಂದು ತಾಲ್ಲೂಕು ಪಂಚಾಯಿತಿಮಾಜಿ ಅಧ್ಯಕ್ಷ ರಮೇಶ ಡಾಕುಳಗಿ ಹೇಳಿದ್ದಾರೆ.
‘ತಾಲ್ಲೂಕಿನ ದುಬಲಗುಂಡಿ ಮತ್ತು ಡಾಕುಳಗಿಯ ಇಬ್ಬರಿಗೆ ಕೋವಿಡ್ ದೃಢಪಟ್ಟಿತ್ತು. ಅವರಿಗೆ ಆಸ್ಪತ್ರೆ ಹಾಸಿಗೆ ಲಭ್ಯತೆ ಬಗ್ಗೆ ತಿಳಿದುಕೊಳ್ಳಲು ತಾಲ್ಲೂಕು ಆರೋಗ್ಯ ಅಧಿಕಾರಿಗೆ ಎರಡು ಬಾರಿ ದೂರವಾಣಿ ಕರೆ ಮಾಡಿ್ದರೂ ಕರೆ ಸ್ವೀಕರಿಸಲಿಲ್ಲ. ಹಾಗಾಗಿ, ಈಚೆಗೆ ನಡೆದ ತಾ.ಪಂ ಕೊನೆಯ ಸಭೆಯಲ್ಲಿ ಅವರಿಗೆ ನನ್ನ ಕರೆ ಏಕೆ ಸ್ವೀಕರಿಸಿಲ್ಲ ಎಂದು ಪ್ರಶ್ನೆ ಮಾಡಿದರೆ, ಅವರು ಏಕವಚನದಲ್ಲಿ ನಿನ್ನ ಕರೆ ನಾನು ಏಕೆ ಸ್ವೀಕರಿಸಲಿ? ಎಂದರು. ಅದಕ್ಕಾಗಿ ನಾನು ಸ್ವಲ್ಪ ಆಕ್ರೋಶ ಭರಿತನಾಗಿ ನಮಗೆ ಮತ್ಯಾರು ಮಾಹಿತಿ ಕೊಡಬೇಕಪ್ಪ ಎಂದು ಕೇಳಿದಕ್ಕೆ ಅವರು ನನ್ನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ’ ಎಂದರು.
‘ಆರೋಗ್ಯ ಇಲಾಖೆಯ ನೌಕರರ ಸಂಘದಿಂದ ತಹಶೀಲ್ದಾರ್ ಅವರಿಗೆ ನನ್ನ ವಿರುದ್ಧ ಮನವಿ ಕೂಡ ಸಲ್ಲಿಸಿದ್ದಾರೆ. ನಾನು ಸಹ ದೂರು ದಾಖಲಿಸಬಹುದು. ಆದರೆ, ವಿನಾಕಾರಣ ಈ ಪ್ರಕರಣವನ್ನು ಮುಂದುವರಿಸುವುದು ಬೇಡ. ಸದ್ಯ ಕೋವಿಡ್ ಪರಿಸ್ಥಿತಿಯಿಂದ ಜನ ಪರದಾಡುತ್ತಿದ್ದಾರೆ. ಜನಪ್ರತಿನಿಧಿಗಳು ಹಾಗೂ ಆರೋಗ್ಯ ಇಲಾಖೆ, ಜನರು ಒಟ್ಟಾರೆಯಾಗಿ ಕೊರೊನಾ ವಿರುದ್ಧ ಹೋರಾಟ ಮಾಡಬೇಕಾಗಿದೆ. ಹೀಗಾಗಿ ಪೊಲೀಸರಿಗೂ ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ಎಂದು ಈಗಾಗಲೇ ಮನವಿ ಮಾಡಿದ್ದೇನೆ’ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.