
ಬೀದರ್: ‘ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದರೆ ರಾಜ್ಯದಲ್ಲಿ ದಂಗೆ ಉಂಟಾಗಿ, ಅರಾಜಕತೆ ಸೃಷ್ಟಿಯಾಗುತ್ತದೆ’ ಎಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಗೌರವ ಅಧ್ಯಕ್ಷ ಬಸವರಾಜ ಮಾಳಗೆ ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಸಿದ್ದರಾಮಯ್ಯನವರ ನಾಯಕತ್ವದಡಿ ಅಧಿಕಾರಕ್ಕೆ ಬಂದಿದೆ. ಅವರ ಕೆಲಸ, ಸಾಮಾಜಿಕ ಬದ್ಧತೆ, ಸಾಮಾಜಿಕ ನ್ಯಾಯದ ಕೆಲಸ ನೋಡಿ ಹಿಂದುಳಿದವರು, ಶೋಷಿತರು ಹಾಗೂ ಅಲ್ಪಸಂಖ್ಯಾತರು ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಅಧಿಕಾರಕ್ಕೆ ತಂದಿದ್ದಾರೆ. ಸಿದ್ದರಾಮಯ್ಯನವರ ನಾಯಕತ್ವ, ಆರ್ಥಿಕ ಶಿಸ್ತಿನಿಂದ ರಾಜ್ಯ ಮುನ್ನಡೆಯುತ್ತಿದೆ. ಆದಕಾರಣ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಹೈಕಮಾಂಡ್ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಬಾರದು. ಪಟ್ಟಭದ್ರ ಹಿತಾಸಕ್ತಿಗಳಿಗೆ ಹೈಕಮಾಂಡ್ ಮಣಿಯಬಾರದು ಎಂದು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
ಸಿದ್ದರಾಮಯ್ಯನವರು ನುಡಿದಂತೆ ನಡೆದುಕೊಳ್ಳುವ ವ್ಯಕ್ತಿತ್ವ. ಅವರು ಹೇಳಿದಂತೆ ಐದು ಗ್ಯಾರಂಟಿ ಯೋಜನೆಗಳನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಜಾರಿಗೆ ತಂದಿದ್ದಾರೆ. ಇದರ ಪರಿಣಾಮ ರಾಜ್ಯದ ಜನರ ತಲಾ ಆದಾಯ ಹೆಚ್ಚಳವಾಗಿದೆ. ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಕಾಯ್ದೆ ಜಾರಿಗೆ ತಂದಿದ್ದಾರೆ. ಡಿ. ದೇವರಾಜ ಅರಸು ನಂತರ ಉತ್ತಮ ಆಡಳಿತ ಕೊಟ್ಟವರು ಸಿಎಂ ಸಿದ್ದರಾಮಯ್ಯ. ರಾಜ್ಯದಲ್ಲಿ ಕಾಂತರಾಜು ಆಯೋಗದಿಂದ ಸಮೀಕ್ಷೆ ನಡೆಸಿದ್ದಾರೆ. ಆದರೆ, ಆ ವರದಿ ಮೂಲೆ ಸೇರುವಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಕೆಲಸ ಮಾಡಿದ್ದಾರೆ. ಅವರನ್ನು ಸಿಎಂ ಮಾಡಿದರೆ ಸಾಮಾಜಿಕ ನ್ಯಾಯ ಸಿಗಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯನವರನ್ನೇ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಸಬೇಕು. ಇಲ್ಲವಾದರೆ 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಸಮಸ್ಯೆ ಎದುರಿಸಬೇಕಾಗುತ್ತದೆ. ಹಿಂದುಳಿದವರು, ಶೋಷಿತರು, ಅಲ್ಪಸಂಖ್ಯಾತರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮುಖಂಡರಾದ ಡಾ. ರಾಜಶೇಖರ್ ಸೇಡಂಕರ, ತುಕಾರಾಮ ಚಿಮಕೋಡೆ, ತಾನಾಜಿ ಸಾಗರ್, ಸುಭಾಷ ಹಮಿಲಾಪುರ, ಶಿವಕುಮಾರ ಹಿಬಾರೆ, ಶಾಂತಕುಮಾರ, ರಾಜಕುಮಾರ, ಪುಂಡಲೀಕ್‌ರಾವ್, ಪ್ರದೀಪ್ ನಾಟೆಕಾರ್ ಹಾಜರಿದ್ದರು.
ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಸಿದ್ದರಾಮಯ್ಯ ಇರಬೇಕು’
‘ರಾಜ್ಯದಲ್ಲಿ 2028ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಪುನಃ ಗೆದ್ದು ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಇರಬೇಕಾಗುತ್ತದೆ’ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ರಮೇಶ ಡಾಕುಳಗಿ ಹೇಳಿದರು. ರಾಜ್ಯದಲ್ಲಿ ಸಿದ್ದರಾಮಯ್ಯನವರಿಗೆ ಇರುವಷ್ಟು ಜನಬೆಂಬಲ ಯಾವುದೇ ನಾಯಕರಿಗೂ ಇಲ್ಲ. ಒಂದುವೇಳೆ ಅವರನ್ನು ಸಿಎಂ ಕುರ್ಚಿಯಿಂದ ಇಳಿಸಿದರೆ ಕಾಂಗ್ರೆಸ್ ಪಕ್ಷ ಜನಬೆಂಬಲ ಕಳೆದುಕೊಳ್ಳುತ್ತದೆ ಎಂದು ಎಚ್ಚರಿಸಿದರು.
‘ದಲಿತರಿಗೆ ಸಿಎಂ ಹುದ್ದೆ’
‘ಸಿದ್ದರಾಮಯ್ಯನವರನ್ನು ಒಂದುವೇಳೆ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದರೆ ದಲಿತರಿಗೆ ಸಿಎಂ ಹುದ್ದೆ ನೀಡಬೇಕು’ ಎಂದು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಸಹ ಸಂಚಾಲಕ ಅನೀಲಕುಮಾರ ಬೆಲ್ದಾರ್ ಆಗ್ರಹಿಸಿದರು. ರಾಜ್ಯದ ಜನ ಮಲ್ಲಿಕಾರ್ಜುನ ಖರ್ಗೆ ಸಿದ್ದರಾಮಯ್ಯನವರ ಮುಖ ನೋಡಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಅಧಿಕಾರಕ್ಕೆ ತಂದಿದ್ದಾರೆ. ಕಳೆದ ಎರಡುವರೆ ವರ್ಷಗಳಿಂದ ರಾಜ್ಯದಲ್ಲಿ ಯಾವುದೇ ಅಶಾಂತಿ ಉಂಟಾಗಿಲ್ಲ. ಆರ್ಥಿಕ ಶಿಸ್ತಿನಿಂದ ರಾಜ್ಯ ಮುನ್ನಡೆಯುತ್ತಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.