ADVERTISEMENT

ಕಲ್ಯಾಣ ಕರ್ನಾಟಕ ಉತ್ಸವ ಕಲಬುರಗಿಗೆ ಸೀಮಿತಗೊಳಿಸದಿರಿ

ಆರು ಜಿಲ್ಲೆಗಳ ಕಲಾವಿದರಿಗೂ ಪ್ರಾಮುಖ್ಯ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2022, 16:08 IST
Last Updated 9 ಸೆಪ್ಟೆಂಬರ್ 2022, 16:08 IST
ವಿಜಯಕುಮಾರ ಸೋನಾರೆ
ವಿಜಯಕುಮಾರ ಸೋನಾರೆ   

ಬೀದರ್‌: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಕಲಬುರಗಿಯಲ್ಲಿ ಏಳು ದಿನ ಕಲ್ಯಾಣ ಕರ್ನಾಟಕ ಉತ್ಸವ ನಡೆಸುವ ‍ಪೂರ್ವದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದ ಆರು ಜಿಲ್ಲೆಗಳ ಪ್ರಮುಖರ ಸಭೆ ನಡೆಸಬೇಕು ಎಂದು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಒತ್ತಾಯಿಸಿದೆ.

ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷರು ಕಲ್ಯಾಣ ಕರ್ನಾಟಕ ಪ್ರದೇಶದ ಜಿಲ್ಲೆಗಳ ಜಿಲ್ಲಾಧಿಕಾರಿಗಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕಗಳ ಅಧ್ಯಕ್ಷರ, ವಿವಿಧ ಕಲಾ ಪ್ರಕಾರದ ಜಾನಪದ ಕಲಾವಿದರ, ಸಾಹಿತಿಗಳ, ಚಿಂತಕರ ಹಾಗೂ ಶಾಸಕರನ್ನು ಸೇರಿಸಿಕೊಂಡು ಪೂರ್ವಭಾವಿ ಸಭೆ ನಡೆಸಬೇಕು ಎಂದು ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂಗಡಿ ಆಗ್ರಹಿಸಿದ್ದಾರೆ.

ಕಲ್ಯಾಣ ಕರ್ನಾಟಕ ಉತ್ಸವ ಒಂದು ಜಿಲ್ಲೆಗೆ ಸೀಮಿತವಾಗಬಾರದು. ಬೀದರ್, ರಾಯಚೂರು, ಕೊಪ್ಪಳ, ಯಾದಗಿರಿ, ಬಳ್ಳಾರಿ, ವಿಜಯನಗರ ಜಿಲ್ಲೆಗಳ ಜನಪದ ಸಂಸ್ಕೃತಿಯನ್ನೂ ಬಿಂಬಿಸುವಂತಿರಬೇಕು. ಉತ್ಸವ ಕೇವಲ ಕಲಬುರಗಿ ಜಿಲ್ಲೆಗೆ ಸೀಮಿತವಾದರೆ, ಉಳಿದ 6 ಜಿಲ್ಲೆಗಳ ಕಲಾವಿದರನ್ನು ಕಡೆಗಣಿಸಿದಂತಾಗುತ್ತದೆ ಎಂದು ಹೇಳಿದ್ದಾರೆ.

ADVERTISEMENT

ಪೂರ್ವಭಾವಿ ಸಿದ್ಧತಾ ಸಭೆ ನಡೆಸದೇ ನಿರ್ಧಾರ ಕೈ ತೆಗೆದುಕೊಂಡಿರುವುದು ಖಂಡನೀಯ. ಏಳೂ ಜಿಲ್ಲೆಗಳಿಗೆ ಆದ್ಯತೆ ಕೊಡುವಂತೆ ಒತ್ತಾಯಿಸಿ ಸೆಪ್ಟೆಂಬರ್ 12 ರಂದು ಒಕ್ಕೂಟದಿಂದ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.