ADVERTISEMENT

ಅದ್ದೂರಿ ಸ್ವಾಗತ ಬೇಡ ಎಂದ ಸಚಿವ ಚವಾಣ್

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2019, 12:41 IST
Last Updated 28 ಆಗಸ್ಟ್ 2019, 12:41 IST
ಪ್ರಭು ಚವಾಣ್
ಪ್ರಭು ಚವಾಣ್   

ಬೀದರ್: ಸಚಿವರಾದ ನಂತರ ಆಗಸ್ಟ್ 29 ರಂದು ಪ್ರಥಮ ಬಾರಿಗೆ ತವರು ಜಿಲ್ಲೆ ಬೀದರ್‌ಗೆ ಬರುತ್ತಿರುವ ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ತಮಗೆ ಅದ್ದೂರಿ ಸ್ವಾಗತ ಬೇಡ ಎಂದಿದ್ದಾರೆ.

’ಕಾರ್ಯಕರ್ತರು, ಅಭಿಮಾನಿಗಳು ಸನ್ಮಾನ ಸಭೆ, ಬೈಕ್ ರ‍್ಯಾಲಿ ಹಾಗೂ ಮೆರವಣಿಗೆ ನಡೆಸಬಾರದು’ ಎಂದು ಮನವಿ ಮಾಡಿದ್ದಾರೆ.

‘ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹದಿಂದಾಗಿ ಅಪಾರ ಹಾನಿಯಾಗಿದೆ. ಅನೇಕ ರೈತರು, ಸಾರ್ವಜನಿಕರು ಮನೆ, ಆಸ್ತಿಪಾಸ್ತಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಹಳಷ್ಟು ಜನ ನಿರಾಶ್ರಿತರಾಗಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಸನ್ಮಾನ ಮಾಡಿಕೊಳ್ಳದೇ ಇರಲು ನಿರ್ಧರಿಸಿದ್ದೇನೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಯಾದಗಿರಿ, ರಾಯಚೂರು, ಬಳ್ಳಾರಿ ಜಿಲ್ಲೆಗಳಿಗೆ ಸಚಿವ ಬಿ.ಶ್ರೀರಾಮಲು ಅವರೊಂದಿಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯ ಅವಲೋಕನ ನಡೆಸಿದ್ದೇನೆ. ಪ್ರವಾಹದಲ್ಲಿ ಅನೇಕರ ಬದುಕು ನುಚ್ಚು ನೂರಾಗಿರುವುದು ಕಣ್ಣಾರೆ ಕಂಡಿದ್ದೇನೆ. ಸರ್ಕಾರ ಸಂತ್ರಸ್ತರ ನೆರವಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜನ ತೊಂದರೆಯಲ್ಲಿರುವಾಗ ಸನ್ಮಾನ, ಮೆರವಣಿಗೆ ಮಾಡಿ ಸಂಭ್ರಮಿಸುವುದು ಸರಿಯಲ್ಲ’ ಎಂದು ತಿಳಿಸಿದ್ದಾರೆ.

'ಅನೇಕರು, ಹೆಮ್ಮೆ ಅಭಿಮಾನದಿಂದ ನನ್ನನ್ನು ಸ್ವಾಗತಿಸಲು ನಿರ್ಧರಿಸಿದ್ದಾರೆ. ಅವರ ಪ್ರೀತಿ, ಅಭಿಮಾನಕ್ಕೆ ಋಣಿಯಾಗಿದ್ದೇನೆ' ಎಂದು ಹೇಳಿದ್ದಾರೆ.

'ಜಿಲ್ಲೆಯ ಅಭಿವೃದ್ಧಿಗೆ ಹೊಸ ಆಯಾಮ: ಜಿಲ್ಲೆಯ ಅಭಿವೃದ್ಧಿಗೆ ಹೊಸ ಆಯಾಮ ನೀಡಲಾಗುವುದು. ಜಿಲ್ಲೆಯ ಜನರ ಆಶಯದಂತೆ ಮೊದಲ ಬಾರಿಗೆ ಸಚಿವ ಸ್ಥಾನ ದೊರೆತಿದೆ. ಪಕ್ಷದ ವರಿಷ್ಠರು ನೀಡಿರುವ ಜವಾವ್ದಾರಿಯನ್ನು ಶ್ರದ್ಧೆ, ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ನಿಭಾಯಿಸುವೆ’ ಎಂದು ಹೇಳಿದ್ದಾರೆ.

‘ಎಲ್ಲರ ಪ್ರೀತಿ, ಅಭಿಮಾನ, ಗೌರವ, ಆಶೀರ್ವಾದ, ಮಾರ್ಗದರ್ಶನ ಹೀಗೆಯೇ ಇರಲಿ. ಎಲ್ಲರೂ ಸೇರಿ ಮಾದರಿ ಬೀದರ್ ಮಾಡಲು ಪ್ರಯತ್ನಿಸೋಣ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.