ADVERTISEMENT

ಬೀದರ್ | ಕುಡಿಯುವ ನೀರಿಗೆ ಸಮಸ್ಯೆ ಆಗದಿರಲಿ: ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 16 ಮೇ 2024, 15:16 IST
Last Updated 16 ಮೇ 2024, 15:16 IST
ಬೀದರ್‌ನಲ್ಲಿ ಗುರುವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮಾತನಾಡಿದರು
ಬೀದರ್‌ನಲ್ಲಿ ಗುರುವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮಾತನಾಡಿದರು   

ಬೀದರ್‌: ‘ಮುಂದಿನ ಎರಡು ವಾರಗಳವರೆಗೆ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಸೂಚಿಸಿದರು.

ನಗರದಲ್ಲಿ ಗುರುವಾರ ಕುಡಿಯುವ ನೀರಿನ ಕುರಿತು ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈಗಾಗಲೇ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಲ್ಲ ಅಧಿಕಾರಿಗಳು ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿದ್ದಾರೆ. ಮುಂದಿನ 15 ದಿನಗಳ ವರೆಗೆ ಇದೇ ರೀತಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಜೂನ್‌ ತಿಂಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ 102 ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆಗೆ ಪಡೆಯಲಾಗಿದೆ. 47 ಬೋರ್‌ವೆಲ್‌ಗಳ ಮೋಟಾರ್‌ ದುರಸ್ತಿ, 24 ಕಡೆಗಳಲ್ಲಿ ಹೊಸ ಪೈಪ್‌ಲೈನ್‌ ಮಾಡಲಾಗಿದೆ. ಈಗಾಗಲೇ ಬಾಡಿಗೆ ಪಡೆದ ಖಾಸಗಿ ಬೋರ್‌ವೆಲ್ ಮತ್ತು ಟ್ಯಾಂಕರ್‌ಗಳ ಬಿಲ್‌ಗಳನ್ನು ಪಡೆದು ಕೂಡಲೇ ಹಣ ಪಾವತಿಸಿ ಕ್ರಮ ಕೈಗೊಳ್ಳಬೇಕೆಂದು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ADVERTISEMENT

ಮೋಟಾರ್‌ ದುರಸ್ತಿ, ಪೈಪಲೈನ್ ಅಳವಡಿಕೆ ಬಿಲ್‌ಗಳನ್ನು ಆಡಳಿತಾತ್ಮಕ ಅನುಮೋದನೆ ಪಡೆದು ಹಣ ಪಾವತಿಗೆ ಕ್ರಮ ವಹಿಸಬೇಕು. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಬೋರವೆಲ್, ಬಾವಿಗಳಿಗೆ ಯಾವುದೇ ರೀತಿ ಕಲುಷಿತ ನೀರು ಸೇರದಂತೆ ಎಚ್ಚರ ವಹಿಸಿ ಸ್ವಚ್ಛತೆ ಕಾಪಾಡಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ಮಾತನಾಡಿ, ಜಿಲ್ಲೆಯಲ್ಲಿ 114 ಕಡೆ ಜಿಲ್ಲಾ ಪಂಚಾಯಿತಿಯಿಂದ ಕೊಳವೆಬಾವಿ ದುರಸ್ತಿಗೊಳಿಸಲಾಗಿದೆ. ಕೂಡಲೇ ಆಡಳಿತಾತ್ಮಕ ಅನುಮೋದನೆ ಪಡೆದು ಬಿಲ್‌ಗಳನ್ನು ಪಾವತಿಸಲು ಕ್ರಮ ವಹಿಸಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಓವರ್ ಹೆಡ್ ಟ್ಯಾಂಕ್‌ಗಳನ್ನು ಸ್ವಚ್ಛ ಗೊಳಿಸಿ ಶುಚಿಯಾಗಿರುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಉಪವಿಭಾಗಾಧಿಕಾರಿ ಲವೀಸ್‌ ಒರ್ಡಿಯಾ, ಎಲ್ಲ ತಾಲ್ಲೂಕುಗಳ ತಹಶೀಲ್ದಾರ್‌, ಕಾರ‍್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ಕಾರ‍್ಯಪಾಲಕ ಎಂಜಿನಿಯರ್‌ಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.