ADVERTISEMENT

ಬರದ ಸವಾಲು ಸಮರ್ಥವಾಗಿ ಎದುರಿಸಿ

ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಚ್.ಆರ್.ಮಹಾದೇವ ಸಲಹೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 14:35 IST
Last Updated 14 ಡಿಸೆಂಬರ್ 2018, 14:35 IST
ಬೀದರ್‌ನ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಬರ ಪರಿಸ್ಥಿತಿ ಪರಾಮರ್ಶೆ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ ಮಾತನಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಜಿಲ್ಲಾಧಿಕಾರಿ ಎಚ್‌.ಆರ್. ಮಹಾದೇವ, ಜಿಲ್ಲಾ ನಗರ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಲಭೀಮ ಕಾಂಬಳೆ ಹಾಗೂ ಪಶು ವೈದ್ಯ ಮತ್ತು ಪಶು ಸೇವಾ ಇಲಾಖೆಯ ಉಪ ನಿರ್ದೇಶಕ ರವೀಂದ್ರ ಭುರೆ ಇದ್ದಾರೆ
ಬೀದರ್‌ನ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಬರ ಪರಿಸ್ಥಿತಿ ಪರಾಮರ್ಶೆ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ ಮಾತನಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಜಿಲ್ಲಾಧಿಕಾರಿ ಎಚ್‌.ಆರ್. ಮಹಾದೇವ, ಜಿಲ್ಲಾ ನಗರ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಲಭೀಮ ಕಾಂಬಳೆ ಹಾಗೂ ಪಶು ವೈದ್ಯ ಮತ್ತು ಪಶು ಸೇವಾ ಇಲಾಖೆಯ ಉಪ ನಿರ್ದೇಶಕ ರವೀಂದ್ರ ಭುರೆ ಇದ್ದಾರೆ   

ಬೀದರ್‌: ‘ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಅಧಿಕಾರಿಗಳು ಸನ್ನದ್ಧರಾಗಬೇಕು. ಜನರ ಕಷ್ಟ ಕಾರ್ಪಣ್ಯಗಳಿಗೆ ಕೂಡಲೇ ಸ್ಪಂದಿಸಬೇಕು’ ಎಂದು ಜಿಲ್ಲಾಧಿಕಾರಿ ಎಚ್.ಆರ್. ಮಹಾದೇವ ಗ್ರಾಮಮಟ್ಟದ ಅಧಿಕಾರಿಗಳಿಗೆ ಸಲಹೆ ನೀಡಿದರು.

ನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಬರ ಪರಿಸ್ಥಿತಿ ಪರಾಮರ್ಶೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸರ್ಕಾರವು ಜಿಲ್ಲೆಯ ನಾಲ್ಕು ತಾಲ್ಲೂಕುಗಳನ್ನು ಭಾಗಶಃ ಬರಪೀಡಿತ ಎಂದು ಘೋಷಿಸಿದ ನಂತರ ಜಿಲ್ಲಾಡಳಿತದಿಂದ ಬಹಳಷ್ಟು ಕೆಲಸಗಳು ಆಗಬೇಕಿತ್ತು. ಇಂದಲ್ಲ ನಾಳೆ ಮಳೆ ಆಗಬಹುದು ಎನ್ನುವ ನಿರೀಕ್ಷೆಯಲ್ಲಿ ಕೆಲಸಗಳು ನಿಧಾನವಾಗಿ ಸಾಗಿದವು. ಇನ್ನೂ ತುಸು ದಿನಗಳಲ್ಲಿ ಹಳ್ಳಿಗಳಲ್ಲಿ ಸಮಸ್ಯೆಗಳು ಹೆಚ್ಚಲಿವೆ. ಹೀಗಾಗಿ ಪರಿಹಾರ ಕಾರ್ಯ ಕೈಗೊಳ್ಳಲು ವಿಳಂಬ ಮಾಡಬಾರದು’ ಎಂದು ತಿಳಿಸಿದರು.

‘ಗ್ರಾಮ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಗ್ರಾಮದ ತಳಹದಿ ಇದ್ದಂತೆ. ಹಳ್ಳಿಗರ ಬದುಕನ್ನು ಹತ್ತಿರದಿಂದ ನೋಡಿರುವ ತಳ ಹಂತದ ಅಧಿಕಾರಿಗಳಿಂದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗುವುದು’ ಎಂದು ಹೇಳಿದರು.

‘ಬರದ ಸವಾಲುಗಳನ್ನು ಎದುರಿಸುವುದು ಕೇವಲ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಜವಾಬ್ದಾರಿ ಎಂದು ಭಾವಿಸಬೇಡಿ. ನಾನು, ಸಿಇಒ, ಉಪ ವಿಭಾಗಾಧಿಕಾರಿ, ತಹಶೀಲ್ದಾರರು ನಾಲ್ಕಾರು ಗ್ರಾಮಗಳಿಗೆ ಭೇಟಿ ಕೊಟ್ಟರೆ ಸಮಸ್ಯೆ ನಿವಾರಣೆಯಾಗದು. ಆಯಾ ಹಳ್ಳಿಗಳಲ್ಲಿನ ಸಮಸ್ಯೆಗಳಿಗೆ ಅಲ್ಲಿಯವರೇ ಪರಿಹಾರ ಒದಗಿಸುವಂತಾಗಬೇಕು. ಅಲ್ಲಿನ ಪರಿಸ್ಥಿತಿ ನೋಡಿ ನೀವೇ ಯೋಜನೆ ರೂಪಿಸಿ ಪರಿಹಾರ ಕಲ್ಪಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

‘ಶೀಘ್ರದಲ್ಲೇ ಗ್ರಾಮ ಮಟ್ಟದ ಸಮಿತಿ ರಚಿಸಲಾಗುವುದು. ಪಿಡಿಒ, ನಾಡ ಕಚೇರಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಕೃಷಿ ಸಹಾಯಕರು, ಮುಖ್ಯ ಶಿಕ್ಷಕರು, ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು ಪ್ರತಿದಿನ ಒಂದೆಡೆ ಸೇರಿ ಗ್ರಾಮದಲ್ಲಿ ಸಮಸ್ಯೆ ಏನಿದೆ ಎನ್ನುವ ಕುರಿತು ಚರ್ಚಿಸಬೇಕು’ ಎಂದರು.

‘ಗ್ರಾಮದ ಜನರಿಗೆ ಉದ್ಯೋಗ ಕೊಡಲು, ಜಾನುವಾರುಗಳ ಆರೋಗ್ಯ ನೋಡಿಕೊಳ್ಳಲು ಅಧಿಕಾರಿಗಳು ಕ್ರಮ ವಹಿಸಬೇಕು. ಗ್ರಾಮದ ಸಮಸ್ಯೆಗಳ ಪಟ್ಟಿ ಮಾಡಿ ಪರಿಹಾರಕ್ಕಾಗಿ ಪೂರಕ ಯೋಜನೆ ರೂಪಿಸಿ ಜಿಲ್ಲಾ ಆಡಳಿತಕ್ಕೆ ತಿಳಿಸಬೇಕು’ ಎಂದು ಹೇಳಿದರು.

‘ಯಾವುದೇ ಗ್ರಾಮದ ಜನರು ಬರದಲ್ಲಿ ಉದ್ಯೋಗ ಸಿಗುತ್ತಿಲ್ಲ ಎನ್ನುವ ದೂರು ನೀಡುವಂತಾಗಬಾರದು. ತಾಲ್ಲೂಕು ಪಂಚಾಯಿತಿ ಇಒ ಹಾಗೂ ಪಿಡಿಒ ಹೊಣೆಗಾರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಎಲ್ಲರಿಗೂ ಜಾಬ್ ಕಾರ್ಡ್ ಕೊಡುವ ವ್ಯವಸ್ಥೆಯಾಗಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಬೀದರ್‌ ಉಪ ವಿಭಾಗಾಧಿಕಾರಿ ಶಿವಕುಮಾರ ಶೀಲವಂತ, ನಗರ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಲಭೀಮ ಕಾಂಬಳೆ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಿದ್ಯಾನಂದ ಸಿ., ಪಶು ವೈದ್ಯ ಮತ್ತು ಪಶು ಸೇವಾ ಇಲಾಖೆಯ ಉಪ ನಿರ್ದೇಶಕ ರವೀಂದ್ರ ಭುರೆ, ತಾಲ್ಲೂಕು ಪಂಚಾಯಿತಿ ಇಒ ಧನರಾಜ ಬೋರಾಳೆ ಇದ್ದರು. ತಹಶೀಲ್ದಾರ್ ಕೀರ್ತಿ ಚಾಲಕ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.