ADVERTISEMENT

ಶಿಕ್ಷಣ ವ್ಯವಸ್ಥೆಯ ಬದಲಾವಣೆ ಅಗತ್ಯ

ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ ಅಭಿಮತ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2019, 12:30 IST
Last Updated 28 ಅಕ್ಟೋಬರ್ 2019, 12:30 IST
ಹಾವೇರಿ ಜಿಲ್ಲೆಯ ರಾಣೆಬೆನ್ನೂರಿಗೆ ವರ್ಗವಾದ ಭಾಲ್ಕಿ ತಾಲ್ಲೂಕಿನ ಮಳಚಾಪುರ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ವಿಜಯ ನಿರಂಜನ್‌ ದಂಪತಿಯನ್ನು ಬೀದರ್‌ನ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ಭಗವಂತ ಖೂಬಾ ಸನ್ಮಾನಿಸಿದರು. ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ, ಮಾರುತಿ ಸಗರ್, ಸುನೀಲ್, ಹಣಮಂತರಾವ್ ಪಾಟೀಲ ಇದ್ದರು
ಹಾವೇರಿ ಜಿಲ್ಲೆಯ ರಾಣೆಬೆನ್ನೂರಿಗೆ ವರ್ಗವಾದ ಭಾಲ್ಕಿ ತಾಲ್ಲೂಕಿನ ಮಳಚಾಪುರ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ವಿಜಯ ನಿರಂಜನ್‌ ದಂಪತಿಯನ್ನು ಬೀದರ್‌ನ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ಭಗವಂತ ಖೂಬಾ ಸನ್ಮಾನಿಸಿದರು. ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ, ಮಾರುತಿ ಸಗರ್, ಸುನೀಲ್, ಹಣಮಂತರಾವ್ ಪಾಟೀಲ ಇದ್ದರು   

ಬೀದರ್: ‘ಶಿಕ್ಷಕರು ದೇಶದ ಅಭಿವೃದ್ಧಿಯ ನಿಜವಾದ ಹರಿಕಾರರು. ದೇಶ ಹಾಗೂ ವಿದ್ಯಾರ್ಥಿಗಳ ಹಿತದಿಂದ ಇಂದಿನ ಶಿಕ್ಷಣ ವ್ಯವಸ್ಥೆಯ ಜತೆಗೆ ಶಿಕ್ಷಕರ ಬೋಧನಾ ಕ್ರಮದಲ್ಲೂ ಬದಲಾವಣೆ ಆಗಬೇಕಿದೆ’ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ ನುಡಿದರು.

ಭಾಲ್ಕಿ ತಾಲ್ಲೂಕಿನ ಮಳಚಾಪುರ ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ವಿಜಯ ನಿರಂಜನ್‌ ಅವರಿಗೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿಗೆ ವರ್ಗವಾದ ಪ್ರಯುಕ್ತ ಇಲ್ಲಿನ ಶಿವನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾವು ಎಷ್ಟು ಓದಿದ್ದೇವೆ ಎನ್ನುವುದು ಮುಖ್ಯವಲ್ಲ. ಈ ಶಿಕ್ಷಣ ನಮಗೆ ಎಷ್ಟು ಸಂಸ್ಕಾರ, ನೈತಿಕತೆ, ಆದರ್ಶ ಮೌಲ್ಯಗಳನ್ನು ಕಲಿಸಿದೆ ಎನ್ನುವುದು ಮುಖ್ಯ’ ಎಂದು ಹೇಳಿದರು.

ADVERTISEMENT

‘ಸರ್ಕಾರಿ ಶಾಲೆಗಳಲ್ಲಿ ವಿಜಯ ಅವರಂತಹ ಕರ್ತವ್ಯ ನಿಷ್ಠ, ಪ್ರಾಮಾಣಿಕ, ಮೌಲ್ಯಯುತ ಗುಣ ಹೊಂದಿದ ಶಿಕ್ಷಕರು ಸಿಗುವುದು ಅಪರೂಪ’ ಎಂದು ಬಣ್ಣಿಸಿದರು.

ಸಂಸದ ಭಗವಂತ ಖೂಬಾ ಮಾತನಾಡಿ, ‘ಸಮಾಜದ ಸಮಗ್ರ ಅಭಿವೃದ್ಧಿಯಲ್ಲಿ ಕಾರ್ಯಾಂಗದ ಪಾತ್ರ ಹಿರಿದಾಗಿದೆ. ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಅನೇಕ ಉತ್ತಮ, ದಕ್ಷ, ಕ್ರಿಯಾಶೀಲ, ಪ್ರಾಮಾಣಿಕ ಅಧಿಕಾರಿ, ಸಿಬ್ಬಂದಿ ಹಾಗೂ ಶಿಕ್ಷಕರು ಇದ್ದಾರೆ. ಇವರ ಸೇವಾ ನಿಷ್ಠೆ ಇತರರಿಗೆ ಪ್ರೇರಣೆಯಾಗಬೇಕು’ ಎಂದು ತಿಳಿಸಿದರು.

‘ವಿಜ್ಞಾನ ಶಿಕ್ಷಕ, ಸಂಪನ್ಮೂಲ ವ್ಯಕ್ತಿಯಾಗಿ ಅಪಾರ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಗೊಳಿಸಿದ ವಿಜಯ ಅವರ ಸೇವೆ ಶಿಕ್ಷಕ ಸಮೂಹಕ್ಕೆ ಮಾದರಿಯಾಗಿದೆ’ ಎಂದು ಹೇಳಿದರು.

ಹಿರಿಯ ಪತ್ರಕರ್ತ ಸ.ದಾ.ಜೋಶಿ ಮಾತನಾಡಿ, ‘ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ ಎಷ್ಟೊಂದು ಮಕ್ಕಳ ಭವಿಷ್ಯ, ವ್ಯಕ್ತಿತ್ವ ರೂಪಿಸಬಹುದು ಎನ್ನುವುದಕ್ಕೆ ವಿಜಯ ಅವರು ಸಾಕ್ಷಿ’ ಎಂದರು.

ವಿಜಯ ನಿರಂಜನ್‌, ಶಿಕ್ಷಕರಾದ ಮಾರುತಿ ಸಗರ್, ಸುನೀಲ್ ಮಾತನಾಡಿದರು.

ಹಣಮಂತರಾವ್ ಪಾಟೀಲ ನಿರೂಪಣೆ ಮಾಡಿದರು. ಪ್ರಾಧ್ಯಾಪಕ ಗಣೇಶಗೌಡ ಹಾಗೂ ತೋಟಗಾರಿಕೆ ಸ್ನಾತಕ ಪದವೀಧರ ಅರವಿಂದ ಅವರನ್ನೂ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.