ADVERTISEMENT

ವಿದ್ಯಾರ್ಥಿ ವಿಕಾಸಕ್ಕೆ ಶಿಕ್ಷಣವೇ ಸಾಧನ: ಗುರುನಾಥ ಕೊಳ್ಳೂರ ಹೇಳಿಕೆ

ನವೀನ್ ಶಾಲೆ ವಾರ್ಷಿಕೋತ್ಸವ: ಮುಖಂಡ ಗುರುನಾಥ ಕೊಳ್ಳೂರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 13:54 IST
Last Updated 24 ಜನವರಿ 2020, 13:54 IST
ಬೀದರ್ ತಾಲ್ಲೂಕಿನ ಚಿಟ್ಟಾದ ನವೀನ್ ಪಬ್ಲಿಕ್ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವದಲ್ಲಿ ಬಿಜೆಪಿ ಮುಖಂಡ ಗುರುನಾಥ ಕೊಳ್ಳೂರ ಮಾತನಾಡಿದರು
ಬೀದರ್ ತಾಲ್ಲೂಕಿನ ಚಿಟ್ಟಾದ ನವೀನ್ ಪಬ್ಲಿಕ್ ಶಾಲೆಯಲ್ಲಿ ನಡೆದ ವಾರ್ಷಿಕೋತ್ಸವದಲ್ಲಿ ಬಿಜೆಪಿ ಮುಖಂಡ ಗುರುನಾಥ ಕೊಳ್ಳೂರ ಮಾತನಾಡಿದರು   

ಬೀದರ್: ‘ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ಶಿಕ್ಷಣವೇ ಸಾಧನ’ ಎಂದು ಬಿಜೆಪಿ ಮುಖಂಡ ಗುರುನಾಥ ಕೊಳ್ಳೂರ ಹೇಳಿದರು.

ತಾಲ್ಲೂಕಿನ ಚಿಟ್ಟಾ ಗ್ರಾಮದ ನವೀನ್ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

‘ಶಿಕ್ಷಣ ಒಂದು ದೊಡ್ಡ ಶಕ್ತಿಯಾಗಿದೆ. ಅದರಿಂದ ಏನು ಬೇಕಾದರೂ ಸಾಧನೆ ಮಾಡಬಹುದು. ಹೀಗಾಗಿ ಪಾಲಕರು ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು’ ಎಂದರು.

ADVERTISEMENT

‘ಪ್ರಸ್ತುತ ಮಕ್ಕಳಿಗೆ ಸಂಸ್ಕಾರಯುತ ಹಾಗೂ ಗುಣಮಟ್ಟದ ಶಿಕ್ಷಣದ ಅವಶ್ಯಕತೆಯಿದೆ. ಮಕ್ಕಳನ್ನು ಆದರ್ಶ ಪ್ರಜೆಗಳನ್ನಾಗಿ ರೂಪಿಸುವ ಕೆಲಸ ಆಗಬೇಕಾಗಿದೆ’ ಎಂದು ಹೇಳಿದರು.

‘ನವೀನ್ ಪಬ್ಲಿಕ್ ಶಾಲೆಯು ಮಕ್ಕಳಿಗೆ ಗುಣಮಟ್ಟದ ಹಾಗೂ ಸ್ಪರ್ಧಾತ್ಮಕ ಶಿಕ್ಷಣ ಒದಗಿಸುತ್ತಿರುವುದು ಪ್ರಶಂಸನೀಯ’ ಎಂದರು.

ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಜ್ಯೋತಿ ರ್ಮಯಾನಂದ ಸ್ವಾಮೀಜಿ ಮಾತನಾಡಿ, ‘ಮಕ್ಕಳಲ್ಲಿ ದೇಶಪ್ರೇಮ, ದೇಶಾಭಿಮಾನ ಮೂಡಿಸುವ, ಬದುಕುವ ಕಲೆ ಕಲಿಸುವ ಶಿಕ್ಷಣ ಜರೂರಿಯಾಗಿದೆ’ ಎಂದದರು.

ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕಿ ಗೀತಾ ಎಸ್.ಗದ್ದಿ ಮಾತನಾಡಿ, ‘ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಸಾಂಸ್ಕೃತಿಕ ಕಲೆಗಳ ಪಾತ್ರವೂ ಮಹತ್ವದ್ದಾಗಿದೆ. ಪಠ್ಯದ ಜತೆಗೆ ಸಾಂಸ್ಕೃತಿಕ ಚಟುವಟಿಕೆಗಳಿಗೂ ಉತ್ತೇಜನ ನೀಡಬೇಕಾಗಿದೆ’ ಎಂದರು.

ಶಾಲೆಯ ಕಾರ್ಯದರ್ಶಿ ಶೀಲಾ ಚಿಕ್ಕಬಸೆ ಮಾತನಾಡಿ, ‘ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣದ ಜತೆಗೆ ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಸಿಸಿ ಮತ್ತಿತರ ತರಬೇತಿಗಳನ್ನು ನೀಡಲಾಗುತ್ತಿದೆ. ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲಾಗುತ್ತಿದೆ’ ಎಂದರು.

ಶಾಲೆಯ ಉಪಾಧ್ಯಕ್ಷ ಬಸವರಾಜ ತಗಾರೆ ಮಾತನಾಡಿದರು. ಅಧ್ಯಕ್ಷ ಕಾಮಶೆಟ್ಟಿ ಚಿಕ್ಕಬಸೆ ಅಧ್ಯಕ್ಷತೆ ವಹಿಸಿದ್ದರು.

ಕಲಾವಿದೆ ರೇಖಾ ಅಪ್ಪಾರಾವ್ ಸೌದಿ ಅವರನ್ನು ಸನ್ಮಾನಿಸಲಾಯಿತು. ಮಹಾನಂದಾ ಮಠ ಸ್ವಾಗತಿಸಿದರು. ಸುನೀತಾ ರಾಮಶೆಟ್ಟಿ ನಿರೂಪಿಸಿದರು. ಚನ್ನಮ್ಮ ವಂದಿಸಿದರು.

ಮಕ್ಕಳಿಂದ ನಡೆದ ನೃತ್ಯ, ಗಾಯನ, ರೂಪಕ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.