ADVERTISEMENT

ಮುಖ್ಯಮಂತ್ರಿ ಅರ್ಬನ್ ನಕ್ಸಲ್ ಎಂಬ ಭಗವಂತ ಖೂಬಾ ಹೇಳಿಕೆಗೆ ಖಂಡ್ರೆ ಖಂಡನೆ

ಖಾಲಿ ಡಬ್ಬ ಸದಾ ಹೆಚ್ಚು ಶಬ್ದ ಮಾಡುತ್ತೆ: ಸಚಿವ ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 7:24 IST
Last Updated 24 ಸೆಪ್ಟೆಂಬರ್ 2025, 7:24 IST
<div class="paragraphs"><p>ಈಶ್ವರ ಖಂಡ್ರೆ</p></div>

ಈಶ್ವರ ಖಂಡ್ರೆ

   

ಬೀದರ್: ಜನರಿಂದ ತಿರಸ್ಕೃತವಾಗಿ ಕೆಲಸವಿಲ್ಲದೆ ಬೀದಿ ಬೀದಿ ಅಲೆಯುತ್ತಿರುವ ಭಗವಂತ ಖೂಬಾ, ಸಾಂವಿಧಾನಿಕ ಹುದ್ದೆಯಲ್ಲಿರುವ ಮುಖ್ಯಮಂತ್ರಿಯವರನ್ನು ನಗರ ನಕ್ಸಲ್ ಎನ್ನುವಷ್ಟು ನೀಚ ರಾಜಕೀಯದ ಪರಮಾವಧಿ ಎಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಖಂಡಿಸಿದ್ದಾರೆ.

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆಯೂ ಹಗುರವಾಗಿ ಮಾತನಾಡಿರುವ ಖೂಬಾ 10 ವರ್ಷ ಸಂಸದರಾಗಿ, ನಂತರ ಕೇಂದ್ರ ಸಚಿವರಾಗಿ ಮಾಡಿದ್ದು ಶೂನ್ಯ ಸಾಧನೆ. ಜಿಲ್ಲೆಗೆ ಏನೂ ಕೊಡುಗೆ ನೀಡದ ಅವರು ಖಾಲಿ ಡಬ್ಬ ಇದ್ದಂತೆ. ಖಾಲಿ ಡಬ್ಬ ಸದಾ ಹೆಚ್ಚು ಶಬ್ದ ಮಾಡುತ್ತದೆ ಎಂದು ಬುಧವಾರ ಪ್ರಕಟಣೆ ಹೊರಡಿಸಿ ಟೀಕಿಸಿದ್ದಾರೆ.

ADVERTISEMENT

ಸರ್ವರಿಗೂ ಸಾಮಾಜಿಕ ನ್ಯಾಯ ದೊರಕಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ರಮಿಸುತ್ತಿದ್ದಾರೆ. ಪಂಚ ಗ್ಯಾರಂಟಿಗಳ ಮೂಲಕ ಕಡು ಬಡವರ ಜೀವನದಲ್ಲಿ ಹೊಸ ಹುರುಪು ತಂದಿದ್ದಾರೆ. ಜನಪ್ರಿಯ ಮುಖ್ಯಮಂತ್ರಿಗಳ ಬಗ್ಗೆ ಮಾಜಿ ಸಂಸದರು ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂದು ಆಗ್ರಹಿಸಿದ್ದಾರೆ.

ಕೋವಿಡ್ ಕಾಲದಲ್ಲಿ ಬೀದರ್ ಜನತೆ ಆಸ್ಪತ್ರೆಯಲ್ಲಿ ಹಾಸಿಗೆ ಸಿಗದೆ ಬೀದಿಯಲ್ಲಿ ಬಿದ್ದಿದ್ದಾಗ ಇವರದೇ ಸರ್ಕಾರ ಇದ್ದರೂ ಜನರ ನೆರವಿಗೆ ಖೂಬಾ ಬರಲಿಲ್ಲ. ಹೇಡಿಯಂತೆ ಬಚ್ಚಿಟ್ಟುಕೊಂಡಿದ್ದರು. ರೆಮಿಡಿಸಿವರ್ ಚುಚ್ಚುಮದ್ದು ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದರೂ ನೊಂದವರ ಕಣ್ಣೀರು ಒರೆಸಲಿಲ್ಲ. ಖೂಬಾ ಜನವಿರೋಧಿ ನೀತಿಗೆ ಮತದಾರರೇ ಅವರನ್ನು ಸೋಲಿಸಿ ಮನೆಗೆ ಕಳಿಸಿದರು. ಈಗ ಕೆಲಸವಿಲ್ಲದ ಖೂಬಾ ನಿತ್ಯ ಪತ್ರಿಕಾ ಹೇಳಿಕೆ ನೀಡುತ್ತಾ ಕಾಲ ದೂಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಶ್ವಾನ ಬೊಗಳಿದರೆ ಸ್ವರ್ಗಲೋಕಕ್ಕೆ ಕೇಡೆ ಎಂಬ ಗಾದೆ ಕನ್ನಡದಲ್ಲಿದೆ. ಹೀಗಾಗಿ ಇಷ್ಟು ದಿನ ತಾವು ಅವರ ಯಾವುದೇ ಹೇಳಿಕೆಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ಮುಖ್ಯಮಂತ್ರಿ ಮತ್ತು ರಾಹುಲ್ ಗಾಂಧಿ ಅವರ ಬಗ್ಗೆ ಮಾತನಾಡಿರುವುದನ್ನು ನಾನು ಉಗ್ರ ಶಬ್ದಗಳಿಂದ ಖಂಡಿಸುತ್ತಿದ್ದೇನೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.