ADVERTISEMENT

ಹುಮನಾಬಾದ್ | ಮೊಟ್ಟೆ ದರ ಹೆಚ್ಚಳ: ಶಿಕ್ಷಕರಿಗೆ ಹೊರೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2025, 5:39 IST
Last Updated 31 ಜನವರಿ 2025, 5:39 IST
ಮೊಟ್ಟೆ
ಮೊಟ್ಟೆ   

ಹುಮನಾಬಾದ್: ಮಾರುಕಟ್ಟೆಯಲ್ಲಿ ಮೊಟ್ಟೆ ದರ ಹೆಚ್ಚಳವಾಗಿದ್ದರಿಂದ ಪ್ರಾಥಮಿಕ ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ ಹೊರೆಯಾಗಿ ಪರಿಣಮಿಸಿದೆ.

1ನೇ ತರಗತಿಯಿಂದ 10ನೇ ತರಗತಿ ವರೆಗಿನ ಸರ್ಕಾರಿ ಹಾಗೂ ಅನುದಾನಿತ ಶಾಲೆಯ ಮಕ್ಕಳಿಗೆ ಬಿಸಿಯೂಟದ ಜೊತೆಗೆ ಬೇಯಿಸಿದ ಮೊಟ್ಟೆ ವಿತರಣೆ ಮಾಡಬೇಕು ಎಂಬ ಸರ್ಕಾರದ ಆದೇಶ ಇದೆ .

ಶಾಲೆಗಳಿಗೆ ಸರ್ಕಾರದಿಂದ ನೀಡುತ್ತಿರುವ ಅನುದಾನ ಸಾಕಾಗದೇ ಮುಖ್ಯಶಿಕ್ಷಕರು ತಮ್ಮ ಸ್ವಂತ ಹಣ ನೀಡುವ ಪರಿಸ್ಥಿತಿ ಬಂದಿದೆ.

ADVERTISEMENT

ಶಾಲಾಭಿವೃದ್ಧಿ ಸಮಿತಿ ಹಾಗೂ ಮುಖ್ಯಶಿಕ್ಷಕರ ಜಂಟಿ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಹಣ ತುಂಬಲಾಗುತ್ತಿದೆ. ಒಂದು ಮೊಟ್ಟೆಗೆ ಸರ್ಕಾರ ₹6 ರೂಪಾಯಿ ನೀಡುತ್ತಿದೆ. ಇದರಲ್ಲಿ ಮೊಟ್ಟೆ ಸುಲಿಯುವುದಕ್ಕೆ 30ಪೈಸೆ, ಸರಬರಾಜು ಮಾಡುವುದಕ್ಕೆ 20ಪೈಸೆ ಹಾಗೂ ಬೇಯಿಸಲು 30ಪೈಸೆ ಬಳಸಬೇಕಾಗಿದೆ. ಇನ್ನುಳಿದ 5.20ರಲ್ಲಿಯೇ ಮೊಟ್ಟೆ ಖರೀದಿಸುವ ಪರಿಸ್ಥಿತಿ ಇವರದ್ದಾಗಿದೇ. ಸದ್ಯ ಮಾರುಕಟ್ಟೆಯಲ್ಲಿ ಒಂದು ಮೊಟ್ಟೆಗೆ ₹7.50 ಪೈಸೆ ಇದೆ. ದಿನದಿಂದ ದಿನಕ್ಕೆ ಮೊಟ್ಟೆ ಬೆಲೆ ವಿಭಿನ್ನವಾಗಿರುತ್ತದೆ. ಹೀಗಾಗಿ ಸರ್ಕಾರದಿಂದ ನೀಡುತ್ತಿರುವ ಅನುದಾನದಲ್ಲಿ ಮೊಟ್ಟೆ ಖರೀದಿ ಮಾಡುವುದು ಕಷ್ಟವಾಗುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರೊಬ್ಬರು ಹೇಳುತ್ತಾರೆ.

’ಸರ್ಕಾರದಿಂದ ವಾರದಲ್ಲಿ ಎರಡು ದಿನ ಮೊಟ್ಟೆ ವಿತರಣೆ ಮಾಡಲಾಗುತ್ತಿತ್ತು. ಈಗ ಅಜೀಂ ಪ್ರೇಮ್‌ಜಿ ಫೌಂಡೇಷನ್ ನೆರವಿನಿಂದ ವಾರದಲ್ಲಿ 6 ದಿನವೂ ಮೊಟ್ಟೆ ವಿತರಿಸಲಾಗುತ್ತಿದೆ. ಒಂದು ಮೊಟ್ಟೆಗೆ ₹7 ಕೊಟ್ಟರೆ ಮುಖ್ಯಶಿಕ್ಷಕರಿಗೆ ಹೊರೆ ಆಗುವುದಿಲ್ಲ’ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮುರುಘೇಂದ್ರ ಸಜ್ಜನಶಟ್ಟಿ ತಿಳಿಸಿದ್ದಾರೆ.

ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆಹಣ್ಣು ಕೊಡಬೇಕು. ಈಗ ಮಾರುಕಟ್ಟೆಯಲ್ಲಿ ಬಾಳೆಹಣ್ಣಿನ ಬೆಲೆಯೂ ಹೆಚ್ಚಾಗಿದೆ. ಹೀಗಾಗಿ ಮೊಟ್ಟೆ ವಿತರಣೆಗೆ ಸರ್ಕಾರ ನೀಡುತ್ತಿರುವ ಅನುದಾನ ಹೆಚ್ಚಳ ಮಾಡಬೇಕು ಎಂಬುವುದು ಶಾಲೆಯ ಮುಖ್ಯ ಶಿಕ್ಷಕರ ಒತ್ತಾಯವಾಗಿದೆ.

ಮಹಾವೀರ ಜಮಖಂಡಿ
ಸದ್ಯ ಮಾರುಕಟ್ಟೆಯಲ್ಲಿ ಬಾಳೆಹಣ್ಣು ಮತ್ತು ಮೊಟ್ಟೆ ದರ ಹೆಚ್ಚಳವಾಗಿದೆ. ಇದರಿಂದ ಮುಖ್ಯ ಶಿಕ್ಷಕರಿಗೆ ಇದು ಹೊರೆಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕಾಗಿದೆ
ಶರದಕುಮಾರ್ ಪ್ರೌಢಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ
ಅನುದಾನಕ್ಕಿಂತ ಹೆಚ್ಚಿನ ಹಣ ಖರ್ಚಾಗುತ್ತಿರುವುದು ಗಮನಕ್ಕೆ ಬಂದಿದ್ದು ಮೇಲಾಧಿಕಾರಿಗಳಿಗೆ ತಿಳಿಸಲಾಗಿದೆ.
ಮಹಾವೀರ ಜಮಖಂಡಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.