ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಸಮುದಾಯದವರು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಿದರು.
ಪ್ರಜಾವಾಣಿ ಚಿತ್ರ: ಲೋಕೇಶ ವಿ. ಬಿರಾದಾರ
ಬೀದರ್: ಇಸ್ಲಾಂ ಧರ್ಮದ ಪ್ರವರ್ತಕ ಹಜರತ್ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಸಮುದಾಯದವರು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಿದರು.
ನಗರದ ಚೌಬಾರ ಸಮೀಪದ ಜುಮ್ಮಾ ಮಸೀದಿ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಸಿದ್ಧಿ ತಾಲೀಮ್, ನಯಾ ಕಮಾನ್, ಮಹಮೂದ್ ಗಾವಾನ್ ವೃತ್ತ, ಶಹಾಗಂಜ್, ಮೈಲೂರ್, ಚಿದ್ರಿ ಹಾಗೂ ಗ್ರಾಮೀಣ ಭಾಗಗಳ ಮಸೀದಿ, ದರ್ಗಾಗಳಲ್ಲಿ ಬೆಳಿಗ್ಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಆನಂತರ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಬಳಿಕ ಮಹಮೂದ್ ಗಾವಾನ್ ವೃತ್ತದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಜನ ಪಾಲ್ಗೊಂಡಿದ್ದರು. ಹೆಚ್ಚಿನವರು ಕಾಲ್ನಡಿಗೆಯಲ್ಲಿ ಹೆಜ್ಜೆ ಹಾಕಿದರು. ಕೆಲವರು ಬೈಕ್ ಮೇಲೆ ಧ್ವಜಗಳನ್ನು ಬೀಸುತ್ತ ಘೋಷಣೆ ಹಾಕುತ್ತ ಶಾಂತಿಯುತವಾಗಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕಿರಿಯರಿಂದ ಹಿರಿಯರ ವರೆಗೆ ಎಲ್ಲ ವಯೋಮಾನದವರು ಪಾಲ್ಗೊಂಡಿದ್ದರು.
ಮೆರವಣಿಗೆಯುದ್ದಕ್ಕೂ ಪೈಗಂಬರ್ ಅವರ ಜೀವನ ಸಂದೇಶಗಳನ್ನು ಹೇಳಿದರು. ಕೆಲವರು ಕುರಾನ್ ಪಠಣ ಮಾಡಿದರು. ಕೆಲ ಸಂಘ ಸಂಸ್ಥೆಯವರು ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಪಾನಕ ವ್ಯವಸ್ಥೆ ಮಾಡಿದ್ದರು. ಪಂಜಾಬ್‌ನಲ್ಲಿ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಯುವಕರು ದೇಣಿಗೆ ಕೂಡ ಸಂಗ್ರಹಿಸಿದರು. ಎಲ್ಲ ಮಸೀದಿಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.
ಶಹಾಗಂಜ್, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ನಯಾ ಕಮಾನ್, ಸಿದ್ದಿ ತಾಲೀಮ್, ಚೌಬಾರ ಮೂಲಕ ಹಾದು ಜುಮ್ಮಾ ಮಸೀದಿ ಬಳಿ ಮೆರವಣಿಗೆ ಕೊನೆಗೊಂಡಿತು. ರಜಾ ದಿನವಾಗಿದ್ದರಿಂದ ಬಹುತೇಕ ಮಳಿಗೆಗಳು ಮಧ್ಯಾಹ್ನದ ವರೆಗೆ ಮುಚ್ಚಿದ್ದವು. ಜನರ ಸಂಚಾರ ಹೆಚ್ಚಿರದ ಕಾರಣ ಸಾರ್ವಜನಿಕರಿಗೆ ತೊಂದರೆ ಆಗಿರಲಿಲ್ಲ. ಮೆರವಣಿಗೆ ಹಾದು ಹೋಗುವವರೆಗೆ ಸಂಚಾರಿ ಪೊಲೀಸರು ಬೇರೆ ಮಾರ್ಗಗಳ ಮೂಲಕ ವಾಹನಗಳ ಸಂಚಾರಕ್ಕೆ ಅನುವು ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.