ಬೀದರ್: ಒಂದು ಕಾಲದಲ್ಲಿ ಬೆಳ್ಳಿ ಪರದೆ ಮೇಲೆ ಸಿನಿಮಾ ನೋಡುವುದೆಂದರೆ ಜನರಿಗೆ ಒಂದು ರೀತಿಯ ಹುಚ್ಚು. ಆದರೆ, ಕಾಲದ ಹೊಡೆತಕ್ಕೆ ಎಲ್ಲವೂ ಬದಲಾಗಿ ಹೋಗಿದೆ.
ದೊಡ್ಡ ದೊಡ್ಡ ಬೆಳ್ಳಿ ಪರದೆಗಳ ಜಾಗವನ್ನು ಈಗ 3ಡಿ, 4ಕೆ, 5ಕೆ ಯುಎಚ್‌ಡಿ ಸೌಲಭ್ಯ ಹೊಂದಿರುವ ದೊಡ್ಡ ಗಾತ್ರದ ಟಿ.ವಿಗಳು ಆಕ್ರಮಿಸಿಕೊಂಡಿವೆ. ‘ಓವರ್ ದಿ ಟಾಪ್’ (ಒಟಿಟಿ) ಸೌಲಭ್ಯ ಬಂದ ನಂತರವಂತೂ ಸಿನಿಮಾಗಳನ್ನು ನೋಡುವ ಬಗೆಯೇ ಬದಲಾಗಿದೆ.
ತಂತ್ರಜ್ಞಾನದಲ್ಲಾದ ಸುಧಾರಣೆ, ಉಪಗ್ರಹ ಆಧಾರಿತ ಸೇವಾ ಸೌಕರ್ಯ ಆರಂಭಗೊಂಡ ನಂತರ ದೊಡ್ಡ ಪರದೆಯ ಟಿ.ವಿ.ಗಳಲ್ಲಿ ಮನೆಯಲ್ಲಿಯೇ ಕುಳಿತುಕೊಂಡು ಕುಟುಂಬ ಸದಸ್ಯರೊಂದಿಗೆ ಸಿನಿಮಾ ನೋಡಬಹುದು. ಅದು ಕೂಡ ಸಿನಿಮಾ ತೆರೆ ಕಂಡ ಮೊದಲ ದಿನವೇ. ಇನ್ನು, ಸಿರಿವಂತರು 40ರಿಂದ 50 ಜನ ಕುಳಿತುಕೊಂಡು ಒಟ್ಟಿಗೆ ಸಿನಿಮಾ ನೋಡಬಹುದಾದ ಸಣ್ಣ ಸಿನಿಮಾ ಮಂದಿರವನ್ನು ತಮ್ಮ ಐಷಾರಾಮಿ ಬಂಗ್ಲೆಗಳಲ್ಲಿಯೇ ನಿರ್ಮಿಸಿಕೊಂಡಿದ್ದಾರೆ.
ಇನ್ನು, ಪ್ರತಿಯೊಬ್ಬರೂ ಮೊಬೈಲ್, ಟ್ಯಾಬ್, ಲ್ಯಾಪ್‌ಟಾಪ್ ಉಪಯೋಗಿಸುತ್ತಿದ್ದಾರೆ. ಇದರಲ್ಲೂ ಉತ್ತಮ ಗುಣಮಟ್ಟದ ಸಿನಿಮಾಗಳನ್ನು ನೋಡಬಹುದು. ಅದು ಕೂಡ ಯಾವುದೇ ಜಾಹೀರಾತುಗಳ ಕಿರಿಕಿರಿ ಇಲ್ಲದೆಯೇ. ಈ ಎಲ್ಲದರ ಕಾರಣದಿಂದ ಸಿನಿಮಾ ಮಂದಿರಗಳ ಕಡೆಗೆ ಜನ ಬರುವುದು ಕಡಿಮೆಯಾಗಿ, ನಷ್ಟಕ್ಕೆ ದಾರಿ ಮಾಡಿಕೊಟ್ಟಿದ್ದರಿಂದ ಅವುಗಳು ಬಂದ್ ಆಗಿವೆ.
ಉದ್ಯೋಗ ಕಳೆದುಕೊಂಡವರು ಸಂಕಷ್ಟಕ್ಕೆ:
ಬೀದರ್ ನಗರವೊಂದರಲ್ಲೇ ಎಂಟು ಸಿನಿಮಾ ಮಂದಿರಗಳಿದ್ದವು. ಅವುಗಳಿಗೆ ಈಗ ಬೀಗ ಹಾಕಲಾಗಿದೆ. ಕೆಲವು ಕಟ್ಟಡಗಳಂತೂ ತೆರವುಗೊಳಿಸಿ, ಅಲ್ಲಿ ಬೇರೆ ಉದ್ದೇಶಕ್ಕಾಗಿ ಕಟ್ಟಡ ನಿರ್ಮಿಸಲಾಗುತ್ತಿದೆ. ಮತ್ತೆ ಕೆಲ ಚಿತ್ರ ಮಂದಿರಗಳು ಕಲ್ಯಾಣ ಮಂಟಪದ ಸ್ವರೂಪ ಪಡೆದುಕೊಂಡಿವೆ.
ನಗರದಲ್ಲಿ ಸಂಗಮ, ದೀಪಕ್, ಮಿನಿ ದೀಪಕ್, ಗುಲ್ಜಾರ್, ಫಿರೋಜ್, ಫರ್ದಿನ್, ಚಿತ್ರಲೇಖಾ ಹಾಗೂ ಫಿರೋಜ್ ಚಿತ್ರಮಂದಿರಗಳು ಸಾಕಷ್ಟು ಹೆಸರಾಗಿದ್ದವು. ಮಾಸ್ ನಟ/ನಟಿಯರ ಚಿತ್ರಗಳೆಲ್ಲ ಅಲ್ಲಿ ರಿಲೀಸ್ ಆಗುತ್ತಿದ್ದವು. ದೊಡ್ಡ ದೊಡ್ಡ ಕಟೌಟ್, ಬ್ಯಾನರ್‌ಗಳು ರಾರಾಜಿಸುತ್ತಿದ್ದವು. ಸದಾ ಪ್ರೇಕ್ಷಕರಿಂದ ತುಂಬಿರುತ್ತಿದ್ದವು. ಚಿತ್ರಗಳ ಮೂಲಕ ಸಿನಿಮಾ ಮಂದಿರಗಳಷ್ಟೇ ನಡೆಯುತ್ತಿರಲಿಲ್ಲ. ಅದರೊಂದಿಗೆ ಅನೇಕ ಸಣ್ಣ ಸಣ್ಣ ಕೆಲಸಗಳ ಮೂಲಕ ಅನೇಕರು ಬದುಕು ಕಟ್ಟಿಕೊಂಡಿದ್ದರು.
ಬೈಸಿಕಲ್ ಪಾರ್ಕಿಂಗ್, ಪಾನಿ ಪುರಿ, ಶೇಂಗಾ ಬೀಜ, ಮಿರ್ಚಿ ಭಜ್ಜಿ, ಹಪ್ಪಳ ಸೇರಿದಂತೆ ಇತರೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು. ಕೆಲವರು ಬ್ಲ್ಯಾಕ್‌ನಲ್ಲಿ ಟಿಕೆಟ್‌ಗಳನ್ನೂ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು. ಒಂದು ಸಿನಿಮಾ ಮಂದಿರದ ಮೇಲೆ ಹಲವರ ಜೀವನ ಅವಲಂಬಿಸಿತ್ತು. ಆದರೆ, ಈಗ ಅದೆಲ್ಲ ನೆನಪು. ಚಿತ್ರಮಂದಿರಗಳು ಬಂದ್ ಆಗುವುದರೊಂದಿಗೆ ಹಲವರು ಉದ್ಯೋಗ ಕಳೆದುಕೊಂಡಿದ್ದಾರೆ. ಕೆಲವರು ಅನ್ಯ ಕೆಲಸಗಳತ್ತ ಮುಖ ಮಾಡಿದರೆ, ಕೆಲವರು ಕೈಚೆಲ್ಲಿ ಸುಮ್ಮನೆ ಕುಳಿತುಕೊಂಡಿದ್ದಾರೆ. ಆ ಕುಟುಂಬಗಳೆಲ್ಲ ಈಗ ಸಂಕಷ್ಟ ಎದುರಿಸುತ್ತಿವೆ. ಅವರನ್ನು ಕೇಳುವವರು ಯಾರೂ ಇಲ್ಲ.
ನಗರದಲ್ಲಿ ಸದ್ಯ ಮಲ್ಟಿಫ್ಲೆಕ್ಸ್‌ವೊಂದರಲ್ಲಿ ನಾಲ್ಕು ಸ್ಕ್ರಿನ್‌ಗಳಿವೆ. ಆದರೆ, ಅದು ಕೂಡ ಹೇಳಿಕೊಳ್ಳುವಂತಹ ರೀತಿಯಲ್ಲಿ ನಡೆಯುತ್ತಿಲ್ಲ. ಹೆಚ್ಚಿನ ಸಿನಿಮಾಗಳು ರಿಲೀಸ್ ಆಗದ ಕಾರಣ ಕೆಲವೊಮ್ಮೆ ಒಂದು ಅಥವಾ ಎರಡು ಸ್ಕ್ರಿನ್‌ಗಳಲ್ಲಿ ಸಿನಿಮಾ ಪ್ರದರ್ಶನಗೊಂಡರೆ ಹೆಚ್ಚು ಎಂಬಂತಹ ಪರಿಸ್ಥಿತಿ ಇದೆ.
‘ಥಿಯೇಟರ್ ನಡೆಸುವುದು ಈಗ ಸುಲಭದ ಮಾತಲ್ಲ. ಹಿಂದೆ ತಿಂಗಳಲ್ಲಿ ನಾಲ್ಕೈದು ಸಿನಿಮಾಗಳು ಬರುತ್ತಿದ್ದವು. ಈಗ ವರ್ಷದಲ್ಲಿ ಏಳೆಂಟು ಬಂದರೆ ಹೆಚ್ಚು. ಹಳೆಯ ಸಿನಿಮಾಗಳನ್ನು ಹಾಕಿದರೆ ಜನ ನೋಡುವುದಿಲ್ಲ. ಹೆಚ್ಚಿನ ನಷ್ಟ ಉಂಟಾಗುತ್ತಿದ್ದರಿಂದ ಒಲ್ಲದ ಮನಸ್ಸಿನಿಂದ ಬಂದ್ ಮಾಡಿದ್ದೇವೆ’ ಎಂದು ಹೆಸರು ಹೇಳಲಿಚ್ಛಿಸದ ಚಿತ್ರಮಂದಿರದ ಮಾಲೀಕರೊಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
‘ಹಿಂದಿನಂತೆ ರಿಲೀಸ್ ಆಗದ ಸಿನಿಮಾ’ ‘ಈಗ ಮಾಸ್ ನಟರ ಸಿನಿಮಾಗಳು ಹಿಂದಿನಂತೆ ಬರುತ್ತಿಲ್ಲ. ಎರಡ್ಮೂರು ವರ್ಷಗಳಿಗೊಮ್ಮೆ ಸಿನಿಮಾಗಳು ಬರುತ್ತಿವೆ. ಕನ್ನಡದಲ್ಲಿ ಡಾ. ರಾಜಕುಮಾರ ವಿಷ್ಣುವರ್ಧನ್ ಶಿವರಾಜಕುಮಾರ್ ರವಿಚಂದ್ರನ್ ಹಿಂದಿಯಲ್ಲಿ ಅಮಿತಾಭ್ ಬಚ್ಚನ್ ಸಲ್ಮಾನ್ ಖಾನ್ ಶಾರೂಕ್ ಖಾನ್ ಅಮೀರ್ ಖಾನ್ ಅಕ್ಷಯ್ ಕುಮಾರ್ ಸುನೀಲ್ ಶೆಟ್ಟಿ ಸನ್ನಿ ಡಿಯೊಲ್ ಸಂಜಯ್ ದತ್ ಸೇರಿದಂತೆ ಪ್ರಸಿದ್ಧ ನಟರ ಚಲನಚಿತ್ರಗಳು ವರ್ಷದಲ್ಲಿ ಕನಿಷ್ಠ ಎಂಟರಿಂದ ಹತ್ತು ರಿಲೀಸ್ ಆಗುತ್ತಿದ್ದವು. ಸಿನಿಮಾ ನೋಡಲು ಜನ ಹೋಗುತ್ತಿದ್ದರು. ಕಳೆದ 8ರಿಂದ 10 ವರ್ಷಗಳಿಂದ ಪರಿಸ್ಥಿತಿ ಬದಲಾಗಿದೆ. ಇದರಿಂದ ಚಿತ್ರಮಂದಿರಗಳ ಮೇಲೆ ಪ್ರಭಾವ ಉಂಟಾಗಿ ಅವುಗಳು ಬಂದ್ ಆಗಿವೆ’ ಎನ್ನುತ್ತಾರೆ ಸಿನಿಮಾ ಪ್ರಿಯ ಜಗದೀಶ್ ಲಾಖಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.