
ಬೀದರ್: ಆನೆಕಾಲು ರೋಗ ನಿರ್ಮೂಲನೆಗಾಗಿ ಜಿಲ್ಲೆಯಲ್ಲಿ ಸೆ. 24 ರಿಂದ ಅಕ್ಟೋಬರ್ 6 ರ ವರೆಗೆ ನಡೆಯಲಿರುವ ಕೊನೆಯ ಸುತ್ತಿನ ಸಾಮೂಹಿಕ ಔಷಧಿ ನುಂಗಿಸುವ ಕಾರ್ಯಕ್ರಮದ ಪ್ರಯುಕ್ತ ನಗರದಲ್ಲಿ ಶನಿವಾರ ಜನಜಾಗೃತಿ ಜಾಥಾ ನಡೆಯಿತು.
ಡಿಎಚ್‌ಒ ಕಚೇರಿ ಆವರಣದಿಂದ ಶುರುವಾದ ಜಾಥಾ ಜನವಾಡ ರಸ್ತೆ, ಅಂಬೇಡ್ಕರ್ ವೃತ್ತ, ಮುಖ್ಯ ರಸ್ತೆ, ಗವಾನ್ ಚೌಕ್, ಚೌಬಾರಾ, ಮಂಗಲಪೇಟ್, ಅಬುಲ್ ಫೈಜ್ ದರ್ಗಾ, ಲಾಡಗೇರಿ, ಕುಂಬಾರವಾಡ, ಸಿದ್ಧಾರೂಢ ಮಠ, ಮೈಲೂರು, ಚಿದ್ರಿ, ಆದರ್ಶ ಕಾಲೊನಿ, ನೌಬಾದ್, ಕೇಂದ್ರ ಬಸ್ ನಿಲ್ದಾಣ ಮಾರ್ಗವಾಗಿ ಹಾಯ್ದು ಮರಳಿ ಡಿಎಚ್‌ಒ ಕಚೇರಿ ಆವರಣಕ್ಕೆ ಬಂದು ಮುಕ್ತಾಯಗೊಂಡಿತು.
ವಿದ್ಯಾರ್ಥಿಗಳು ಕೈಯಲ್ಲಿ ‘ಮಲಗುವಾಗ ಸೊಳ್ಳೆ ಪರದೆ ಬಳಸಿ’, ‘ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ’ ಎಂಬಿತ್ಯಾದಿ ಬರಹಗಳನ್ನು ಹೊಂದಿದ್ದ ಫಲಕಗಳನ್ನು ಹಿಡಿದುಕೊಂಡಿದ್ದರು. ಜಾಥಾದಲ್ಲಿ ವಾಹನಗಳೂ ಪಾಲ್ಗೊಂಡಿದ್ದವು.
ಇದಕ್ಕೂ ಮುನ್ನ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ, ‘ಆನೆಕಾಲು ರೋಗ ನಿರ್ಮೂಲನೆಗಾಗಿ ಸಾರ್ವಜನಿಕರು ಊಟದ ನಂತರ ಡಿಇಸಿ, ಅಲ್ಬೆಂಡಾಜೋಲ್ ಮಾತ್ರೆಗಳನ್ನು ಸೇವಿಸಬೇಕು. ಕಾರ್ಯಕ್ರಮದ ಯಶಸ್ವಿಗೆ ಆರೋಗ್ಯ ಇಲಾಖೆಯ ಸಿಬ್ಬಂದಿ ಶ್ರಮಿಸಬೇಕು’ ಎಂದು ಹೇಳಿದರು.
‘ಜಿಲ್ಲೆಯಲ್ಲಿ 3,599 ಜನರಿಗೆ ಆನೆ ಕಾಲು ರೋಗ ಇರುವುದನ್ನು ಪತ್ತೆ ಮಾಡಲಾಗಿದೆ. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಸಾರ್ವಜನಿಕ ಆಸ್ಪತ್ರೆಗಳಲ್ಲಿ ರೋಗ ನಿರ್ವಹಣಾ ಚಿಕಿತ್ಸೆ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.
‘ರೋಗ ಪ್ರಸರಣ ಗೊತ್ತುಪಡಿಸಲು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ರಾತ್ರಿ ಸಾರ್ವಜನಿಕರ ರಕ್ತ ಲೇಪನ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದಾಗ 194 ಜನ ರೋಗ ಹರಡುವ ಮೈಕ್ರೊ ಫೈಲೇರಿಯಾ ಜಂತು ಹೊಂದಿರುವುದು ದೃಢಪಟ್ಟಿದೆ. ಇವರಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಿ ಮುಂದಿನ ಅಪಾಯದಿಂದ ಪಾರು ಮಾಡುವ ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದರು.
‘ಔಷಧಿ ಸೇವನೆ ನಂತರ ಈಗಾಗಲೇ ಆನೆಕಾಲು ರೋಗ ಉಂಟು ಮಾಡುವ ಮೈಕ್ರೊಫೈಲೇರಿಯಾ ಜಂತುಗಳು ಶರೀರದಲ್ಲಿ ಇದ್ದವರಲ್ಲಿ ಕೆಲವರಿಗೆ ಸೌಮ್ಯ ರೀತಿಯ ಜ್ವರ, ವಾಕರಿಕೆ, ತಲೆಸುತ್ತು ಬರುವ ಸಾಧ್ಯತೆ ಇರುತ್ತದೆ. ಕೆಲ ಹೊತ್ತಿನ ನಂತರ ತಾನಾಗಿಯೇ ಉಪ ಶಮನವೂ ಆಗುತ್ತದೆ. ಆದರೂ, ವ್ಯತಿರಿಕ್ತ ಪರಿಣಾಮ ಎದುರಿಸುವ 62 ಕ್ಷಿಪ್ರ ಆರೋಗ್ಯ ತಂಡಗಳನ್ನು ರಚಿಸಿ ಅಗತ್ಯ ಔಷಧಿಯ ವ್ಯವಸ್ಥೆ ಮಾಡಲಾಗಿದೆ’ ಎಂದು ಜಿಲ್ಲಾ ಮಲೇರಿಯಾ ಹಾಗೂ ಫೈಲೇರಿಯಾ ಅಧಿಕಾರಿ ಡಾ. ಅನಿಲ ಚಿಂತಾಮಣಿ ತಿಳಿಸಿದರು.
ಜಿಲ್ಲಾ ನೋಡಲ್ ಕೀಟಶಾಸ್ತ್ರಜ್ಞೆ ನಂದಿನಿ, ಜಾನೆಟ್ ಮೆನೆಜಿಸ್, ಜಿಲ್ಲಾ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ. ರವೀಂದ್ರ ಸಿರಸಗಿ, ಡಾ. ಶಿವಶಂಕರ ಬಿ., ಡಾ. ರಾಜಶೇಖರ ಪಾಟೀಲ, ಡಾ.ಇಂದುಮತಿ ಪಾಟೀಲ, ಡಾ. ದೀಪಾ ಖಂಡ್ರೆ, ಡಾ. ರಾಹಿಲ್, ಅಬ್ದುಲ್ ಸಲೀಂ, ಸುಭಾಷ ಮುಧಾಳೆ, ಜಿಲ್ಲಾ ಮಲೇರಿಯಾ ಮತ್ತು ಫೈಲೇರಿಯಾ ಕಚೇರಿಯ ಮೇಲ್ವಿಚಾರಕರಾದ ಶಾಂತಪ್ಪ, ಮಲ್ಲಿಕಾರ್ಜುನ ಸದಾಶಿವ, ಕಮಲಾಕರ್, ಸಂಗಶೆಟ್ಟಿ, ದೇವಿದಾಸ, ನಿಂಗನಗೌಡ ಬಿರಾದಾರ, ಮಹೆಬೂಬ್‌ಮಿಯಾ, ರಾಜು ಕುಲಕರ್ಣಿ, ಮೋಜಸ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.