ADVERTISEMENT

ಕಲಾವಿದರ ಸಾಂಸ್ಕೃತಿಕ ಅಕಾಡೆಮಿ ಸ್ಥಾಪಿಸಿ

ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 15:19 IST
Last Updated 10 ಆಗಸ್ಟ್ 2021, 15:19 IST
ಬೀದರ್‌ನ ಜಿಲ್ಲಾ ರಂಗ ಮಂದಿರದಲ್ಲಿ ಮಂಗಳವಾರ ನಡೆದ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಜಿಲ್ಲಾ ಘಟಕದ ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ ಮಾತನಾಡಿದರು
ಬೀದರ್‌ನ ಜಿಲ್ಲಾ ರಂಗ ಮಂದಿರದಲ್ಲಿ ಮಂಗಳವಾರ ನಡೆದ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಜಿಲ್ಲಾ ಘಟಕದ ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ ಮಾತನಾಡಿದರು   

ಬೀದರ್‌: ಕಲ್ಯಾಣ ಕರ್ನಾಟಕ ಕಲಾವಿದರ ಸಾಂಸ್ಕೃತಿಕ ಅಕಾಡೆಮಿ ಸ್ಥಾಪನೆ ಮಾಡುವ ಮೂಲಕ ರಾಜ್ಯ ಸರ್ಕಾರ ಕಲಾವಿದರ ಅಭಿವೃದ್ಧಿಗೆ ನೆರವಾಗಬೇಕು ಎಂದು ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಆಗ್ರಹಿಸಿದೆ.

ಇಲ್ಲಿಯ ಚನ್ನಬಸವ ಪಟ್ಟದೇವರು ಜಿಲ್ಲಾ ರಂಗ ಮಂದಿರದಲ್ಲಿ ನಡೆದ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಜಿಲ್ಲಾ ಘಟಕದ ಸಭೆಯಲ್ಲಿ ಕಲಾವಿದರು ಒಕ್ಕೊರಲಿನಿಂದ ಬೇಡಿಕೆ ಮಂಡಿಸಿದರು.

‘ಆಂಧ್ರಪ್ರದೇಶದಲ್ಲಿ ಎಲ್ಲ ಪ್ರಕಾರದ ಕಲಾವಿದರಿಗೆ ಗುರುತಿನ ಚೀಟಿ ನೀಡಲಾಗಿದೆ. ಅದರಂತೆ ಚಳ್ಳಮ್ ಬಾರಿಸುವವರಿಂದ ಮೊದಲುಗೊಂಡು ಶಾಸ್ತ್ರೀಯ ಸಂಗೀತ ಗಾಯಕರ ವರೆಗೂ ರಾಜ್ಯ ಸರ್ಕಾರ ಕಡ್ಡಾಯವಾಗಿ ಗುರುತಿನ ಚೀಟಿ ಕೊಡಬೇಕು. ಕೆಲ ನಿಯಮಾವಳಿಗಳನ್ನು ರೂಪಿಸಿ ಕಲಾವಿದರಿಗೆ ಗುರುತಿನ ಚೀಟಿ ನೀಡಿದರೆ ಅನುಕೂಲವಾಗಲಿದೆ’ ಎಂದು ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ ತಿಳಿಸಿದರು.

‘ಮಾಸಾಶನಕ್ಕೆ ಅರ್ಜಿ ಸಲ್ಲಿಸುವ ಕಲಾವಿದರ ವಯೋಮಿತಿಯನ್ನು 58 ರಿಂದ 50ಕ್ಕೆ ಇಳಿಸಬೇಕು. ಕಲಾವಿದರಿಗೆ ಕೊಡುವ ಮಾಸಾಶನವನ್ನು ₹ 2 ಸಾವಿರದಿಂದ ₹ 5 ಸಾವಿರಕ್ಕೆ ಹೆಚ್ಚಿಸಬೇಕು’ ಎಂದು ಮನವಿ ಮಾಡಿದರು.

‘ಸ್ಥಳೀಯ ಸಂಸ್ಥೆಗಳು, ಪದವೀಧರ, ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆ ಮಾಡುವಂತೆ ಕಲಾವಿದರ ಕ್ಷೇತ್ರದಿಂದಲೂ ವಿಧಾನ ಪರಿಷತ್ತಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಇದರಿಂದ ರಾಜ್ಯದ ಕಲಾವಿದರ ಸಮಸ್ಯೆ ಹಾಗೂ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಅನುಕೂಲವಾಗಲಿದೆ’ ಎಂದು ತಿಳಿಸಿದರು.

41 ಶಾಸಕರಿಗೆ ಮನವಿ: ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ವತಿಯಿಂದ ಆಗಸ್ಟ್ 15ರಂದು ಧ್ವಜಾರೋಹಣ ಕಾರ್ಯಕ್ರಮದ ನಂತರ ಈ ಭಾಗದ 41 ಶಾಸಕರಿಗೆ ಆಯಾ ಸ್ಥಳಗಳಲ್ಲಿ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಲಾಗುವುದು ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಯಾದಗಿರಿಯ ಪ್ರಕಾಶ ಅಂಗಡಿ ಹೇಳಿದರು.

‘ಪ್ರೊ.ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ರಚಿಸಲಾದ ಸಾಂಸ್ಕೃತಿಕ ನೀತಿ ನಿರೂಪಣಾ ವರದಿಯನ್ನು ಜಾರಿ ಮಾಡಬೇಕು. ಕಲಬುರ್ಗಿ ಸೇರಿದಂತೆ ರಾಜ್ಯದ ನಾಲ್ಕು ವಿಭಾಗಗಳಲ್ಲಿ ಸಾಂಸ್ಕೃತಿಕ ಅಕಾಡೆಮಿಗಳನ್ನು ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಕರಾವಳಿಯ ಯಕ್ಷಗಾನಕ್ಕೆ ವಿಶ್ವ ಮಟ್ಟದಲ್ಲಿ ಮನ್ನಣೆಯಿದೆ. ಆದರೆ, ಕಲ್ಯಾಣ ಕರ್ನಾಟಕ ಪ್ರದೇಶದ ಬಯಲಾಟಕ್ಕೆ ಬೆಲೆ ಇಲ್ಲದಂತಾಗಿದೆ. ಯಕ್ಷಗಾನದ ಕಲಾವಿದರಿಗೆ ಮನ್ನಣೆ ನೀಡಿದಂತೆ ಬಯಲಾಟದ ಕಲಾವಿದರಿಗೂ ರಾಜ್ಯ ಸರ್ಕಾರ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.

ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಕಡಗೋಳ ಗ್ರಾಮದ ತತ್ವಪದಕಾರ ಕಡಗೋಳ ಮಡಿವಾಳಪ್ಪನವರ ಹೆಸರಿನಲ್ಲಿ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಬೇಕು. ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಸಭೆ ಹಾಗೂ ಸಮಾರಂಭಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕಲಾವಿದರಿಗೆ ಅವಕಾಶ ನೀಡಬೇಕು ಎಂದು ವಿನಂತಿಸಿದರು.

ಒಕ್ಕೂಟದ ಉಪಾಧ್ಯಕ್ಷ ರಾಯಚೂರಿನ ಡಿಂಗ್ರಿ ನರೇಶ ಮಾತನಾಡಿ, ‘ರಂಗ ಶಿಕ್ಷಕರನ್ನು ನೇಮಕ ಮಾಡಿದರೆ, ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಹೆಚ್ಚಾಗಲಿದೆ. ಈ ಹಿಂದೆ ಒಂದು ಬಾರಿ ಮಾತ್ರ 40 ಜನ ರಂಗ ಶಿಕ್ಷಕರನ್ನು ನೇಮಕ ಮಾಡಲಾಗಿತ್ತು. ತದನಂತರ ನೇಮಕಾತಿ ನಡೆದಿಲ್ಲ. ರಂಗ ಶಿಕ್ಷಕರ ನೇಮಕಾತಿ ಮುಂದುವರಿಸಬೇಕು ಎಂದು ಆಗ್ರಹಿಸಿದರು.

ಕಲಾವಿದರ ಒಕ್ಕೂಟದ ವತಿಯಿಂದ ಆಗಸ್ಟ್ 15 ರಂದು ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಜಿಲ್ಲಾ ರಂಗ ಮಂದಿರದಲ್ಲಿ ಫೇಸ್‍ಬುಕ್ ಲೈವ್ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಕಲಾಭಿಮಾನಿಗಳು ಮನೆಯಲ್ಲೇ ಕುಳಿತು ಮೊಬೈಲ್‌ಗಳಲ್ಲಿ ಕಾರ್ಯಕ್ರಮ ವೀಕ್ಷಣೆ ಮಾಡಬಹುದಾಗಿದೆ ಎಂದು ತಿಳಿಸಿದರು.

ಒಕ್ಕೂಟದ ಸಹ ಕಾರ್ಯದರ್ಶಿ ಬಳ್ಳಾರಿಯ ಅಂಬರೀಷ್ ವೇಷಗಾರ, ಮಹೇಶ ಪಾಟೀಲ, ರಾಜೇಂದ್ರಸಿಂಗ್‌ ಪವಾರ್, ಎಂ.ಎಸ್.ಮನೋಹರ, ಸುನೀಲ ಕಡ್ಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.