ADVERTISEMENT

ಸಣ್ಣಪುಟ್ಟ ಕಾರ್ಯಕ್ರಮಕ್ಕೂ ಅವಕಾಶ ಬೇಡ: ಡಾ.ರಿಚರ್ಡ್

ಬೀದರ್, ಬಸವಕಲ್ಯಾಣದಲ್ಲಿ ಕೋವಿಡ್ ನಿಯಂತ್ರಣಕ್ಕೆ ಇನ್ನಷ್ಟು ಕ್ರಮ: ಡಾ. ರಿಚರ್ಡ್ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಮೇ 2021, 2:24 IST
Last Updated 13 ಮೇ 2021, 2:24 IST
ಬೀದರ್‌ನಲ್ಲಿ ಬುಧವಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ರಿಚರ್ಡ್ ವಿನ್ಸಂಟ್ ಅವರು ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿದರು
ಬೀದರ್‌ನಲ್ಲಿ ಬುಧವಾರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ರಿಚರ್ಡ್ ವಿನ್ಸಂಟ್ ಅವರು ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿದರು   

ಬೀದರ್: ಕೋವಿಡ್ ನಿಯಂತ್ರಣಕ್ಕಾಗಿ ಲಾಕ್‍ಡೌನ್ ಜಾರಿಗೊಳಿಸಲಾದ ಪ್ರಯುಕ್ತ ಜಿಲ್ಲೆಯ ಯಾವುದೇ ಗ್ರಾಮಗಳಲ್ಲಿ ಸಣ್ಣಪುಟ್ಟ ಕಾರ್ಯಕ್ರಮ ಗಳಿಗೂ ಅವಕಾಶ ಕೊಡಬಾರದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ರಿಚರ್ಡ್ ವಿನ್ಸಂಟ್ ನಿರ್ದೇಶನ ನೀಡಿದರು.

ಲಾಕ್‍ಡೌನ್ ಹಾಗೂ ಕೋವಿಡ್ ಸ್ಥಿತಿಗತಿ ಮಾಹಿತಿ ಅರಿಯಲು ಇಲ್ಲಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆಸಿದ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಆರೋಗ್ಯ ಹಾಗೂ ಇತರ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಮಾಸ್ಕ್ ಧರಿಸುವ ಕುರಿತು ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಮಾಸ್ಕ್ ಧರಿಸದವರಿಗೆ ಯಾವುದೇ ವಿನಾಯಿತಿ ನೀಡದೇ ದಂಡ ವಿಧಿಸಬೇಕು ಎಂದು ತಿಳಿಸಿದರು.

ADVERTISEMENT

ಬೀದರ್ ಹಾಗೂ ಬಸವಕಲ್ಯಾಣ ದಲ್ಲಿ ಕೋವಿಡ್ ತಡೆಗೆ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಬೇಕು. ಸಾಂಘಿಕ ಪ್ರಯತ್ನಗಳಿಂದ ಮಾತ್ರ ಕೋವಿಡ್ ನಿಯಂತ್ರಣ ಸಾಧ್ಯವಿದೆ ಎಂದರು.

ಜಿಲ್ಲೆಯಲ್ಲಿ ಈವರೆಗೆ 2 ಲಕ್ಷಕ್ಕೂ ಅಧಿಕ ಜನರಿಗೆ ಕೋವಿಡ್ ಲಸಿಕೆ ಕೊಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ವಿ.ಜಿ. ರೆಡ್ಡಿ ಮಾಹಿತಿ ನೀಡಿದರು. ಲಸಿಕಾರಣ ಇನ್ನೂ ಅಚ್ಚುಕಟ್ಟಾಗಿ ನಡೆಸಬೇಕು. ಕೋವಿಡ್ ಪರೀಕ್ಷೆ ಹಾಗೂ ಲಸಿಕಾರಣಕ್ಕೆ ಹೆಚ್ಚು ಒತ್ತು ಕೊಡಬೇಕು ಎಂದು ಉಸ್ತುವಾರಿ ಕಾರ್ಯದರ್ಶಿ ಸೂಚಿಸಿದರು.

ಬ್ರಿಮ್ಸ್ ಆಸ್ಪತ್ರೆ ಆಮ್ಲಜನಕ ಸಂಗ್ರಹ ಸಾಮರ್ಥ್ಯ ಈಗ 19 ಕಿಲೋ ಲೀಟರ್‌ಗೆ ಹೆಚ್ಚಿದೆ. ಬೀದರ್‌ನಲ್ಲಿ ಆಮ್ಲಜನಕ ರೀ ಫಿಲ್ಲಿಂಗ್ ಘಟಕ, ತಾಲ್ಲೂಕು ಆಸ್ಪತ್ರೆಗಳಲ್ಲಿ ಮೆಡಿಕಲ್ ಆಕ್ಸಿಜನ್ ಪ್ಲಾಂಟ್ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ತಿಳಿಸಿದರು.

ಎರಡನೇ ಅಲೆಯಲ್ಲಿ ಅತಿಹೆಚ್ಚು ಕೋವಿಡ್ ಪ್ರಕರಣಗಳು ದೃಢಪಟ್ಟ ಜಿಲ್ಲೆಗಳ ಸಾಲಿನಲ್ಲಿ ಬೀದರ್ ಕೂಡ ಇತ್ತು. ಇದೀಗ ಹಂತ ಹಂತವಾಗಿ ಕೋವಿಡ್ ಪ್ರಕರಣಗಳು ಹತೋಟಿಗೆ ಬರುತ್ತಿವೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಹೇಳಿದರು.

ಸೋಂಕಿತರಿಗೆ ತೊಂದರೆ ಆಗದಂತೆ ಕಾರ್ಖಾನೆಗಳಿಂದ ಕೂಡ ಜಂಬೋ ಸಿಲಿಂಡರ್‌ಗಳನ್ನು ಪಡೆದು ಆಮ್ಲಜನಕ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಬಸವಕಲ್ಯಾಣ ಉಪ ವಿಭಾಗಾಧಿಕಾರಿ ಭುವನೇಶ ಪಾಟೀಲ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಜಹೀರಾ ನಸೀಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್, ಬ್ರಿಮ್ಸ್ ನಿರ್ದೇಶಕ ಡಾ. ಶಿವಕುಮಾರ ಸಿ.ಎಸ್, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಎಸ್.ಎಸ್. ಮಠಪತಿ, ಡಾ. ಮಹೇಶ ಬಿರಾದಾರ, ಡಾ. ಮಹೇಶ ತೊಂಡಾರೆ, ಡಾ. ಶಿವಶಂಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.