ADVERTISEMENT

ಗಮನ ಸೆಳೆದ ಫಲಪುಷ್ಪ ಪ್ರದರ್ಶನ, ಮಣ್ಣು-ನೀರು ಸಂರಕ್ಷಣೆ ಮಾದರಿ

ಬೀದರ್ ಉತ್ಸವದಲ್ಲಿ ರೈತ ಮೇಳ

​ಪ್ರಜಾವಾಣಿ ವಾರ್ತೆ
Published 9 ಜನವರಿ 2023, 10:49 IST
Last Updated 9 ಜನವರಿ 2023, 10:49 IST
ಬೀದರ್ ಉತ್ಸವ ಅಂಗವಾಗಿ ಆಯೋಜಿಸಿದ ರೈತ ಮೇಳದಲ್ಲಿ ಗಮನ ಸೆಳೆದ ಸಿರಿಧಾನ್ಯ ರಂಗೋಲಿ
ಬೀದರ್ ಉತ್ಸವ ಅಂಗವಾಗಿ ಆಯೋಜಿಸಿದ ರೈತ ಮೇಳದಲ್ಲಿ ಗಮನ ಸೆಳೆದ ಸಿರಿಧಾನ್ಯ ರಂಗೋಲಿ   

ಬೀದರ್: ಬೀದರ್ ಉತ್ಸವ ಅಂಗವಾಗಿ ನಗರದ ಕೋಟೆ ಆವರಣದಲ್ಲಿ ಆಯೋಜಿಸಿದ್ದ ರೈತ ಮೇಳದಲ್ಲಿ ಫಲ ಪುಷ್ಪ ಪ್ರದರ್ಶನ ಸೇರಿದಂತೆ ವೈವಿಧ್ಯಮಯ ಮಾದರಿಗಳು ಗಮನ ಸೆಳೆದವು.

ತೋಟಗಾರಿಕೆ ಇಲಾಖೆಯವರು ಪ್ರದರ್ಶಿಸಿದ ಫಲ ಪುಷ್ಪ ಪ್ರದರ್ಶನ ಹೆಚ್ಚು ಗಮನ ಸೆಳೆಯಿತು. ಬಣ್ಣ ಬಣ್ಣದ ಹೂವಿನಿಂದ ತಯಾರಿಸಿದ ಬಸವಣ್ಣನ ಮಾದರಿ ಚಿತ್ರ ಬಸವ ಭಕ್ತರಿಗೆ ಆನಂದ ನೀಡಿತು. ಪಕ್ಕದಲ್ಲೇ ಈಚೆಗೆ ಲಿಂಗೈಕ್ಯರಾದ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳ ಭಾವಚಿತ್ರಕ್ಕೆ ಹೂವಿನಿಂದ ಅಲಂಕರಿಸಿದ್ದು ನೋಡುಗರ ಕಣ್ಮನ ಸೆಳೆಯಿತು. ಇಲ್ಲಿ ಭಕ್ತರು ಸೆಲ್ಫಿ ತೆಗೆದುಕೊಳ್ಳಲು ಮಗಿ ಬಿದ್ದರು. ಹೂವಿನಲ್ಲಿ ಮಕ್ಕಳ ಚಿತ್ರಗಳು, ಹಣ್ಣಿನಲ್ಲಿ ಮಹಾತ್ಮರ ಚಿತ್ರಗಳು ಕಲಾಭಿಮಾನಿಗಳಿಗೆ ಸಂತಸ ಮೂಡಿಸಿದವು.

ಗುಡ್ಡಗಾಡು ಪ್ರದೇಶದಲ್ಲಿ ನೀರು ಮತ್ತು ಮಣ್ಣು ಸಂರಕ್ಷಣೆ ಕುರಿತ ಜಲಾನಯನ ಮಾದರಿ ರೈತರನ್ನು ಆಕರ್ಷಿಸಿತು. ಅರಣ್ಯ ಇಲಾಖೆಯವರು ತಯಾರಿಸಿದ ಮಾದರಿ ಅರಣ್ಯದಲ್ಲಿನ ಹುಲಿ, ಚಿರತೆ, ನವಿಲಿನ ಮಾದರಿಗಳು ಪರಿಸರ ಪ್ರೇಮಿಗಳು ಸಂತಸ ಪಡುವಂತಾಯಿತು.

ADVERTISEMENT

ಜಹಿರಾಬಾದ್ ಡೆಕ್ಕನ್ ಡೆವಲಪ್‍ಮೆಂಟ್ ಸೂಸೈಟಿಯವರ ಸಿರಿಧಾನ್ಯ ಮಳಿಗೆ ಹೆಚ್ಚಿನ ಜನ ಮೆಚ್ಚುವಂತಾಯಿತು. ಸಿರಿಧಾನ್ಯದಿಂದ ತಯಾರಿಸಿದ ಸಿಹಿ ಪದಾರ್ಥ ಹಾಗೂ ಇತರೆ ಆಹಾರ ಪದಾರ್ಥ ಜನ ಖರೀದಿ ಮಾಡಿದರು.

ಎಸ್‍ಬಿಐ ಬ್ಯಾಂಕಿನಿಂದ ರೈತರಿಗೆ ಸಾಲ ಸೌಲಭ್ಯದ ಮಾಹಿತಿ, ಮಣ್ಣು ಪರೀಕ್ಷೆ, ಕೃಷಿ ಯಂತ್ರೋಪಕರಣ ಬಳಕೆ, ಹನಿ ನೀರಾವರಿ, ತುಂತುರು ನೀರಾವರಿ, ರಸಗೊಬ್ಬರ ಮಳಿಗೆ ಸೇರಿದಂತೆ ರೈತ ಮೇಳದಲ್ಲಿ 40ಕ್ಕೂ ಹೆಚ್ಚು ಮಳಿಗೆಗಳಿದ್ದವು.

ಶನಿವಾರ ಬೆಳಿಗ್ಗೆ ಶಾಸಕ ಈಶ್ವರ ಖಂಡ್ರೆ ರೈತ ಮೇಳ ಉದ್ಘಾಟಿಸಿದರು. ರಾಜೇಶ್ವರ ಶಿವಾಚಾರ್ಯರು ಸಾನಿಧ್ಯ ವಹಿಸಿದರು. ಶಾಸಕ ರಹೀಂಖಾನ್ ಅಧ್ಯಕ್ಷತೆ ವಹಿಸಿದರು. ಕೃಷಿ ಜಂಟಿ ನಿರ್ದೇಶಕ ರತೇಂದ್ರನಾಥ ಸೂಗೂರ, ಸಹಾಯಕ ಕೃಷಿ ನಿರ್ದೇಶಕ ಎಂಎಕೆ ಅನ್ಸಾರಿ ಸೇರಿದಂತೆ ವಿವಿಧ ತಾಲ್ಲೂಕಿನ ಕೃಷಿ ಅಧಿಕಾರಿಗಳು ಮೇಳದ ಉಸ್ತುವಾರಿ ನೋಡಿಕೊಂಡರು.

ಮೇಳದಲ್ಲಿ ಕೃಷಿ ಬೇಸಾಯ, ಸಾವಯವ ಕೃಷಿ, ತೋಟಗಾರಿಕೆ ಕ್ಷೇತ್ರದಲ್ಲಿನ ಅವಕಾಶಗಳ ಕುರಿತು ರೈತರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಧಾರವಾಡ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ. ಎಸ್.ಎ. ಪಾಟೀಲ, ಹೈದರಾಬಾದ್ ಕೃಷಿ ವಿಜ್ಞಾನಿ ಡಾ. ಸಂಗಪ್ಪ ಸಂವಾದದಲ್ಲಿ ಪಾಲ್ಗೊಂಡು ರೈತರ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು. ಎರಡು ದಿನದಲ್ಲಿ ಸುಮಾರು ಒಂದು ಲಕ್ಷ ರೈತರು ಮೇಳದ ಪ್ರಯೋಜನ ಪಡೆದರು ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.