ADVERTISEMENT

ಸುಳ್ಳು ಜಾತಿ ಪ್ರಮಾಣಪತ್ರ: ಮೂವರು ನೌಕರರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 13 ಜನವರಿ 2022, 13:53 IST
Last Updated 13 ಜನವರಿ 2022, 13:53 IST

ಬೀದರ್: ಸುಳ್ಳು ಜಾತಿ ಪ್ರಮಾಣಪತ್ರ ನೀಡಿ ಸರ್ಕಾರಿ ನೌಕರಿಗೆ ಸೇರಿದ ಮೂವರ ವಿರುದ್ಧ ನಾಗರಿಕ ಹಕ್ಕು ನಿರ್ದೇಶನಾಲಯ ಇಲ್ಲಿಯ ಮಾರ್ಕೆಟ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.

ಕುರುಬ ಜಾತಿಗೆ ಸೇರಿದ್ದರೂ ಅಂಚೆ ಇಲಾಖೆಯ ಶರಣಪ್ಪ ಸೈಬಣ್ಣ ಪಾಟೀಲ, ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ನಿರ್ವಾಹಕ ವೈಜಿನಾಥ ಶಂಕ್ರಪ್ಪ ಹಾಗೂ ನ್ಯಾಯಾಂಗ ಇಲಾಖೆಯ ವಾಣಿಶ್ರೀ ಕಾಶೀನಾಥ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇವರು ಸುಳ್ಳು ಗೊಂಡ ಜಾತಿ ಪ್ರಮಾಣಪತ್ರ ಪಡೆದು ಪರಿಶಿಷ್ಟ ಪಂಗಡಕ್ಕೆ ಮೀಸಲಿದ್ದ ಹುದ್ದೆಗಳಿಗೆ ನೇಮಕವಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಕುರುಬ ಜಾತಿಯ ನೌಬಾದ್‌ನ ಶರಣಪ್ಪ ಸೈಬಣ್ಣ ಪಾಟೀಲ ಅವರು ಪರಿಶಿಷ್ಟ ಪಂಗಡದ ಮೀಸಲಾತಿ ಅಡಿಯಲ್ಲಿ ಅಂಚೆ ಇಲಾಖೆಯಲ್ಲಿ 2017ರ ಡಿಸೆಂಬರ್ 26ರಂದು ಅಂಚೆ ಸಹಾಯಕ ಹುದ್ದೆಗೆ ನೇಮಕಗೊಂಡಿದ್ದಾರೆ. ಗೊಂಡ ಜಾತಿಯ ಸುಳ್ಳು ಪ್ರಮಾಣಪತ್ರ ನೀಡಿ ಮೋಸ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ADVERTISEMENT

ಬೆಂಗಳೂರಿನ ಎಡಿಜಿಪಿ ಅವರು ಅಂತಿಮ ಅಭಿಪ್ರಾಯ ಪಡೆಯಲು ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗೆ ಪತ್ರ ಬರೆದಿದ್ದಾರೆ. ಸಮಿತಿಯು 2017ರ ಡಿಸೆಂಬರ್ 26ರಂದು ಜಾತಿ ಪ್ರಮಾಣಪತ್ರವನ್ನು ಅಸಿಂಧುಗೊಳಿಸಿದೆ. ಹೀಗಾಗಿ ತಹಶೀಲ್ದಾರರು ಜಾತಿ ಪ್ರಮಾಣಪತ್ರ ರದ್ದುಪಡಿಸಿದ್ದಾರೆ.

ನ್ಯಾಯಾಂಗ ಇಲಾಖೆಯಲ್ಲಿ ಗ್ರುಪ್‌ ಡಿ ನೌಕರ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೀದರ್‌ ತಾಲ್ಲೂಕಿನ ಗೋರನಳ್ಳಿಯ ವಾಣಿಶ್ರೀ ಕಾಶೀನಾಥ ಅವರ ಜಾತಿ ಪ್ರಮಾಣಪತ್ರವನ್ನು ಜಾತಿ ಪರಿಶೀಲನಾ ಸಮಿತಿಯು 2020ರ ನವೆಂಬರ್ 9 ರಂದು ಅಮಾನ್ಯಗೊಳಿಸಿದೆ. ಕಾರಣ ತಹಶೀಲ್ದಾರರು ಜಾತಿ ಪ್ರಮಾಣಪತ್ರ ರದ್ದು ಮಾಡಿದ್ದಾರೆ.

ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಬಸ್‌ ನಿರ್ವಾಹಕ ಬೀದರ್‌ ತಾಲ್ಲೂಕಿನ ಸಂಗೋಳಗಿ ಗ್ರಾಮದ ವೈಜಿನಾಥ ಶಂಕ್ರಪ್ಪ ಅವರ ಜಾತಿ ಪ್ರಮಾಣಪತ್ರವನ್ನು 2021ರ ನವೆಂಬರ್ 26ರಂದು ಜಾತಿ ಪ್ರಮಾಣಪತ್ರ ಪರಿಶೀಲನಾ ಸಮಿತಿ ಅಸಿಂಧುಗೊಳಿಸಿದೆ.

ಮೈಲೂರಿನ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತ ಪ್ರಕಾಶ ಬಾಳಪ್ಪ ಬೆಂಗಳೂರಿನ ನಾಗರಿಹಕ್ಕು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದರು. ಸ್ಥಳೀಯವಾಗಿ ವಿಚಾರಣೆ ನಡೆಸಿದಾಗ ಮೂವರೂ ಗೊಂಡ ಜಾತಿಗೆ ಸೇರಿಲ್ಲ ಕುರುಬ ಜಾತಿಗೆ ಸೇರಿರುವುದು ಕಂಡು ಬಂದಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ನಿಯಮಾವಳಿ ಪಾಲಿಸದೆ ಜಾತಿ ಪ್ರಮಾಣಪತ್ರ ನೀಡಿದ ಅಂದಿನ ತಹಶೀಲ್ದಾರ್, ಕಂದಾಯ ಅಧಿಕಾರಿ, ಗ್ರಾಮ ಲೆಕ್ಕಾಧಿಕಾರಿ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಮಾರ್ಕೆಟ್‌ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಸಿಆರ್‌ಸಿ ಇನ್‌ಸ್ಪೆಕ್ಟರ್‌ಗೆ ಒಪ್ಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.