ADVERTISEMENT

ಕಬ್ಬು ಹಣ ಪಾವತಿಗೆ ರೈತ ಸಂಘ ಗಡುವು

​ಪ್ರಜಾವಾಣಿ ವಾರ್ತೆ
Published 24 ಮೇ 2022, 14:37 IST
Last Updated 24 ಮೇ 2022, 14:37 IST
ಬೀದರ್‌ನ ಗಾಂಧಿಗಂಜ್‍ನ ರೈತ ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಸಭೆ ನಡೆಯಿತು
ಬೀದರ್‌ನ ಗಾಂಧಿಗಂಜ್‍ನ ರೈತ ಭವನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಸಭೆ ನಡೆಯಿತು   


ಬೀದರ್: ಪ್ರತಿ ಟನ್‍ಗೆ ₹2,200 ರಂತೆ ಕಬ್ಬು ಪೂರೈಸಿದ ರೈತರಿಗೆ ಬಿಲ್ ಪಾವತಿಗೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕವು ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಜೂನ್ 10 ರ ಗಡುವು ನೀಡಿದೆ.


ನಿಗದಿತ ಅವಧಿಯೊಳಗೆ ಕಾರ್ಖಾನೆಗಳು ಕಬ್ಬು ಹಣ ಸಂದಾಯ ಮಾಡದಿದ್ದಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಬೀಗ ಜಡಿದು ಹೋರಾಟ ನಡೆಸಲಾಗುವುದು ಎಂದು ನಗರದ ಗಾಂಧಿಗಂಜ್‍ನ ರೈತ ಭವನದಲ್ಲಿ ನಡೆದ ಸಂಘದ ಜಿಲ್ಲಾ ಘಟಕದ ಸಭೆಯು ಪ್ರಕಟಿಸಿತು.


ಭಾಲ್ಕೇಶ್ವರ ಸಕ್ಕರೆ ಕಾರ್ಖಾನೆ ಕಬ್ಬು ಸಾಗಿಸಿದ ರೈತರ ₹ 54 ಕೋಟಿ, ಬಿ.ಕೆ.ಎಸ್.ಕೆ ₹ 24 ಕೋಟಿ ಹಾಗೂ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ ₹ 10 ಕೋಟಿ ಸೇರಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಒಟ್ಟು ₹ 88 ಕೋಟಿ ಬಾಕಿ ಉಳಿಸಿಕೊಂಡಿವೆ ಎಂದು ಸಂಘದ ಪದಾಧಿಕಾರಿಗಳು ಹೇಳಿದರು.

ADVERTISEMENT


ಎಲ್ಲ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್‍ಗೆ 1 ಕೆ.ಜಿ. ಸಕ್ಕರೆ ಕೊಡಬೇಕು. ಮಹಾತ್ಮ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ ಈ ಹಿಂದೆ ಒಪ್ಪಿಕೊಂಡಂತೆ ಕಬ್ಬು ಸರಬರಾಜು ಮಾಡದ ಷೇರುದಾರ ಸದಸ್ಯರಿಗೆ ಕೂಡಲೇ ತಲಾ 5 ಕೆ.ಜಿ. ಸಕ್ಕರೆ ನೀಡಬೇಕು ಎಂದು ಒತ್ತಾಯಿಸಿದರು.


ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ, ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ, ಪ್ರಮುಖರಾದ ಶಂಕರೆಪ್ಪ ಪಾರಾ, ಚಂದ್ರಶೇಖರ ಜಮಖಂಡಿ, ಬಾಬುರಾವ್ ಜೋಳದಾಪಕಾ, ಪ್ರವೀಣ್ ಕುಲಕರ್ಣಿ, ಮೋಹನರಾವ್ ಹೊರಂಡಿ, ನಾಗಯ್ಯ ಸ್ವಾಮಿ, ಬಸಪ್ಪ, ಮಲ್ಲರೆಡ್ಡಿ, ಧೂಳಪ್ಪ, ಬಸವಂತ ಡೊಂಗರಗಾಂವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.