ಬಸವಕಲ್ಯಾಣ: ‘ಚಿಕ್ಕ ಮಗುವಿಗೆ ಹಾಲಿನ ಬದಲಾಗಿ ಚಪಾತಿ ಅಥವಾ ರೊಟ್ಟಿ ಉಣಿಸಿದರೆ ಜೀರ್ಣ ಆಗುತ್ತದೆಯೇ, ಹಾಗೆಯೇ ಯಾವುದೇ ಬೆಳೆ ಸಸಿ ಇದ್ದಾಗ ಅದಕ್ಕೆ ಹೆಚ್ಚಿನ ಪೋಷಕಾಂಶ ನೀಡುವುದು ವ್ಯರ್ಥ' ಎಂದು ತಾಲ್ಲೂಕಿನ ಇಸ್ಲಾಂಪುರದ ಕೃಷಿಕ ವೆಂಕಟರೆಡ್ಡಿ ಮಾತು ಆರಂಭಿಸುತ್ತಾರೆ. ಪಪ್ಪಾಯಿ ಬೆಳೆದು ಲಾಭ ಗಳಿಸಿರುವ ಅವರು ಮಾದರಿ ರೈತನಾಗಿ ಹೊರಹೊಮ್ಮಿದ್ದಾರೆ.
‘ಇವರಿಗೆ 42 ಎಕರೆ ಜಮೀನಿದೆ. ಚಿಕ್ಕಂದಿನಿಂದಲೂ ತಂದೆ ವಿಠಲರೆಡ್ಡಿ ಅವರೊಂದಿಗೆ ಕೃಷಿ ಕಾರ್ಯದಲ್ಲಿ ಕೈಜೋಡಿಸುತ್ತ ಬಿ.ಎ ಪದವಿ ಪಡೆದರು. ನಂತರ ಪೂರ್ಣ ಪ್ರಮಾಣದಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡರು. ಇವರ ವಯಸ್ಸು 36 ಆಗಿದ್ದರೂ ಕೃಷಿ ವಿಚಾರದಲ್ಲಿ ಅನುಭವಿಯಾಗಿದ್ದಾರೆ.
ಇವರು ಬರೀ ಎರಡು ಎಕರೆಯಲ್ಲಿ ಬೆಳೆದ ಪಪ್ಪಾಯಿಗೆ ₹16 ಲಕ್ಷ ಲಾಭ ಬಂದಿದೆ. ರಾಸಾಯನಿಕಗಳ ಉಪಯೋಗಕ್ಕಿಂತ ತಿಪ್ಪೆಗೊಬ್ಬರ ಯಥೇಚ್ಛ ಬಳಸಿ, ಕೀಟನಾಶಕವಾಗಿ ಗೋಮೂತ್ರ ಸಿಂಪಡಿಸಿದ್ದಾರೆ.
6 ಅಡಿ ಅಂತರದಲ್ಲಿ ಒಂದರಂತೆ ಎಕರೆಗೆ 900 ಪಪ್ಪಾಯಿ ಗಿಡಗಳನ್ನು ನೆಟ್ಟಿದ್ದಾರೆ. 7 ತಿಂಗಳಲ್ಲಿಯೇ ಹಣ್ಣು ಕಾಣಲಾರಂಭಿಸಿದವು. ಪ್ರತಿ ಗಿಡಕ್ಕೆ 40-70 ಹಣ್ಣು ದೊರೆತಿವೆ. ಪ್ರತಿಯೊಂದು 1.5 ಕೆಜಿಯಿಂದ 4 ಕೆಜಿವರೆಗೆ ತೂಗಿವೆ. ಕೆಜಿಗೆ ₹12 ರಿಂದ ₹27ರವರೆಗೆ ಬೆಲೆ ದೊರೆತಿದೆ. ಇಷ್ಟೊಂದು ಇಳುವರಿ ದೊರೆತ ನಂತರವೂ ಗಿಡಗಳಿಗೆ ಇನ್ನೂ ಹಣ್ಣು ಇವೆ. ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳು, ಕೃಷಿಕರು ಮತ್ತು ಹಣ್ಣಿನ ವ್ಯಾಪಾರಿಗಳು ಇವರ ಹೊಲಕ್ಕೆ ಭೇಟಿ ನೀಡಿ ಇವರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.
‘ಸಸಿಗಳಿದ್ದಾಗ ಅವಕ್ಕೆ ಎಷ್ಟು ಬೇಕೋ ಅಷ್ಟೇ ಪೋಷಕಾಂಶ ನೀಡಿದ್ದೇನೆ. ಅವುಗಳಿಗೆ ರೋಗ ಕಾಡದಂತೆ ಕಾಳಜಿ ವಹಿಸಿದ್ದೇನೆ. ನೆಲದಲ್ಲಿನ ಹಸಿ ಆರದಂತೆ ನೀರು ಬಿಟ್ಟಿದ್ದೇನೆ. ಯಾವುದೇ ಒಂದು ಗಿಡಕ್ಕೆ ಏನೋ ಆಗಿದೆ ಎಂದು ಅನಿಸಿದ ತಕ್ಷಣ ಅಗತ್ಯ ಕ್ರಮ ಕೈಗೊಂಡು ಮತ್ತೊಂದಕ್ಕೆ ರೋಗ ಹರಡುವುದನ್ನು ತಡೆದಿದ್ದೇನೆ' ಎಂದು ವೆಂಕಟರೆಡ್ಡಿ ಹೇಳುತ್ತಾರೆ.
ಬಸವಕಲ್ಯಾಣ ತಾಲ್ಲೂಕಿನ ಇಸ್ಲಾಂಪುರದ ರೈತ ವೆಂಕಟರೆಡ್ಡಿ ಹೊಲದಲ್ಲಿ ಪಪ್ಪಾಯಿ ಬೆಳೆದಿರುವುದನ್ನು ತೋರಿಸುತ್ತಿರುವುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.