
ಬೀದರ್: ‘ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾದ ರೈತರಿಗೆ ಪರಿಹಾರ ವಿತರಿಸುವ ಕಾರ್ಯ ಆರಂಭಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಮಾಹಿತಿ ಹಂಚಿಕೊಂಡರು.
ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎನ್.ಡಿ.ಆರ್.ಎಫ್ ಹಾಗೂ ಎಸ್.ಡಿ.ಆರ್.ಎಫ್. ಅಡಿ ₹143.34 ಕೋಟಿಯಲ್ಲಿ ಪ್ರಥಮ ಹಂತವಾಗಿ ₹17.25 ಕೋಟಿ ಹಣವನ್ನು ಈಗಾಗಲೇ ರೈತರ ಖಾತೆಗೆ ಜಮೆ ಮಾಡುವ ಪ್ರಕ್ರಿಯೆ ಶುರುವಾಗಿದೆ. ಶುಕ್ರವಾರ ಸಂಜೆ ರೈತರ ಖಾತೆಗಳಿಗೆ ಜಮೆ ಆಗಲಿದೆ. ₹61.34 ಕೋಟಿ ಪಿಡಿ ಖಾತೆಯಲ್ಲಿದ್ದು, ಎಲ್ಲಾ ರೈತರಿಗೆ ಮೂರು ದಿನಗಳ ಒಳಗೆ ಪರಿಹಾರ ವಿತರಿಸಲಾಗುವುದು. ಆನಂತರ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಹೆಚ್ಚುವರಿ ₹8,500 ಮುಂದಿನ 15 ದಿನಗಳಲ್ಲಿ ರೈತರ ಖಾತೆಗೆ ಜಮೆ ಮಾಡಲಾಗುವುದು. ಒಟ್ಟು ₹300 ಕೋಟಿ ಪರಿಹಾರ ರೈತರಿಗೆ ಸಿಗಲಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿ ಉಂಟಾಗಿದೆ. ಜೂನ್-ಜುಲೈ ತಿಂಗಳಲ್ಲಿ ಮಳೆ ಕೊರತೆಯಾಗಿತ್ತು. ಆಗಸ್ಟ್- ಸೆಪ್ಟೆಂಬರ್‌ನಲ್ಲಿ ಅಧಿಕ ಮಳೆಯಿಂದಾಗಿ ಬೆಳೆ, ಆಸ್ತಿ ಹಾಗೂ ಮೂಲಭೂತ ಸೌಕರ್ಯಕ್ಕೆ ಹಾನಿ ಉಂಟಾಗಿದೆ. ಜಿಲ್ಲೆಯಲ್ಲಿ 4.32 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿತ್ತು. ಈ ಪೈಕಿ 1,67,202.78 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ ಎಂಬುದು ಪ್ರಾಥಮಿಕ ಸಮೀಕ್ಷೆಯಿಂದ ಗೊತ್ತಾಗಿದೆ. ಪರಿಹಾರ ತಂತ್ರಾಂಶಶದಲ್ಲಿ 1,68,653.94 ಹೆಕ್ಟೇರ್ ಪ್ರದೇಶ ಬೆಳೆ ಹಾನಿ ದಾಖಲಿಸಲಾಗಿದೆ ಎಂದು ವಿವರಿಸಿದರು.
ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಮೂರು ಜೀವ ಹಾನಿಯಾಗಿದ್ದು ₹15 ಲಕ್ಷ ಪರಿಹಾರ ವಿತರಿಸಲಾಗಿದೆ. ಜಾನುವಾರುಗಳ ಸಾವು, ಮನೆ ಹಾನಿಗೆ ಪರಿಹಾರ ಕೊಡಲಾಗಿದೆ. ಜೆಸ್ಕಾಂ, ಸಣ್ಣ ನೀರಾವರಿ, ಅಂಗನವಾಡಿ ಕೇಂದ್ರ, 50 ಕಿ.ಮೀ ಜಿಲ್ಲಾ ಮುಖ್ಯರಸ್ತೆ, 64 ಕಿ.ಮೀ ನಗರದ ಪ್ರದೇಶದ ರಸ್ತೆ, 424 ಶಾಲಾ ಕೊಠಡಿಗಳು ಸೇರಿದಂತೆ ಒಟ್ಟು ₹169.51 ಕೋಟಿ ಪರಿಹಾರ ನೀಡಲಾಗಿದೆ. ಜಿಲ್ಲೆಯಲ್ಲಿ ₹672 ಕೋಟಿ ಮೊತ್ತದ ಆಸ್ತಿ ಹಾನಿಯಾಗಿದೆ. ಆದರೆ, ಇಡೀ ರಾಜ್ಯದಲ್ಲಿಯೇ ತ್ವರಿತ ಗತಿಯಲ್ಲಿ ಮುಂಚಿತವಾಗಿ ಪರಿಹಾರ ವಿತರಿಸುತ್ತಿರುವುದು ಬೀದರ್ ಜಿಲ್ಲೆಯಲ್ಲಿ ಎಂದು ತಿಳಿಸಿದರು.
ಬೀದರ್ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಒಟ್ಟು 1,22,061 ಹೆಕ್ಟೇರ್ ಪ್ರದೇಶ ಬೆಳೆ ವಿಮೆಯಡಿ ನೋಂದಣಿ ಮಾಡಿಸಲಾಗಿದೆ. ಸಮೀಕ್ಷೆ ಪ್ರಗತಿಯಲ್ಲಿದ್ದು, ನವೆಂಬರ್ 15ರ ನಂತರ ಪೂರ್ಣ ಚಿತ್ರಣ ಸಿಗಲಿದೆ ಎಂದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಗಿರೀಶ ಬದೋಲೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಷ್ ರೆಡ್ಡಿ ಹಾಜರಿದ್ದರು.
ಕ್ಯಾಥ್‌ಲ್ಯಾಬ್ ಜಯದೇವ ವ್ಯಾಪ್ತಿಗೆ
‘ಬೀದರ್‌ನ ಬ್ರಿಮ್ಸ್‌ನಲ್ಲಿ ಈಗಾಗಲೇ ಕ್ಯಾಥ್‌ಲ್ಯಾಬ್ ಸಿದ್ಧಗೊಂಡಿದೆ. ನರ್ಸಿಂಗ್ ಸ್ಟಾಫ್ ಬಂದಿದ್ದಾರೆ. ಆದರೆ ಕಾರ್ಡಿಯೊಲಜಿಸ್ಟ್ ಹಾಗೂ ತಂತ್ರಜ್ಞರು ಬಂದಿಲ್ಲ. ಅನೇಕ ಸಲ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದರೂ ಯಾರೂ ಆಸಕ್ತಿ ತೋರಿಲ್ಲ. ಆದಕಾರಣ ಕಲಬುರಗಿಯ ಜಯದೇವ ಹೃದ್ರೋಗ ಸಂಸ್ಥೆಯ ವ್ಯಾಪ್ತಿಗೆ ಕ್ಯಾಥ್‌ಲ್ಯಾಬ್ ತೆಗೆದುಕೊಳ್ಳಬೇಕು. ಅಲ್ಲಿನ ಇಬ್ಬರು ತಜ್ಞ ವೈದ್ಯರನ್ನು ಇಲ್ಲಿಗೆ ನಿಯೋಜಿಸಬೇಕು. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಆದಷ್ಟು ಶೀಘ್ರ ಈ ಕೆಲಸ ಆಗುವಂತೆ ಮಾಡಲಾಗುವುದು’ ಎಂದು ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
ಗುಣಮಟ್ಟದ ಸಮಸ್ಯೆ; ಸಿಎಂ ಜೊತೆ ಚರ್ಚೆ
‘ಜಿಲ್ಲೆಯಲ್ಲಿ ಈಗಾಗಲೇ ಸೋಯಾ ಉದ್ದು ಖರೀದಿ ಕೇಂದ್ರಗಳನ್ನು ತೆರೆದು ಖರೀದಿಸಲಾಗುತ್ತಿದೆ. ಆದರೆ ಸೋಯಾ ಎಫ್‌ಎಕ್ಯೂ ಗುಣಮಟ್ಟದಿಂದ ಕೂಡಿರಬೇಕು. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್ ಸೋಯಾ ₹5328ಕ್ಕೆ ಖರೀದಿಸಲಾಗುತ್ತದೆ. ಆದರೆ ಈ ಸಲ ಅಧಿಕ ತೇವಾಂಶದಿಂದ ಗುಣಮಟ್ಟದ ಸಮಸ್ಯೆ ಇದೆ. ಇದರಿಂದ ರೈತರಿಗೆ ತೊಂದರೆ ಉಂಟಾಗುತ್ತಿದ್ದು ಈ ಕುರಿತು ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರ ಜೊತೆ ಚರ್ಚಿಸುತ್ತೇನೆ’ ಎಂದು ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು. ಲೀಜ್ ಮೇಲೆ ಹೊಲ ಕೊಟ್ಟವರು ಹಾಗೂ ಪಡೆದವರು ಪರಸ್ಪರ ಮಾತಾಡಿಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.