ಸಾಂಕೇತಿಕ ಚಿತ್ರ
ಬೀದರ್: ಜಿಲ್ಲೆಯಾದ್ಯಂತ ರೈತರ ಆತ್ಮಹತ್ಯೆ ಪ್ರಕರಣಗಳು ಸತತ ವರದಿಯಾಗುತ್ತಲೇ ಇವೆ.
ಸದ್ಯ ಸರಣಿ ಸಾವಿನ ಪ್ರಕರಣಗಳು ನಿಲ್ಲುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ವಿವಿಧ ಕಾರಣಗಳಿಂದ ಒಂದಾದ ನಂತರ ಒಂದು ಕಡೆ ಅನ್ನದಾತ ಜೀವ ತ್ಯಜಿಸುತ್ತಿರುವ ಘಟನೆಗಳು ನಡೆಯುತ್ತಿದ್ದು, ಇದು ಇಡೀ ರೈತ ಸಮುದಾಯದಲ್ಲಿ ನಕಾರಾತ್ಮಕವಾದ ಭಾವನೆ ಮೂಡಿಸಿದೆ.
ತೊಗರಿ ಬೆಳೆ ಹಾಳಾಗಿದ್ದರಿಂದ ಅದಕ್ಕೆ ಬೇಸತ್ತು ಚಿಟಗುಪ್ಪ ತಾಲ್ಲೂಕಿನ ರಾಂಪುರ ಗ್ರಾಮದ ರೈತ ಗಣೇಶ (25) ಎಂಬುವರು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ₹5 ಲಕ್ಷ ಸಾಲ ಪಡೆದು ಬೆಳೆ ಬೆಳೆದಿದ್ದರು. ಸಾಲ ಹೇಗೆ ತೀರಿಸಬೇಕೆಂಬ ಚಿಂತೆಯಲ್ಲಿ ಪ್ರಾಣ ಬಿಟ್ಟಿದ್ದಾರೆ.
ಜ. 28ರಂದು ಒಂದೇ ದಿನ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಸುವ ಮುನ್ನವೇ ಈ ಪ್ರಕರಣ ನಡೆದಿದೆ. ಭಾಲ್ಕಿ ತಾಲ್ಲೂಕಿನ ಖಾನಾಪೂರದ ಯುವ ರೈತ ಕಾರ್ತಿಕ್ (21) ಹಾಗೂ ಬಸವಕಲ್ಯಾಣ ತಾಲ್ಲೂಕಿನ ಇಲ್ಲಾಳ ಗ್ರಾಮದ ರೈತ ಜಗದೀಶ ರೆಡ್ಡಿ (49) ಜೀವ ತ್ಯಜಿಸಿದ್ದರು. ಕಾರ್ತಿಕ್ ಅವರು ಖಾನಾಪೂರದ ಅರಣ್ಯ ಪ್ರದೇಶದಲ್ಲಿ ಮರಕ್ಕೆ ನೇಣು ಹಾಕಿಕೊಂಡು ಜೀವ ತೊರೆದಿದ್ದರು. ಜಮೀನು ಗುತ್ತಿಗೆ ಪಡೆದು ಬೇಸಾಯಕ್ಕಾಗಿ ಖಾಸಗಿ ಹಾಗೂ ಬ್ಯಾಂಕಿನಿಂದ ಒಟ್ಟು ₹4 ಲಕ್ಷ ಸಾಲ ಮಾಡಿಕೊಂಡಿದ್ದರು. ಇನ್ನು, ಜಗದೀಶ ರೆಡ್ಡಿ ಅವರು ಬಾವಿಗೆ ಹಾರಿ ಜೀವ ಬಿಟ್ಟಿದ್ದರು. ಬ್ಯಾಂಕಿನಲ್ಲಿ ₹1.25 ಲಕ್ಷ ಹಾಗೂ ಕೈಸಾಲ ಮಾಡಿಕೊಂಡಿದ್ದರು. ರೇಷ್ಮೆ ಕೃಷಿಯಲ್ಲಿ ನಷ್ಟ ಉಂಟಾಗಿದ್ದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದರು. ಈ ಘಟನೆಗೂ ಎರಡು ದಿನಗಳ ಮುಂಚೆ ಹುಲಸೂರ ತಾಲ್ಲೂಕಿನ ಗಡಿಗೌಡಗಾಂವ್ ಗ್ರಾಮದಲ್ಲಿ ರೇಷ್ಮಾ ಸುನೀಲ್ ಸೂರ್ಯವಂಶಿ ಎಂಬ ರೈತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಆರು ಸ್ವಸಹಾಯ ಸಂಘಗಳಲ್ಲಿ ₹3 ಲಕ್ಷ ಸಾಲ ಮಾಡಿದ್ದರು.
ಈ ವರ್ಷ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಉತ್ತಮ ಮಳೆಯಾಗಿ, ಬೆಳೆ ಕೂಡ ಬೆಳೆದಿದೆ. ಆದರೆ, ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ತೋಟಗಾರಿಕೆ ಬೆಳೆಯೂ ಇದಕ್ಕೆ ಹೊರತಾಗಿಲ್ಲ. ಹಿಂದಿನ ವರ್ಷ ಬರದಿಂದ ಜಿಲ್ಲೆಯ ರೈತರು ಸಂಕಷ್ಟ ಅನುಭವಿಸಿದ್ದರು. ಅತಿವೃಷ್ಟಿ, ಅನಾವೃಷ್ಟಿ, ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದಿರುವ ಕಾರಣ ರೈತರ ಬದುಕು ಮೂರಾಬಟ್ಟೆಯಾಗಿದೆ.
2024–25ನೇ ಸಾಲಿನಲ್ಲಿ ಡಿಸೆಂಬರ್ ಅಂತ್ಯಕ್ಕೆ 15 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರದ ಅಧಿಕೃತ ದಾಖಲೆಗಳೇ ಈ ವಿಷಯವನ್ನು ಹೇಳುತ್ತವೆ. ಜನವರಿ ಮತ್ತು ಫೆಬ್ರುವರಿ ಆರಂಭದಲ್ಲಿ ಜರುಗಿದ ಆತ್ಮಹತ್ಯೆ ಪ್ರಕರಣಗಳನ್ನು ತೆಗೆದುಕೊಂಡರೆ 20ರ ಗಡಿ ದಾಟುತ್ತದೆ.
ಇವೆಲ್ಲ ಅಧಿಕೃತವಾಗಿ ದಾಖಲಾದ ಪ್ರಕರಣಗಳು. ಎಷ್ಟೋ ಪ್ರಕರಣಗಳು ಸರಿಯಾಗಿ ದಾಖಲಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ಆನ್‌ಲೈನ್ ಗೇಮ್ಸ್, ಐಪಿಎಲ್ ಬೆಟ್ಟಿಂಗ್, ಆನ್‌ಲೈನ್ ರಮ್ಮಿ ಸೇರಿದಂತೆ ಇತರೆ ಕಾರಣಗಳಿಂದಲೂ ಯುವ ರೈತರು ಸಾವನ್ನಪ್ಪುತ್ತಿದ್ದಾರೆ. ಕುಟುಂಬದ ಗೌರವ ಹೋಗದಿರಲೆಂದು ಇದರ ಬಗ್ಗೆ ಯಾರು ಚಕಾರ ಎತ್ತುತ್ತಿಲ್ಲ.
203–24ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 75 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಾಲಿನಲ್ಲಿ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು ಎನ್ನುವುದು ಗಮನಾರ್ಹ. ಇನ್ನು, 2022–23ನೇ ಸಾಲಿನಲ್ಲಿ 52 ಜನ ಜೀವ ಕೊಟ್ಟಿದ್ದರು.
ಜಿಲ್ಲೆಯಲ್ಲಿ ಇಂತಹುದೇ ತಾಲ್ಲೂಕು ಅಂತಿಲ್ಲ. ಭಾಲ್ಕಿ, ಹುಮನಾಬಾದ್, ಔರಾದ್, ಹುಲಸೂರ, ಬಸವಕಲ್ಯಾಣ, ಚಿಟಗುಪ್ಪ, ಬೀದರ್, ಕಮಲನಗರ ತಾಲ್ಲೂಕುಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಲೇ ಇವೆ.
ರೈತರು ಬೆಳೆದ ಎಲ್ಲ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಕೊಡಬೇಕು. ಮಾರುಕಟ್ಟೆಯಲ್ಲಿ ಬೆಲೆ ಕುಸಿದಾಗ ಸರ್ಕಾರ ಖರೀದಿಸಬೇಕು. ಹೀಗಾದಾಗ ಆತ್ಮಹತ್ಯೆ ತಡೆಯಬಹುದು– ಸಿದ್ರಾಮಪ್ಪ ಆಣದೂರೆ ಜಿಲ್ಲಾಧ್ಯಕ್ಷ ರೈತ ಸಂಘ
ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಕೃಷಿ ಇಲಾಖೆಯಿಂದ ₹5 ಲಕ್ಷ ಪರಿಹಾರ ನೀಡಲಾಗುತ್ತದೆ. ಇತರೆ ಇಲಾಖೆಗಳಿಂದಲೂ ಪರಿಹಾರ ಒದಗಿಸಲಾಗುತ್ತದೆ– ಜಿಯಾವುಲ್ಲಾ ಖಾನ್ ಜಂಟಿ ಕೃಷಿ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.