ADVERTISEMENT

ಖಟಕಚಿಂಚೋಳಿ: ರೈತಸ್ನೇಹಿ ಸೈಕಲ್ ಎಡೆಕುಂಟೆ

ಬೇಡಿಕೆ ಹೆಚ್ಚಳದಿಂದ ಕಮ್ಮಾರರ ಬದುಕಿಗೂ ಆಸರೆಯಾದ ಕೃಷಿ ಸಾಧನ

​ಪ್ರಜಾವಾಣಿ ವಾರ್ತೆ
Published 11 ಜುಲೈ 2021, 6:05 IST
Last Updated 11 ಜುಲೈ 2021, 6:05 IST
ಖಟಕಚಿಂಚೋಳಿ ಹೋಬಳಿಯಲ್ಲಿ ಕಮ್ಮಾರರು ಸಿದ್ಧಪಡಿಸಿದ ವಿವಿಧ ಬಗೆಯ ಸೈಕಲ್ ಎಡೆಕುಂಟೆ ಮಾರಾಟಕ್ಕೆ ಇಡಲಾಗಿದೆ
ಖಟಕಚಿಂಚೋಳಿ ಹೋಬಳಿಯಲ್ಲಿ ಕಮ್ಮಾರರು ಸಿದ್ಧಪಡಿಸಿದ ವಿವಿಧ ಬಗೆಯ ಸೈಕಲ್ ಎಡೆಕುಂಟೆ ಮಾರಾಟಕ್ಕೆ ಇಡಲಾಗಿದೆ   

ಖಟಕಚಿಂಚೋಳಿ: ತಂತ್ರಜ್ಞಾನದ ಯುಗದಲ್ಲಿ ಎಲ್ಲವೂ ಯಾಂತ್ರಿಕರಣ ವಾಗಿದೆ. ಬದಲಾಗುತ್ತಿರುವ ಸನ್ನಿವೇಶಕ್ಕೆ ಅನುಗುಣವಾಗಿ ಗ್ರಾಮದಲ್ಲಿ ಬೀಡು ಬಿಟ್ಟಿರುವ ಕಮ್ಮಾರರು ಕೂಡ ರೈತಸ್ನೇಹಿ ಸೈಕಲ್ ಎಡೆಕುಂಟೆ ಸಿದ್ಧಪಡಿಸುತ್ತಿದ್ದಾರೆ. ಇವುಗಳಿಗೆ ಬೇಡಿಕೆ ಹೆಚ್ಚಳದಿಂದಾಗಿ ಉತ್ತಮ ಲಾಭ ಪಡೆದುಕೊಳ್ಳುತ್ತಿದ್ದಾರೆ.

‘ಈ ಹಿಂದೆ ಗುದ್ದಲಿ, ಕೊಡಲಿ ಸೇರಿದಂತೆ ಸಣ್ಣಪುಟ್ಟ ಸಾಮಗ್ರಿ ತಯಾರಿಸಿ ಪ್ರತಿದಿನ ₹250 ರಿಂದ ₹300 ಗಳಿಸುತ್ತಿದ್ದೇವು. ದುಡಿದ ಹಣ ಕುಲುಮೆಗೆ ಬಳಸುವ ಸೀಮೆಎಣ್ಣೆ ಮತ್ತಿತರ ಕಚ್ಚಾ ಸಾಮಗ್ರಿಗಳಿಗೆ ಸಾಕಾಗುತ್ತಿರಲಿಲ್ಲ. ಒಂದು ಚೀಲ ಇದ್ದಿಲಿಗೆ ₹50 ಇದೆ. ಹೀಗಾಗಿ ಲಾಭ ದೊರಕುತ್ತಿರಲಿಲ್ಲ. ಸದ್ಯ ಸೈಕಲ್ ಎಡೆ ಕುಂಟೆ ತಯಾರಿಸಿ ಮಾರಾಟ ಮಾಡು ತ್ತಿರುವುದರಿಂದ ಆದಾಯ ಚೆನ್ನಾಗಿದೆ’ ಎಂದು ಕಮ್ಮಾರ ಬನಸಿ ಹೇಳಿದರು.

‘ಮುಂಗಾರು ಹಾಗೂ ಹಿಂಗಾರು ಬೆಳೆಗಳ ಮಧ್ಯದಲ್ಲಿನ ಕಳೆ, ಕಸ ತೆಗೆಯಲು ಸೈಕಲ್ ಎಡೆಕುಂಟೆ ಅನುಕೂಲವಾಗಿದೆ. ಒಂದಕ್ಕೆ ₹800ರಿಂದ ₹1500 ಬೆಲೆ ಇದೆ. ಸೀಜನ್‌ ಇರುವುದರಿಂದ ಪ್ರತಿದಿನ 25-30 ಮಾರಾಟ ಮಾಡುತ್ತಿದ್ದೇವೆ’ ಎಂದು ಶಾಮಲಾಲ್ ತಿಳಿಸಿದರು.

ADVERTISEMENT

‘ಐದು ವರ್ಷಗಳ ಹಿಂದೆ ಕೃಷಿ ಇಲಾಖೆಯಲ್ಲಿ ಮಾತ್ರ ಈ ಸೈಕಲ್ ಎಡೆಕುಂಟೆ ನೀಡಲಾಗುತ್ತಿತ್ತು. ಇದರಿಂದ ಗ್ರಾಮೀಣ ಭಾಗದ ಬಹುತೇಕ ರೈತರಿಗೆ ಈ ಕೃಷಿ ಸಾಧನ ಸಿಗುತ್ತಿರಲಿಲ್ಲ. ಕಮ್ಮಾರರು ಇವುಗಳನ್ನು ಗ್ರಾಮೀಣ ಪ್ರದೇಶದಲ್ಲಿ ಸಿದ್ಧಪಡಿಸುತ್ತಿರುವುದರಿಂದ ಹಲವು ರೈತರಿಗೆ ಉಪಯೋಗವಾಗಿದೆ’ ಎಂದು ರೈತ ನಾಗನಾಥ ಬಿರಾದಾರ ಹೇಳಿದರು.

‘ಕೃಷಿಯಲ್ಲಿ ಬಿತ್ತನೆಯಿಂದ ಹಿಡಿದು ರಾಶಿ ಮಾಡುವವರೆಗೆ ಎಲ್ಲವೂ ಯಾಂತ್ರಿಕರಣವಾಗಿದೆ. ಕೂಲಿ ಆಳುಗಳೂ ಕೆಲಸಕ್ಕೆ ಸಿಗುತ್ತಿಲ್ಲ. ಹೀ‌‌ಗಾಗಿ ಹೊಲದಲ್ಲಿನ ಕಸ, ಕಳೆ ತೆಗೆಯಲು ರೈತರು ಪರದಾಡುವಂತಾಗಿದೆ. ಇಂತಹ ಸಂದರ್ಭದಲ್ಲಿ ಈ ಸೈಕಲ್ ಎಡೆಕುಂಟೆಯಿಂದ ಖರ್ಚು ಕಡಿಮೆಯಾಗಿ ಹೊಲ ಕೂಡ ಹಸನಾಗುತ್ತಿದೆ’ ಎಂದು ರೈತ ಧನರಾಜ ಮುತ್ತಂಗೆ ತಿಳಿಸುತ್ತಾರೆ.

‘ಹೋಬಳಿಯ ಚಳಕಾಪುರ, ನಾವದಗಿ, ದಾಡಗಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಸೈಕಲ್ ಎಡೆಕುಂಟೆ ಹೊಡೆಯುವುದು ಕಾಣಿಸುತ್ತಿದೆ. ಇದು ಸರಳ ಹಾಗೂ ಸುಲಭವಾಗಿರುವುದರಿಂದ ರೈತರಿಗೆ ತುಂಬಾ ಅನುಕೂಲ ಆಗುತ್ತಿದೆ’ ಎಂದು ಯುವ ರೈತ ಭದ್ರು ಭವರಾ ಸಂತಸದಿಂದ ಹೇಳಿದರು.

‘ಎತ್ತುಗಳನ್ನು ಬಳಸಿ ಎಡೆಕುಂಟೆ ಹೊಡೆಯಲು ಮೂರ್ನಾಲ್ಕು ಜನ ಬೇಕು. ಅಲ್ಲದೇ ಕೂಲಿಕಾರ್ಮಿಕರಿಗೂ ದಿನಗೂಲಿ ನೀಡಿ, ಬಾಡಿಗೆ ಎತ್ತುಗಳನ್ನು ಪಡೆದು ಕೃಷಿ ಎಡೆಕುಂಟೆ ಹೊಡೆಯುವುದು ಬಡ ಹಾಗೂ ಸಣ್ಣ ರೈತರಿಗೆ ಕಷ್ಟಸಾಧ್ಯವಾಗಿತ್ತು. ರೈತರ ಇಂತಹ ಕಷ್ಟಗಳಿಗೆ ಸೈಕಲ್‌ ಎಡೆಕುಂಟೆ ಪರಿಹಾರವಾಗಿದೆ’ ಎಂದು ರೈತ ಮುಖಂಡ ನಿರ್ಮಲಕಾಂತ ಪಾಟೀಲ ತಿಳಿಸುತ್ತಾರೆ.

‘ಈಚೆಗೆ ಸೈಕಲ್‌ ಎಡೆಕುಂಟೆಯನ್ನು ಖರೀದಿ ಮಾಡಿದ್ದೇನೆ. ಇದನ್ನು ಒಬ್ಬರೇ ಮುಂದೆ ದಬ್ಬಿಕೊಂಡು ಹೋಗಬಹುದು. ಬಳಸಲು ತೀರಾ ಸುಲಭವಾಗಿದೆ. ಸದ್ಯದ ದಿನಗಳಲ್ಲಿ ಕೃಷಿ ಚಟುವಟಿಕೆಯ ದುಬಾರಿ ವೆಚ್ಚದಿಂದ ಪಾರಾಗಲು ಈ ಸಾಧನ ತುಂಬಾ ನೆರವಾಗಿದೆ’ ಎಂದು ಯುವ ರೈತ ಸಂಗಮೇಶ್ವರ ಜ್ಯಾಂತೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.