
ಬಸವಕಲ್ಯಾಣ: ‘ಬೆಳೆಹಾನಿ ಪರಿಹಾರ ವಿತರಣೆಯಲ್ಲಿ ಆಗಿರುವ ಭಾರೀ ಲೋಪ ಸರಿಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಸೋಮವಾರ ತಹಶೀಲ್ದಾರ್ ದತ್ತಾತ್ರೇಯ ಜೆ.ಗಾದಾ ಅವರಿಗೆ ಮನವಿ ಸಲ್ಲಿಸಲಾಯಿತು.
ಕೆಲ ರೈತರ ಖಾತೆಗಳಿಗೆ ಎರಡೆರಡು ಬಾರಿ ಮತ್ತು ಇನ್ನೂ ಕೆಲವರಿಗೆ ದುಪ್ಪಟ್ಟು ಹಣ ಬಂದರೆ ಅನೇಕರಿಗೆ ಹಣ ಹಂಚಿಕೆ ಮಾಡಿಲ್ಲ. ಇಂತಹ ತಪ್ಪು ಯಾರಿಂದ ಆಗಿದೆ. ಏಕೆ ಆಗಿದೆ ತಿಳಿಯುತ್ತಿಲ್ಲ. ಅತಿವೃಷ್ಟಿಯಿಂದ ತಾಲ್ಲೂಕಿನಲ್ಲಿ ಸಂಪೂರ್ಣ ಬೆಳೆ ಹಾನಿ ಆಗಿದೆ. ತೊಗರಿ ಬರಡಾಗಿ ನಿಂತಿದೆ. ಇತರೆ ಬೆಳೆಗಳು ಸಹ ಒಣಗಿ ನಿಂತಿವೆ. ಆದ್ದರಿಂದ ತಾರತಮ್ಯ ಮಾಡದೇ ಎಲ್ಲರಿಗೂ ಪರಿಹಾರ ಒದಗಿಸಬೇಕು. ಈ ಸಮಸ್ಯೆ ತಕ್ಷಣದಲ್ಲಿ ಬಗೆಹರಿಸಬೇಕು’ ಎಂದು ಒತ್ತಾಯಿಸಲಾಯಿತು.
‘ಬೆಳೆ ವಿಮೆ ಕಂತನ್ನು ಎಲ್ಲ ರೈತರು ಪಾವತಿಸಿದ್ದು, ಎಲ್ಲರಿಗೂ ವಿಮೆ ಹಣ ಸಿಗಬೇಕು. ಸಕ್ಕರೆ ಕಾರ್ಖಾನೆಗಳ ಷೇರುದಾರರ ಕಬ್ಬು ನಿಗದಿತ ಸಮಯಕ್ಕೆ ಕಟಾವು ಮಾಡಿಕೊಂಡು ಕಾರ್ಖಾನೆಗೆ ಸಾಗಿಸಲು ಸೂಚಿಸಬೇಕು. ತೋಟದ ಹೊಲಗಳಿಗೆ ರಾತ್ರಿ ಸಮಯದಲ್ಲಿ ಶುಲ್ಕರಹಿತವಾಗಿ ಸಿಂಗಲ್ ಫೇಸ್ ವಿದ್ಯುತ್ ಸರಬರಾಜು ಮಾಡಬೇಕು’ ಎಂದು ಆಗ್ರಹಿಸಲಾಯಿತು.
ಸಂಘದ ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ ಜಮಖಂಡಿ, ತಾಲ್ಲೂಕು ಅಧ್ಯಕ್ಷ ಸುಭಾಷ ರಗಟೆ, ಪ್ರಧಾನ ಕಾರ್ಯದರ್ಶಿ ರೇವಣಸಿದ್ದಪ್ಪ ಯರಬಾಗ, ಶಿವಶರಣಪ್ಪ ಪಾಟೀಲ ಅಟ್ಟೂರ, ಶಾಂತವಿಜಯ ಪಾಟೀಲ ಜಾಫರವಾಡಿ, ಮಡಿವಾಳಪ್ಪ ಪಾಟೀಲ ಸಸ್ತಾಪುರ, ಜಯಪ್ರಕಾಶ ಸದಾನಂದೆ ಬೆಟಬಾಲ್ಕುಂದಾ, ಸಿದ್ರಾಮಪ್ಪ ಬಾಲಕುಂದೆ, ವೆಂಕಟ ದೇಶಪಾಂಡೆ, ವಾಲ್ಮೀಕಿ ಅರ್ಜುನ, ಪೀರಪ್ಪ ತುಕ್ಕಪ್ಪ, ಇಸಾಮೊದ್ದೀನ್ ಪಿಂಜಾರೆ, ಭೀಮಶಾ ಕೋಪ್ಟೆ, ಬಂಡೆಪ್ಪ ಉಸ್ತೂರೆ, ತಾನಾಜಿ ಗುಂಡಪ್ಪ, ಅಮೃತಪ್ಪ ಹಣಂತಪ್ಪ, ಶರಣಪ್ಪ ಲಕ್ಷ್ಮಣ, ಮನೋಹರ ಪಾಟೀಲ, ಮಡಿವಾಳಪ್ಪ ಮಹಾಜನ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.