ADVERTISEMENT

ರೈಲು ನಿಲ್ದಾಣದಲ್ಲಿ ರೈತರ ಧರಣಿ

ತಡೆಗೋಡೆ ನಿರ್ಮಿಸಿ ಪ್ರತಿಭಟನಾಕಾರರನ್ನು ತಡೆದ ರೈಲ್ವೆ ಪೊಲೀಸರು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 14:55 IST
Last Updated 18 ಫೆಬ್ರುವರಿ 2021, 14:55 IST
ಬೀದರ್‌ನ ರೈಲು ನಿಲ್ದಾಣದ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಗುರುವಾರ ಧರಣಿ ನಡೆಸಿದರು
ಬೀದರ್‌ನ ರೈಲು ನಿಲ್ದಾಣದ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಗುರುವಾರ ಧರಣಿ ನಡೆಸಿದರು   

ಬೀದರ್‌: ಕೇಂದ್ರ ಸರ್ಕಾರ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಇಲ್ಲಿಯ ರೈಲು ನಿಲ್ದಾಣದ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ನಿಲ್ದಾಣದೊಳಗೆ ತೆರಳಿ ನಾಂದೇಡ್‌–ಬೆಂಗಳೂರು ರೈಲು ತಡೆಯಲು ಯತ್ನಿಸಿದಾಗ ರೈಲ್ವೆ ಪೊಲೀಸರು ತಡೆಗೋಡೆ ನಿರ್ಮಿಸಿ ರೈತರನ್ನು ತಡೆದರು.

ಪ್ರತಿಭಟನೆ ನಡೆಸಲು ರೈತರು ಸ್ಥಳಕ್ಕೆ ಬರುವ ಮೊದಲೇ ಪೊಲೀಸರು ರೈಲು ನಿಲ್ದಾಣದ ಪ್ರವೇಶ ದ್ವಾರದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಮಾರ್ಗಗಳನ್ನು ಬಂದ್‌ ಮಾಡಿದ್ದರು. ಕೆಲ ಕಡೆ ಹಗ್ಗಗಳನ್ನು ಕಟ್ಟಿದ್ದರು. ರೈಲು ನಿಲ್ದಾಣ ಹಾಗೂ ಪ್ಲಾಟ್‌ ಫಾರಂನಲ್ಲಿ ಪೊಲೀಸ್‌ ಸರ್ಪಗಾವಲು ಹಾಕಲಾಗಿತ್ತು.

ರೈತರು ರೈಲು ನಿಲ್ದಾಣದೊಳಗೆ ಪ್ರತಿಭಟನೆ ನಡೆಸಲು ಮುಂದಾದಾಗ ರೈಲ್ವೆ, ನ್ಯೂಟೌನ್ ಹಾಗೂ ಮಾರ್ಕೆಟ್‌ ಪೊಲೀಸರು ಅವಕಾಶ ಕೊಡಲಿಲ್ಲ. ರೈಲ್ವೆ ಹಳಿಯ ಮೇಲೆ ಇಳಿದರೆ ಬಂಧಿಸುವುದು ಅನಿವಾರ್ಯವಾಗಲಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗದಂತೆ ಸಾಂಕೇತಿಕ ಪ್ರತಿಭಟನೆ ನಡೆಸಬೇಕು ಎಂದು ಪೊಲೀಸರು ಮನವಿ ಮಾಡಿದರೂ ಪ್ರತಿಭಟನಾಕಾರರು ಒ‍ಪ್ಪಲಿಲ್ಲ.

ADVERTISEMENT

ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡದಿದ್ದಾಗ ರೈತರು ಹಾಗೂ ಪೊಲೀಸ್‌ ಅಧಿಕಾರಿಗಳ ಮಧ್ಯೆ ಮಾತಿಕ ಚಕಮಕಿ ನಡೆಯಿತು. ಡಿವೈಎಸ್‌ಪಿ ಬಸವೇಶ್ವರ ಹೀರಾ ರೈತ ಮುಖಂಡರನ್ನು ಕರೆದು ತಿಳಿವಳಿಕೆ ನೀಡಲು ಪ್ರಯತ್ನಿಸಿದರೂ ಪ್ರಯೋಜನ ಆಗಲಿಲ್ಲ. ನಿಲ್ದಾಣದ ಒಳಗಡೆಯೇ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ
ಪಟ್ಟುಹಿಡಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಗೌರವಾಧ್ಯಕ್ಷ ಶ್ರೀಮಂತ ಬಿರಾದಾರ ಮಾತನಾಡಿ, ‘ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ರೈತರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರಕುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರೈತ ಮುಖಂಡರು ಹಾಗೂ ಕೃಷಿ ತಜ್ಞರೊಂದಿಗೆ ಸಮಾಲೋಚನೆ ನಡೆಸದೆ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಜಾರಿ ಮಾಡಲು ಹೊರಟಿದೆ. ಅನ್ನದಾತನ ಪರವಾಗಿ ನಿಲ್ಲಬೇಕಾದ ಕೇಂದ್ರ ಸರ್ಕಾರ ಬಂಡವಾಳ ಶಾಹಿಗಳ ಪರವಾಗಿ ಕೆಲಸ ಮಾಡುತ್ತಿದೆ’ ಎಂದು ಆರೋಪಿಸಿದರು.

‘ರೈತರ ಹಿತದೃಷ್ಟಿಯಿಂದ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು. ಪೊಲೀಸ್‌ ದಬ್ಬಾಳಿಕೆಯ ಮೂಲಕ ರೈತರ ಹೋರಾಟ ಹತ್ತಿಕ್ಕಕಲಾಗದು. ನ್ಯಾಯ ಸಿಗುವವರೆಗೆ ರೈತರು ಹೋರಾಟ ನಡೆಸಲಿದ್ದಾರೆ’ ಎಂದು ಹೇಳಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ ಮಾತನಾಡಿ, ‘ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ರಾಷ್ಟ್ರವ್ಯಾಪಿ ಹೋರಾಟ ನಡೆಸುತ್ತಿದ್ದಾರೆ. ರೈತರು ಎದುರಿಸುತ್ತಿರುವ ಸಂಕಷ್ಟಗಳನ್ನು ಸರ್ಕಾರ ಮೊದಲು ಅರ್ಥ ಮಾಡಿಕೊಳ್ಳಬೇಕು. ಕೃಷಿ ತಿದ್ದುಪಡಿ ಕಾಯ್ದೆಗಳನ್ನು ತಕ್ಷಣ ವಾಪಸ್‌ ಪಡೆಯಬೇಕು’ ಎಂದು ಒತ್ತಾಯಿಸಿದರು.

ನಾಂದೇಡ್‌–ಬೆಂಗಳೂರು ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆಯೇ ರೈತರು ಬ್ಯಾನರ್‌ಗಳನ್ನು ಹಿಡಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ನಿಲ್ದಾಣದೊಳಗೆ ಪ್ರವೇಶಿಸಿದರು. ಕೆಲವರು ರೈಲ್ವೆ ಎಂಜಿನ್‌ ಮುಂದೆ ನಿಂತು ರೈಲು ತಡೆಯಲು ಪ್ರಯತ್ನಿಸಿದಾಗ ರೈಲ್ವೆ ಪೊಲೀಸರು ಸರ್ಪಗಾವಲು ಹಾಕಿ ಪ್ರತಿಭಟನಾಕಾರರನ್ನು ತಡೆದರು. ಪ್ರಯಾಣಿಕರನ್ನು ಇಳಿಸಿದ ಸ್ವಲ್ಪ ಹೊತ್ತಿನಲ್ಲೇ ರೈಲು ಮುಂದೆ ಪ್ರಯಾಣ ಬೆಳೆಸಿತು.

ಈ ಸಂದರ್ಭದಲ್ಲಿ ಪೊಲೀಸ್‌ ಅಧಿಕಾರಿಯ ಮೇಲೆ ಹರಿಹಾಯ್ದ ರೈತ ಮುಖಂಡರೊಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಾಹನದಲ್ಲಿ ಕೂರಿಸಿ ಠಾಣೆಗೆ ಕರೆದೊಯ್ದರು. ತಪ್ಪೊಪ್ಪಿಗೆ ಬರೆಸಿಕೊಂಡು ಬಿಡುಗಡೆ ಮಾಡಿದರು.

ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ, ಕಾಶಪ್ಪ ಶೇರಿಕಾರ, ಮಲ್ಲಿಕಾರ್ಜುನ ಬಿರಾದಾರ, ರಾಜಕುಮಾರ ಪಂಚಾಳ, ಚಂದ್ರಶೇಖರ ಜಮಖಂಡಿ, ಸಿದ್ದಣ್ಣ ಭೂಶೆಟ್ಟಿ, ಪ್ರಕಾಶ ಬಾವಗೆ, ಸತೀಶ ನನ್ನೂರೆ, ನಾಗಯ್ಯ ಸ್ವಾಮಿ ಹಾಗೂ ಪ್ರವೀಣ ಕುಲಕರ್ಣಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.