ADVERTISEMENT

ಸರ್ಕಾರ ಘೋಷಿಸಿದ ಕಬ್ಬಿನ ದರ ಬೀದರ್ ಜಿಲ್ಲೆಯಲ್ಲಿ ಜಾರಿಯಾಗಲಿ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 6:10 IST
Last Updated 13 ನವೆಂಬರ್ 2025, 6:10 IST
ಹುಮನಾಬಾದ್ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ ರೈತರು
ಹುಮನಾಬಾದ್ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ ರೈತರು   

ಹುಮನಾಬಾದ್: ಸರ್ಕಾರ ಘೋಷಿಸಿದ ಪ್ರತಿ ಟನ್ ಕಬ್ಬಿಗೆ ₹ 3,200 ದರ ಬೀದರ್ ಜಿಲ್ಲೆಯಲ್ಲಿ ಜಾರಿಗೆ ತರುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ, ಬೀದರ್ ಜಿಲ್ಲಾ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ರೈತ ಸಂಘಟನೆಗಳ ಒಕ್ಕೂಟ, ಸಿಪಿಎಂ, ವಿವಿಧ ಕನ್ನಡಪರ ಸಂಘಟನೆಗಳು ಸೇರಿದಂತೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರದಿಂದ ಆರಂಭಗೊಂಡ ಪ್ರತಿಭಟನೆಯಲ್ಲಿ ಹುಮನಾಬಾದ್‌ ತಾಲ್ಲೂಕು ಸೇರಿ, ಚಿಟಗುಪ್ಪ, ಬಸವಕಲ್ಯಾಣ ತಾಲ್ಲೂಕಿನ ರೈತರು ಎತ್ತಿನ ಬಂಡಿ, ಟ್ರ್ಯಾಕ್ಟರ್‌ಗಳೊಂದಿಗೆ ಭಾಗವಹಿಸಿದ್ದರು.

ಪ್ರತಿಭಟನಾ ಮೆರವಣಿಗೆಯು ಎಪಿಎಂಸಿ ಗೇಟ್, ಬಸ್ ನಿಲ್ದಾಣ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ಮುಖಾಂತರ ನೇರವಾಗಿ ಹಳೆಯ ತಹಶೀಲ್ದಾರ್‌ ಕಚೇರಿವರೆಗೆ ನಡೆಯಿತು.

ADVERTISEMENT

ಭಾರಿ ಪ್ರಮಾಣದಲ್ಲಿ ಜಮಾವಣೆಗೊಂಡ ರೈತರು ರಾಮ್ ಮತ್ತು ರಾಜ್ ಕಾಲೇಜು ಹತ್ತಿರದ ರಾಷ್ಟ್ರೀಯ ಹೆದ್ದಾರಿ ತಡೆಯಲು ಯತ್ನಿಸಿದಾಗ ಪೊಲೀಸರು ಇಲ್ಲಿಯ ಎಸ್‌ಬಿಐ ಬ್ಯಾಂಕ್ ಹತ್ತಿರದಲ್ಲಿ ಅಳವಡಿಸಿದ್ದ ಬ್ಯಾರಿಕೇಡ್ ಎತ್ತಿನ ಬಂಡೆ ಮತ್ತು ಟ್ರ್ಯಾಕ್ಟರ್‌ ಮೂಲಕ ತಳ್ಳಿ ಮುಂದೆ ಸಾಗಲು ಪ್ರಯತ್ನಿಸಿದರು.

ಈ ಮಧ್ಯೆ ಪೊಲೀಸರು ಮತ್ತು ರೈತರ ನಡುವೆ ವಾಗ್ವಾದ ನಡೆಯಿತು. ನಂತರ ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಬೊಬ್ಬೆ ಹೊಡೆದು ಧಿಕ್ಕಾರ ಕೂಗಿದರು.

ಈ ಸಂದರ್ಭದಲ್ಲಿ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ, ಮಾಜಿ ಸಚಿವ ರಾಜಶೇಖರ ಪಾಟೀಲ, ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ, ಬಿ.ಎಸ್.ಎಸ್.ಕೆ. ಅಧ್ಯಕ್ಷ ಸುಭಾಷ್ ಕಲ್ಲೂರ್, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ, ಅಭಿಷೇಕ್ ಪಾಟೀಲ, ವೀರಣ್ಣ ಪಾಟೀಲ, ಬಸವರಾಜ ಆರ್ಯ, ಸಂತೋಷ ಪಾಟೀಲ, ಸಿದ್ರಾಮಪ್ಪ ಆಣದೂರೆ, ದಯಾನಂದ ಸ್ವಾಮಿ, ಗುಂಡುರೆಡ್ಡಿ, ಬ್ಯಾಂಕ್‌ರೆಡ್ಡಿ, ಸತೀಶ ನನ್ನೂರೆ, ಕರಬಸಪ್ಪ ಹುಡಗಿ, ಖಾಜಿಂ ಅಲಿ, ಅನಿಲ ಪಸರ್ಗಿ, ಓಂಕಾರ ತುಂಬಾ, ವೀರೇಶ್ ಸೀಗಿ ಸೇರಿದಂತೆ ಇತರರು ಇದ್ದರು.‌

ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ ಅವರನ್ನು ಪೊಲೀಸರು ವಶಕ್ಕೆ ಪಡೆದಿರುವುದು

175ಕ್ಕೂ ಹೆಚ್ಚು ರೈತರ ವಶಕ್ಕೆ ಪಡೆದು ಬಳಿಕ ಬಿಡುಗಡೆ

ಹುಮನಾಬಾದ್ ಎಸ್‌ಬಿಐ ಬ್ಯಾಂಕ್ ಹತ್ತಿರದಲ್ಲಿ ಪೊಲೀಸರು ಅಳವಡಿಸಿದ ಬ್ಯಾರಿಕೇಡ್ ಹತ್ತಿ ರಾಷ್ಟ್ರೀಯ ಹೆದ್ದಾರಿ ತಡೆಯಲು ಮುಂದಾಗಿದ್ದ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ ಸೇರಿದಂತೆ ಸುಮಾರು 175ಕ್ಕೂ ಅಧಿಕ ಜನರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು. ಈ ಮಧ್ಯೆ ಕೆಲವರು ರಾಷ್ಟೀಯ ಹೆದ್ದಾರಿಯ ತಡೆಯಲು ಯತ್ನಿಸುತ್ತಿದ್ದವರನ್ನೂ ಪೊಲೀಸರು ವಶಕ್ಕೆ ಪಡೆದರು. ಜಿಲ್ಲಾಧಿಕಾರಿಯಿಂದ ಮನವಿ ಸ್ವೀಕಾರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರ ಮನವಿ ಪತ್ರ ಸ್ವೀಕರಿಸಿದರು. ರೈತರು ₹3200 ದರ ನೀಡಲೇ ಬೇಕು ಎಂದು ಆಗ್ರಹಿಸಿದರು. ನಿಮ್ಮ ಬೇಡಿಕೆಯಂತೆ ಕಾರ್ಖಾನೆ ಅವರೊಂದಿಗೆ ಚರ್ಚೆ ಮಾಡುತ್ತೇನೆ.‌ ಅಲ್ಲದೇ ಕಳೆದ ಬಾರಿ ಘೋಷಿಸಿದಂತೆ ಉಳಿದ ಕಬ್ಬಿನ ಬಾಕಿ ಹಣ ನೀಡುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

‌ಪೊಲೀಸ ಬಿಗಿ ಬಂದೋಬಸ್ತ್

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟೆ ನೇತೃತ್ವದಲ್ಲಿ ರೈತರ ಪ್ರತಿಭಟನೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗಗಳು ಬ್ಯಾರಿಕೇಡ್ ಹಾಕಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ವಾಹನಗಳಿಗೆ ಪಟ್ಟಣದ ಪ್ರವೇಶಕ್ಕೆ ಸುಮಾರು ಎರಡು ಗಂಟೆಗೂ ಅಧಿಕ ಕಾಲ ತಡೆಯಲಾಗಿತ್ತು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ ಡಿವೈಎಸ್ಪಿಗಳಾದ ಮಡೋಳಪ್ಪ ಶಿವಾನಂದ್ ಪಾವಡಶಟ್ಟಿ ಸಿಪಿಐ ಗುರು ಪಾಟೀಲ ಶ್ರೀನಿವಾಸ ಅಲ್ಲಾಪುರೆ ಅಲಿಸಾಬ್ ಪಿಎಸ್ಐ ಸಿಬ್ಬಂದಿ ಸೇರಿದಂತೆ ಸುಮಾರು 400ಕ್ಕೂ ಹೆಚ್ಚು ಪೊಲೀಸರು ಬಂದೋಬಸ್ತ್‌ನಲ್ಲಿ ತೊಡಗಿದ್ದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.