ADVERTISEMENT

ಸಂಕಷ್ಟದಲ್ಲಿ ಟೊಮೆಟೊ ಬೆಳೆದ ರೈತರು

ಸರ್ಕಾರದಿಂದ ಪರಿಹಾರದ ನಿರೀಕ್ಷೆಯಲ್ಲಿ ಬೆಳೆಗಾರರು

​ಪ್ರಜಾವಾಣಿ ವಾರ್ತೆ
Published 10 ಮೇ 2021, 5:51 IST
Last Updated 10 ಮೇ 2021, 5:51 IST
ಚಿಟಗುಪ್ಪ ತಾಲ್ಲೂಕಿನ ನಿರ್ಣಾ ವಾಡಿ ಗ್ರಾಮದ ಲಿಂಗರಾಜ್‌ ನಿಂಬೂರೆ ದಯಾನಂದ ಪಾಟೀಲ ಅವರ ಹೊಲದಲ್ಲಿ ಬೆಳೆದ ಟೊಮೆಟೊ
ಚಿಟಗುಪ್ಪ ತಾಲ್ಲೂಕಿನ ನಿರ್ಣಾ ವಾಡಿ ಗ್ರಾಮದ ಲಿಂಗರಾಜ್‌ ನಿಂಬೂರೆ ದಯಾನಂದ ಪಾಟೀಲ ಅವರ ಹೊಲದಲ್ಲಿ ಬೆಳೆದ ಟೊಮೆಟೊ   

ಚಿಟಗುಪ್ಪ: ರಾಜ್ಯದಾದ್ಯಂತ ಕೋವಿಡ್‌ ಕಾರಣ ಕರ್ಫ್ಯೂ ಅಥವಾ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ರೈತರು ಬೆಳೆದ ಟೊಮೆಟೊ ಬೆಳೆಗೆ ಮಾರುಕಟ್ಟೆ ಇಲ್ಲದಕ್ಕೆ ಬೆಲೆ ಕುಸಿದಿದೆ. ಇದರಿಂದ ಹೊಲದಲ್ಲಿರುವ ಬೆಳೆಯನ್ನು ಮಾರಾಟ ಮಾಡಲಾಗದೇ ನಷ್ಟ ಅನುಭವಿಸುತ್ತಿದ್ದಾರೆ.

ತಾಲ್ಲೂಕಿನ ನಿರ್ಣಾ ವಾಡಿ ಗ್ರಾಮದ ಯುವ ರೈತ ಲಿಂಗರಾಜ್‌ ನಿಂಬೂರೆ ಅವರು ತಮ್ಮ ಎರಡು ಎಕರೆ ಜಮೀನಿನಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ಟೊಮೆಟೊ ಬೆಳೆದಿದ್ದು, ಲಾಕ್‌ಡೌನ್‌ನಿಂದ ಬೆಲೆ ಕುಸಿದಿರುವುದರಿಂದ ಸುಮಾರು ₹3 ಲಕ್ಷ ನಷ್ಟ ಅನುಭವಿಸುವಂತಾಗಿದೆ.

‘ತಾಲ್ಲೂಕು, ಜಿಲ್ಲಾ ಕೇಂದ್ರಗಳಿಗೆ ಪಕ್ಕದ ತೆಲಂಗಾಣ ರಾಜ್ಯದ ಜಹೀರಾಬಾದ್‌ ಪಟ್ಟಣಕ್ಕೆ ಟೊಮೆಟೊ ನಿತ್ಯ ಮಾರಾಟ ಮಾಡಲು ತೆಗೆದುಕೊಂಡು ಹೋಗಲಾಗುತ್ತಿತ್ತು. ಸದ್ಯದ ಲಾಕ್‌ಡೌನ್‌ನಿಂದ ಮಾರುಕಟ್ಟೆ ಇಲ್ಲದಕ್ಕೆ ತರಕಾರಿ ವ್ಯಾಪಾರಿಗಳು ಖರೀದಿ ಮಾಡಲು ಮುಂದೆ ಬರುತ್ತಿಲ್ಲ. ಇದರಿಂದ ಬೆಳೆ ತೋಟದಲ್ಲಿಯೇ ಕೊಳೆತು ಹಾಳಾಗುತ್ತಿದೆ’ ಎಂದು ರೈತ ನಿಂಗರಾಜ್‌ ನಿಂಬೂರ್‌ ತಿಳಿಸುತ್ತಾರೆ.

ADVERTISEMENT

‘ಕೊವೀಡ್‌ ಸಂದಿಗ್ಧ ಪರಿಸ್ಥಿತಿಯಲ್ಲಿ ಟೊಮೆಟೊ ತೆಗೆದವರ ಕೃಷಿ ಕೂಲಿ ಕಾರ್ಮಿಕರಿಗೆ ಕೊಡುವ ಕೂಲಿ ಹಣ, ವಾಹನದ ಬಾಡಿಗೆಯೂ ಟೊಮೆಟೊ ಮಾರಾಟದಿಂದ ಬರುತ್ತಿಲ್ಲ. ಟೊಮೆಟೊ ಹಣ್ಣು ಸಂಗ್ರಹಿಸಿಡಲು ಕೂಡ ಸಾಧ್ಯವಿಲ್ಲ. ಹೀಗಾಗಿ ಬಾರಿ ನಷ್ಟ ಅನುಭವಿಸುವಂತಾಗಿದೆ’ ಎಂದು ರೈತ ಚಂದ್ರಣ್ಣ ನುಡಿಯುತ್ತಾರೆ.

‘ಪ್ರತಿ ವರ್ಷ ಬೇಸಿಗೆಯಲ್ಲಿ ಮದುವೆ, ಶುಭ ಸಮಾರಂಭ, ಸರ್ಕಾರಿ, ಖಾಸಗಿ ಸಭೆ, ಸಮಾರಂಭಗಳು ನಡೆಯುತ್ತಿದ್ದವು. ಈಗ ಇವುಗಳಿಗೆ ನಿರ್ಬಂಧ ಇರುವುದರಿಂದ ಬೇಡಿಕೆ ಇಲ್ಲವಾಗಿ ರೈತರು ನಷ್ಟ ಅನುಭವಿಸುತ್ತಿ ದ್ದಾರೆ’ ಎಂದು ಪುರಸಭೆ ಸದಸ್ಯ ದಿಲೀಪ ಕುಮಾರ ಬಗ್ದಲಕರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.