ADVERTISEMENT

ಬೀದರ್ ಪ್ರತಿಭೆ ಕಮರ್ಷಿಯಲ್ ಪೈಲಟ್

​ಪ್ರಜಾವಾಣಿ ವಾರ್ತೆ
Published 9 ಮೇ 2019, 15:38 IST
Last Updated 9 ಮೇ 2019, 15:38 IST
ಕಮರ್ಷಿಯಲ್ ಪೈಲಟ್ ಆಗಿರುವ ಬೀದರ್‌ನ ಹೃಷಿಕೇಶ ವಿಜಯಕುಮಾರ ಪಾಟೀಲ (ಎಡದಿಂದ ಮೊದಲನೆಯವರು)
ಕಮರ್ಷಿಯಲ್ ಪೈಲಟ್ ಆಗಿರುವ ಬೀದರ್‌ನ ಹೃಷಿಕೇಶ ವಿಜಯಕುಮಾರ ಪಾಟೀಲ (ಎಡದಿಂದ ಮೊದಲನೆಯವರು)   

ಬೀದರ್: ಇಲ್ಲಿಯ ಹೃಷಿಕೇಶ ಪಾಟೀಲ ಜಿಲ್ಲೆಯ ಮೊದಲ ಕಮರ್ಷಿಯಲ್ ಪೈಲಟ್ ಆಗಿ ಹೊರ ಹೊಮ್ಮಿದ್ದಾರೆ.

ಬೀದರ್‌ನವರು ಈಗ ಯಾವ ಕ್ಷೇತ್ರದಲ್ಲೂ ಕಡಿಮೆ ಇಲ್ಲ ಎನ್ನುವುದನ್ನು ಅವರು ನಿರೂಪಿಸಿದ್ದಾರೆ. ಹೃಷಿಕೇಶ, ಈಗಾಗಲೇ ಸ್ಟಾರ್ ಏರ್‌ನಲ್ಲಿ ಸಹ ಪೈಲಟ್/ಫಸ್ಟ್ ಆಫೀಸರ್ ಆಗಿ ವಿಮಾನ ಹಾರಾಟ ಶುರು ಮಾಡಿದ್ದಾರೆ.

ಮೂಲತಃ ಔರಾದ್ ತಾಲ್ಲೂಕಿನ ಹಕ್ಕ್ಯಾಳ ಗ್ರಾಮದವರಾದ ಅವರು, ದಿ ಹಿಂದೂ ನಿವೃತ್ತ ವಿಶೇಷ ಪ್ರತಿನಿಧಿ ವಿಜಯಕುಮಾರ ಪಾಟೀಲ ಅವರ ಪುತ್ರ ಹಾಗೂ ದಮನ್ ಸ್ಥಳೀಯ ಹಿಂದಿ ದಿನಪತ್ರಿಕೆಯ ಸಂಪಾದಕರಾಗಿದ್ದ ವಿಶ್ವನಾಥ ಪಾಟೀಲ ಹಕ್ಕ್ಯಾಳ ಅವರ ಮೊಮ್ಮಗ ಆಗಿದ್ದಾರೆ.

ADVERTISEMENT

ಬೀದರ್‌ನ ಏರ್‌ಫೋರ್ಸ್ ಶಾಲೆಯಲ್ಲಿ ಎಲ್‌ಕೆಜಿ, ಕಲಬುರ್ಗಿಯ ಶರಣಬಸವೇಶ್ವರ ಶಾಲೆಯಲ್ಲಿ ಯುಕೆಜಿ, ಮೈಸೂರಿನ ಕೇಂದ್ರೀಯ ವಿದ್ಯಾಲಯದಲ್ಲಿ 1 ರಿಂದ 5, ಬೆಳಗಾವಿಯ ಕೇಂದ್ರೀಯ ವಿದ್ಯಾಲಯದಲ್ಲಿ 6 ರಿಂದ 10ನೇ, ಕೆಎಲ್‍ಇ ಸಂಸ್ಥೆಯ ಆರ್.ಎಲ್. ಸೈನ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ ಪದವಿಪೂರ್ವ ಶಿಕ್ಷಣ ಪೂರೈಸಿದ್ದಾರೆ. ಅಮೆರಿಕದಲ್ಲಿ 18 ತಿಂಗಳ ಪೈಲಟ್ ತರಬೇತಿ ಪೂರ್ಣಗೊಳಿಸಿದ್ದಾರೆ. ದಕ್ಷಿಣ ಆಫ್ರಿಕಾ ಹಾಗೂ ಅಬುದಾಬಿಯಲ್ಲೂ ತರಬೇತಿ ಪಡೆದಿದ್ದಾರೆ. ಸುಮಾರು 400 ಗಂಟೆಗಳ ವಿಮಾನ ಹಾರಾಟದ ಅನುಭವ ಹೊಂದಿದ್ದಾರೆ.

2009 ರಲ್ಲಿ ಯು.ಎಸ್. ಸರ್ಕಾರದ ಫೆಡರಲ್ ಏವಿಯೇಶನ್ ಅಡ್ಮಿನಿಸ್ಟ್ರೇಶನ್‌ನಿಂದ ಕಮರ್ಷಿಯಲ್ ಪೈಲಟ್ ಪರವಾನಗಿ ಪಡೆದಿದ್ದಾರೆ. 2013 ರಲ್ಲಿ ಭಾರತೀಯ ವಿಮಾನಯಾನ ಸಚಿವಾಲಯ ಅಧೀನದ ನಾಗರಿಕ ವಿಮಾನಯಾನ ಮಹಾ ನಿರ್ದೇಶಕರ ಕಚೇರಿಯಿಂದ ವಾಣಿಜ್ಯ ಪೈಲಟ್ ಪರವಾನಗಿ ಪಡೆದಿದ್ದಾರೆ.

ಸಿವಿಲ್ ಎವಿಯೇಶನ್‌ನಲ್ಲಿ ಎಂ.ಬಿ.ಎ. ಪದವಿ ಪಡೆದಿರುವ ಹೃಷಿಕೇಶ, ಸಂಗೀತ ವಿಶಾರದದಲ್ಲಿ ತಬಲಾ ವಾದನದಲ್ಲಿ ಪ್ರಾವೀಣ್ಯತೆ ಹೊಂದಿದ್ದಾರೆ. ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಪ್ರಶಸ್ತಿ ಪುರಸ್ಕೃತರೂ ಆಗಿದ್ದಾರೆ.

‘ಆತ್ಮವಿಶ್ವಾಸದೊಂದಿಗೆ ಕಠಿಣ ಪರಿಶ್ರಮ ವಹಿಸಿದರೆ ಜೀವನದಲ್ಲಿ ಎಂತಹ ಗುರಿಯನ್ನು ಬೇಕಾದರೂ ತಲುಪಬಹುದು’ ಎಂದು ಹೇಳುತ್ತಾರೆ ಹೃಷಿಕೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.